ಪಾಕಿಸ್ತಾನದ ಚುನಾವಣೆಗೆ ಭಾರತದ ವೋಟಿಂಗ್ ಮೆಷಿನ್!
ಇಸ್ಲಮಾಬಾದ್, ಅ 25: ಒಂದು ಕಡೆ ಪಾಕಿಸ್ತಾನದಿಂದ ಗಡಿ ಉಲ್ಲಂಘನೆ, ಇನ್ನೊಂದೆಡೆ ಭಯೋತ್ಪಾದಕರ ನುಸುಳುವಿಕೆ, ಈ ಮಧ್ಯೆ ಪಾಕಿಸ್ತಾನದ ಚುನಾವಣಾ ಅಯೋಗಕ್ಕೆ ಭಾರತದ ಚುನಾವಣೆಯಲ್ಲಿ ಚಾಲ್ತಿಯಲ್ಲಿರುವ ವಿದ್ಯುನ್ಮಾನ ಮತಯಂತ್ರದ (Electronic Voting Machine) ಮೇಲೆ ಪ್ಯಾರ್ಗೆ ಆಗ್ಬಿಟ್ಟೈತಂತೆ.
ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವ ಇವಿಎಂ ಅನ್ನು ನಮ್ಮ ದೇಶದಲ್ಲಿ ನಡೆಯುವ ಚುನಾವಣೆಗೆ ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ. ನಮಗೂ ಈ ಮತಯಂತ್ರವನ್ನು ಪೂರೈಸಿ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಮೂಲಗಳ ಪ್ರಕಾರ, ಪಾಕ್ ಚುನಾವಣಾ ಆಯೋಗ ಈ ಸಂಬಂಧ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ. ವಿದೇಶಾಂಗ ವ್ಯವಹಾರ ಸಚಿವಾಲಯದ ಜೊತೆ ಆಯೋಗ ಮಾತುಕತೆ ನಡೆಸುತ್ತಿದೆ.

ಭಾರತದ ಇವಿಎಂಗಳನ್ನು ಬಳಸಿಕೊಂಡು ಪಾರದರ್ಶಕ ಚುನಾವಣೆ ನಡೆಸ ಬೇಕೆನ್ನುವುದು ಪಾಕಿಸ್ತಾನ ಚುನಾವಣಾ ಆಯೋಗದ ಇಚ್ಚೆಯಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಚುನಾವಣಾ ಆಯೋಗ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅವರಿಗೆ ಇವಿಎಂಎ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲು ಭಾರತದ ಚುನಾವಣಾ ಆಯೋಗ ನಿರ್ಧರಿಸಿದೆ.
ಸದ್ಯ ಭಾರತದ ಚುನಾವಣಾ ಆಯೋಗದ ಬಳಿ ಹದಿನಾಲ್ಕು ಲಕ್ಷ ಇವಿಎಂ ಗಳಿದ್ದು, ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಎರಡು ಲಕ್ಷ ಮತಯಂತ್ರಗಳನ್ನು ಖರೀದಿಸುತ್ತಿದೆ.
ಆದರೂ ಭಾರತ ಸರಕಾರ ಪಾಕಿಸ್ತಾನಕ್ಕೆ ಇವಿಎಂ ನೀಡುವ ವಿಚಾರದಲ್ಲಿ ಸರಿಯಾಗಿ ಯೋಚಿಸಿ ಮುಂದಿನ ಕ್ರಮ ಕೈಗೊಳ್ಳುವುದು ಉತ್ತಮ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.












Click it and Unblock the Notifications