Pakistan News: ಪಾಕಿಸ್ತಾನ ಸಂಸತ್ ವಿಸರ್ಜನೆ, ಮುಂದಿನ ಕಥೆ ಏನು?
ಪಾಕಿಸ್ತಾನ ಸಮಸ್ಯೆಗಳ ಸಾಗರದಲ್ಲಿ ನಲುಗಿ ಹೋಗಿದೆ, ಇಷ್ಟಾದರೂ ಪಾಕ್ ತನ್ನ ಭಾರತ ವಿರೋಧಿ ನಿಲುವು ಬಿಟ್ಟಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ದಿವಾಳಿಯಾಗಿ, ಕಂಡ ಕಂಡ ದೇಶಗಳ ಎದುರು ಸಾಲಕ್ಕೆ ಕೈಚಾಚುವ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲೇ ಪಾಕಿಸ್ತಾನ ಸಂಸತ್ ವಿಸರ್ಜನೆಗೆ ಮಹತ್ವದ ಘೋಷಣೆ ಮೊಳಗಿದೆ. ಹಾಗಾದರೆ ಪಾಕಿಸ್ತಾನ ಚುನಾವಣೆ ಯಾವಾಗ ನಡೆಯುತ್ತೆ? ಬನ್ನಿ ತಿಳಿಯೋಣ.
ನಿನ್ನೆ ತಡರಾತ್ರಿ ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂಸತ್ ವಿಸರ್ಜನೆಗಾಗಿ ಅಧಿಸೂಚನೆ ಕಳುಹಿಸಿದ್ದಾರೆ. ಹೀಗಾಗಿ ಪಾಕ್‌ನ ಸಂಸತ್ ವಿಸರ್ಜನೆಯಾಗಿದ್ದು, 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಆಗಸ್ಟ್ 12ಕ್ಕೆ ಪಾಕಿಸ್ತಾನದ ಹಾಲಿ ಸರ್ಕಾರದ ಅವಧಿ ಮುಗಿಯುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಂಸತ್ ವಿಸರ್ಜನೆ ಕುರಿತು ಪಾಕಿಸ್ತಾನ ಪ್ರಧಾನಿ ಮಹತ್ವದ ಮಾತುಕತೆ ನಡೆಸಿದ್ದರು. ಹೀಗೆ ಮಾತುಕತೆ ನಡೆದ ಬಳಿಕ ನಿನ್ನೆ ತಡರಾತ್ರಿ ದಿಢೀರ್ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಅಲವಿಗೆ, ಸಂಸತ್ ವಿಸರ್ಜನೆಗೆ ಶಿಫಾರಸು ಮಾಡಿದ್ದಾರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್.

ಪಾಕಿಸ್ತಾನದ ಮುಂದಿನ ಕಥೆ ಏನು?
ಭಾರತದ ನೆರೆ ದೇಶದಲ್ಲಿ ರಾಜಕೀಯ ಅಸ್ತಿರತೆ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿಯೇ ಪಾಕಿಸ್ತಾನದಲ್ಲೂ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಅದರೆ ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಗೊಳ್ಳಲಿದ್ದು, ಅವಧಿಗೆ ಮುನ್ನ ಅಂದರೆ ಆಗಸ್ಟ್ 9ರಂದು ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದಾರೆ ಪಾಕ್ ಪ್ರಧಾನಿ. ಪಾಕಿಸ್ತಾನದಲ್ಲಿ ಹಾಲಿ ಸರ್ಕಾರದ ಅಧಿಕಾರದ ಅವಧಿ ಮುಗಿಯುತ್ತಿರುವ ಕಾರಣ, ಪಾಕ್ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು. ನಂತರ ಮಧ್ಯಂತರ ಸರ್ಕಾರವು ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.
ಇದೀಗ ಪಾಕಿಸ್ತಾನದ ಹಾಲಿ ಸರ್ಕಾರ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗುತ್ತದೆ. ಇದಕ್ಕಾಗಿ ಆಡಳಿತ ಪಕ್ಷ & ವಿರೋಧ ಪಕ್ಷದ ನಾಯಕರು ಜೊತೆಯಾಗಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಅನ್ವಯ ಹಂಗಾಮಿ ಪ್ರಧಾನಿ ನೇಮಕವಾಗಿ, ಪಾಕಿಸ್ತಾನದ ಅಧಿಕಾರ ನೋಡಿಕೊಳ್ಳಲಿದ್ದಾರೆ. ಅಲ್ಲದೆ ಪರಮಾಣು ಅಸ್ತ್ರದ ದೇಶದಲ್ಲಿ ಚುನಾವಣೆ ಮತ್ತಷ್ಟು ತಡವಾಗುವ ಭಯ ಇದ್ದು, ಅಕಸ್ಮಾತ್ ಚುನಾವಣೆ ತಡ ಆಗಿದ್ದೇ ಆದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಏಕೆಂದರೆ ಇದೀಗ ಇಮ್ರಾನ್ ಖಾನ್ ಜೈಲು ಸೇರಿರುವ ಕಾರಣ ಪಾಕಿಸ್ತಾನ ಕೊತ ಕೊತ ಕುದಿಯುತ್ತಿದೆ.
ಇಮ್ರಾನ್ ಖಾನ್ ಚುನಾವಣೆಗೆ ಸ್ಪರ್ಧಿಸಲ್ಲ!
ಪಾಕಿಸ್ತಾನ ಈಗಾಗಲೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ಬಳಿಕ ತಿಕ್ಕಾಟ ಜೋರಾಗಿದೆ. ಸಂಸತ್ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಂಸತ್ ವಿಸರ್ಜನೆ ಬಗ್ಗೆ ಪ್ರಧಾನಿ ಶೆಹಬಾಜ್ ಅಧ್ಯಕ್ಷ ಆರೀಫ್ ಅಲವಿಗೆ ಶಿಫಾರಸು ಮಾಡಿದ ಬಳಿಕ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಇಷ್ಟೆಲ್ಲದರ ನಡುವೆ ಪಾಕ್ ಚುನಾವಣಾ ಆಯೋಗ ಇದೀಗ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಆಂತರಿಕವಾಗಿ ಗಲಭೆ ಹಾಗೂ ಹಿಂಸಾಚಾರ ಭುಗಿಲೇಳುವ ಭಯ ಆವರಿಸಿದ್ದು, ಪಾಕಿಸ್ತಾನ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ.

ಇದು ಪಾಕಿಸ್ತಾನದ ಕಥೆ ಮತ್ತು ವ್ಯಥೆ. ಒಂದು ದೇಶವಾಗಿ ಜಾಗತಿಕ ಮಟ್ಟದಲ್ಲಿ ಪಾಕ್‌ಗೆ ಬೆಲೆಯೇ ಇಲ್ಲವಾಗಿದೆ. ಅದರಲ್ಲೂ ಪಾಕಿಸ್ತಾನದ ರಾಜಕಾರಣಿಗಳ ವರ್ತನೆ ಬಗ್ಗೆ ಟೀಕೆಯು ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಾಲಿ ಸರ್ಕಾರ ಬೇರೆ ಏನೋ ಐಡಿಯಾ ಮಾಡಿ ಅವಧಿ ಮುಗಿಯುವ ಮೊದಲೇ ಸಂಸತ್ ವಿಸರ್ಜನೆ ಮಾಡಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಎಲ್ಲಾ ಚರ್ಚೆಗೂ ಚುನಾವಣೆ ಮೂಲಕ ಉತ್ತರ ನೀಡಲು ಪಾಕಿಸ್ತಾನದ ಪ್ರಜೆಗಳು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications