ಲೋಕಸಭೆ ಚುನಾವಣೆಗೆ ಮೊದಲು ಬಾಂಬ್ ಸ್ಫೋಟ, 22 ಜನ ಬಲಿ: ಎಲ್ಲಿ ಗೊತ್ತೆ?
ಚುನಾವಣೆ ಅಂದ್ರೆ ಸಿಕ್ಕಾಪಟ್ಟೆ ಭದ್ರತೆ ಇರುತ್ತದೆ, ಅದ್ರಲ್ಲೂ ಹಿಂಸಾಚಾರ ಭುಗಿಲೇಳದಂತೆ ಸಾಕಷ್ಟು ಮುಂಜಾಗ್ರತೆ ವಹಿಸುತ್ತಾರೆ. ಆದ್ರೂ ಲೋಕಸಭೆ ಚುನಾವಣೆಗೆ ಮೊದಲೇ ಭೀಕರ ಬಾಂಬ್ ಸ್ಫೋಟ ಸಂಭವಿಸಿ, ಸುಮಾರು 22ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಹಾಗಾದ್ರೆ ಈ ಘಟನೆ ಸಂಭವಿಸಿದ್ದು ಎಲ್ಲಿ ಗೊತ್ತೆ? ಈ ಕರುಣಾಜನಕ ಕಥೆಯ, ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಭಾರತದ ಶತ್ರು ಪಾಕಿಸ್ತಾನದ ಸಂಸತ್ ಈಗ ಚುನಾವಣೆ ಎದುರಿಸುತ್ತಿದೆ. ಆದರೆ ಆ ದೇಶಕ್ಕೆ ತನ್ನ ಪ್ರಜೆಗಳ ರಕ್ಷಣೆ ಮಾಡುವ ಶಕ್ತಿ ಕೂಡ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಅದರಲ್ಲೂ ಚುನಾವಣೆ ನಡೆಯುವ ಹಿಂದಿನ ದಿನವೇ ಬರೋಬ್ಬರಿ 22ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಾಗಾದರೆ ಪಾಕಿಸ್ತಾನದ ಯಾವ ಜಾಗದಲ್ಲಿ ಈ ದುರಂತ ನಡೆದಿದೆ? ಈಗ ಪಾಕಿಸ್ತಾನದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಾ? ನಡೆಯೋದಿಲ್ವಾ? ಸಂಪೂರ್ಣವಾದ ಮಾಹಿತಿಗೆ ಮುಂದೆ ಓದಿ.

ಅಮಾಯಕರ ಬಲಿಪಡೆದ ಉಗ್ರರು
ಅಂದಹಾಗೆ ಈಗ ನೈಋತ್ಯ ಪಾಕಿಸ್ತಾನದಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿಯ ಹೊರಗಡೆ ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಈಗ ಸಂಭವಿಸಿರುವ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 22 ಜನ ಬಲಿಯಾಗಿದ್ದಾರೆ ಎಂದು ಪಾಕ್ ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ. ಈ ಮೂಲಕ ಚುನಾವಣೆ ನಡೆಯುವ ಹಿಂದಿನ ದಿನವೇ ಉಗ್ರರು ಪಾಕಿಸ್ತಾನದಲ್ಲಿ ರಕ್ತಪಾತ ನಡೆಸಿದ್ದಾರೆ. ಹಾಗೇ ಈ ಭೀಕರ ಘಟನೆಯಲ್ಲಿ 37 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಭಯದ ವಾತಾವರಣ
ಇನ್ನು ಹೀಗೆ ಡಬಲ್ ಬಾಂಬ್ ಬ್ಲಾಸ್ಟ್ ಆದ ಹಿನ್ನೆಲೆ ಇಡೀ ಪಾಕಿಸ್ತಾನದಲ್ಲಿ ಅಲರ್ಟ್ ಘೋಷಣೆ ಆಗಿದೆ, ಪಾಕಿಸ್ತಾನದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೊದಲ ಸ್ಫೋಟವು, ಕ್ವೆಟ್ಟಾ ನಗರದಿಂದ ಸುಮಾರು 50 ಕಿಲೋ ಮೀಟರ್ ದೂರದ ಜಾಗದಲ್ಲಿ ನಡೆದಿದೆ. ಪಿಶಿನ್ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಬಳಿಯೇ ಈ ಬಾಂಬ್ ಬ್ಲಾಸ್ಟ್ ಆಗಿದೆ. ಹಾಗೇ ಇನ್ನೊಂದ್ಕಡೆ ಕಿಲ್ಲಾ ಸೈಫುಲ್ಲ ನಗರದ ಇಸ್ಲಾಮಿಸ್ಟ್ ಜಮಿಯತ್ ಉಲೇಮಾ ಎ ಇಸ್ಲಾಂ ಪಕ್ಷದ ಕಚೇರಿ ಬಳಿಯೇ 2ನೇ ಬಾಂಬ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಯಾವಾಗ ವೋಟಿಂಗ್?
ಅಷ್ಟಕ್ಕೂ ಈಗ ಪಾಕಿಸ್ತಾನದ ಚುನಾವಣಾ ಆಯೋಗ ನಿರ್ಧಾರ ಮಾಡಿರುವಂತೆ, ಫೆಬ್ರವರಿ 8ಕ್ಕೆ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಇಡೀ ಪಾಕಿಸ್ತಾನವು ಸಜ್ಜಾಗಿದೆ. ಅದರಲ್ಲೂ ಭಯೋತ್ಪಾದಕರ ತವರು ಎಂದು ಕರೆಯುವ, ಸೂಕ್ಷ್ಮ ಪರಿಸ್ಥಿತಿಯಲ್ಲಿ ಇರುವ ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಭದ್ರತೆ ಹೆಚ್ಚಿಸಿದೆ ಅಲ್ಲಿನ ಹಂಗಾಮಿ ಸರ್ಕಾರ. ಪಾಕಿಸ್ತಾನದಲ್ಲಿ ಒಟ್ಟು 90,675 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 46 ಸಾವಿರ ಮತಗಟ್ಟೆಗಳ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದೆ ಅಲ್ಲಿನ ಚುನಾವಣಾ ಆಯೋಗ. ಹೀಗಿದ್ದಾಗಲೇ ಉಗ್ರರ ದಾಳಿ ಭಯ ಹುಟ್ಟಿಸಿದೆ.
46 ಸಾವಿರ ಸೂಕ್ಷ್ಮ ಮತಗಟ್ಟೆ
ಪಾಕಿಸ್ತಾನದ 46 ಸಾವಿರ ಸೂಕ್ಷ್ಮ ಮತಗಟ್ಟೆಗಳ ಪೈಕಿ, 18 ಸಾವಿರ ಅತಿ ಸೂಕ್ಷ್ಮ ಮತಗಟ್ಟೆಗಳು ಇವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 12,580 ಸೂಕ್ಷ್ಮ ಮತಗಟ್ಟೆಗಳಿವೆ. ಇವುಗಳಲ್ಲಿ 6 ಸಾವಿರ ಮತಗಟ್ಟೆ ಅತಿ ಸೂಕ್ಷ್ಮ ಎಂದು ಪಾಕ್‌ನ ಚುನಾವಣಾ ಆಯೋಗವು ಗುರುತಿಸಿದೆ. ಅಲ್ಲದೆ ಪಾಕಿಸ್ತಾನ ಸಿಂಧ್ ಪ್ರಾಂತ್ಯದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಇಷ್ಟೆಲ್ಲದರ ನಡುವೆ ಉಗ್ರರ ದಾಳಿ ಜನರಲ್ಲಿ & ಮತದಾರರಲ್ಲಿ ಭಯ ಹೆಚ್ಚಿಸಿದೆ. ಹೀಗಾಗಿ ಚುನಾವಣೆ ದಿನ ಏನಾಗುತ್ತೋ ಎಂಬ ಚಿಂತೆಯಲ್ಲಿ ಜನರು ಮುಳುಗಿದ್ದಾರೆ. ಅದ್ರಲ್ಲೂ ಈ ದೇಶದಲ್ಲಿ ಯಾವಾಗ ಏನಾಗುತ್ತೆ ಅನ್ನೋದು ಅಲ್ಲಿನ ಸರ್ಕಾರಕ್ಕೇ ಗೊತ್ತಿರುವುದಿಲ್ಲ!












Click it and Unblock the Notifications