Pakistan News: ಕೆಂಡದ ಕೂಪದಲ್ಲಿ ನರಳಾಡುತ್ತಿರುವ ಪಾಕಿಸ್ತಾನ!
ಮೊದಲೇ ಆಂತರಿಕ ಕಿಚ್ಚಿನಲ್ಲಿ ನೊಂದು ಬೆಂದು ಹೋದ ಪಾಕಿಸ್ತಾನದಲ್ಲಿ ಇದೀಗ ಹೊಸ ಭಯ ಶುರುವಾಗಿದೆ. ಸಂಸತ್ ವಿಸರ್ಜನೆ ಬಳಿಕ ಬೂದಿ ಮುಚ್ಚಿದ ಕೆಂಡವಾಗಿರುವ ಪಾಕ್ ಯಾವ ಕ್ಷಣದಲ್ಲಿ ಬೇಕಾದರೂ ಹಿಂಸೆಯ ಬೆಂಕಿಗೆ ಬೀಳಬಹುದು. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಸಲು ಸಲಹೆ ನೀಡಲಾಗಿದ್ದು, ಅನ್ವರ್ ಉಲ್ ಹಕ್ ಕಾಕರ್ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಮೊದಲೇ ಮೈತುಂಬಾ ಸಾಲ ಈ ಸಾಲದ ನಡುವೆ ಅರಾಜಕತೆ. ಇದು ಸಾಲದು ಎಂಬಂತೆ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ಇನ್ನೇನು ಚುನಾವಣೆಯು ನಡೆಯಲಿದೆ. ಹೀಗೆ ಸಂಸತ್ ವಿಸರ್ಜನೆ ಮಾಡಿ, ಚುನಾವಣೆಗೆ ಸಜ್ಜಾಗಿದೆ ಇಮ್ರಾನ್ ಖಾನ್ ವಿರೋಧಿ ಪಡೆ. ಆದರೆ ಚುನಾವಣೆ ನಡೆಸುವುದು ಅಷ್ಟು ಸುಲಭವಾ? ಪಾಕಿಸ್ತಾನದ ಸ್ಥಿತಿ ಮುಂದೆ ಏನಾಗಬಹುದು? ಇಮ್ರಾನ್ ಖಾನ್‌ಗೆ ಜೈಲಿನಿಂದ ಮುಕ್ತಿ ಸಿಗಬಹುದಾ? ಅದರ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಇಮ್ರಾನ್ ಖಾನ್‌ಗೆ ಅವಕಾಶವೇ ಇಲ್ಲ?
4 ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಸಂಸತ್ ವಿಸರ್ಜನೆಗಾಗಿ ಅಧಿಸೂಚನೆ ಕಳುಹಿಸಿದ್ದಾರೆ. ಹೀಗಾಗಿ ಪಾಕ್‌ನ ಸಂಸತ್ ವಿಸರ್ಜನೆಯಾಗಿತ್ತು, 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಆಗಸ್ಟ್ 12ಕ್ಕೆ ಪಾಕಿಸ್ತಾನದ ಹಾಲಿ ಸರ್ಕಾರದ ಅವಧಿ ಮುಗಿಯುತ್ತಿದ್ದು, 3 ದಿನ ಮೊದಲೇ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಹೀಗಾಗಿ ಇನ್ನೂ 3 ತಿಂಗಳ ಒಳಗೆ ಚುನಾವಣೆ ನಡೆಸಬೇಕಿದೆ. ಆದರೆ ಪರಿಸ್ಥಿತಿ ಬೇರೆ ರೂಪ ಪಡೆಯುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತಾಗಿ ಜೈಲಿಗೂ ಹೋದ ಹಿನ್ನೆಲೆ ಇಮ್ರಾನ್ ಚುನಾವಣೆ ಸ್ಪರ್ಧಿಸಲು ಆಗಲ್ಲ. ಹೀಗಾಗಿ ಪಾಕಿಸ್ತಾನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.
ಇಮ್ರಾನ್ ಮುಂದಿನ ನಡೆ ಏನು?
ತೋಶಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್ ಇದೀಗ ಜೈಲಿನಲ್ಲಿ ಇದ್ದಾರೆ. ಗಿಫ್ಟ್ ಮಾರಾಟದಿಂದ ₹14 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇಸ್ಲಾಮಾಬಾದ್ ಜಿಲ್ಲಾ & ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹುಮಾಯುನ್ ದಿಲವಾರ್ ತೀರ್ಪು ನೀಡಿ, ಇಮ್ರಾನ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಆ ಬಳಿಕ ಇಮ್ರಾನ್ ಬಂಧನವಾಗಿತ್ತು. ಈಗ ನೋಡಿದರೆ ಪಾಕಿಸ್ತಾನಕ್ಕೆ ಹಂಗಾಮಿ ಪ್ರಧಾನಿ ಆಯ್ಕೆಯ ಪ್ರಕ್ರಿಯೆ ಮುಗಿದಿದ್ದು, ಇಮ್ರಾನ್ ತಮ್ಮ ಕಾನೂನು ಹೋರಾಟ ಮುಂದುವರಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇಷ್ಟಾದರೂ ಇಮ್ರಾನ್ ಈ ಬಾರಿ ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಅನುಮಾನ.
ಪಾಕ್ ಸುಪ್ರೀಂಕೋರ್ಟ್ ಕೊಡುತ್ತಾ ರಿಲೀಫ್?
ಈಗಿನ ಸ್ಥಿತಿಯಲ್ಲಿ ಇಮ್ರಾನ್‌ಗೆ ಉಳಿದಿರುವ ಕೊನೇ ಭರವಸೆ ಎಂದರೆ ಪಾಕಿಸ್ತಾನ ಸುಪ್ರೀಂ ಕೋರ್ಟ್. ಅಲ್ಲಿ ಅಕಸ್ಮಾತ್ ಇಮ್ರಾನ್ ಖಾನ್‌ಗೆ ರಿಲೀಫ್ ಸಿಕ್ಕರೆ ರಾಜಕೀಯ ಭವಿಷ್ಯವನ್ನ ಉಳಿಸಿಕೊಳ್ಳಬಹುದು. ಇಲ್ಲವಾದರೆ ಪಾಕಿಸ್ತಾನದ ಮಾಜಿ ಪ್ರಧಾನಿಗೆ 3 ವರ್ಷ ಜೈಲೂಟ ಗ್ಯಾರಂಟಿ ಆಗಲಿದೆ. ಹೀಗಾಗಿ ಹೇಗಾದರೂ ಮಾಡಿ ಕೇಸ್‌ನಿಂದ ಹೊರಬರಬೇಕು ಅಂತಾ ಇಮ್ರಾನ್ ನರಳಾಡುತ್ತಿದ್ದಾರೆ. ಈಗಾಗಲೇ ತಮಗೆ ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಒದಗಿಸಬೇಕು ಎಂಬ ಒತ್ತಾಯದಲ್ಲಿ ಇಮ್ರಾನ್ ಗೆದ್ದಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್‌ಗೆ ರಿಲೀಫ್ ನೀಡಿದೆ. ಆದರೆ ಜೈಲಿನಿಂದ ಹೊರಬರಲು ಇರುವ ಅವಕಾಶ ಸುಪ್ರೀಂಕೋರ್ಟ್ ಮಾತ್ರ ಎನ್ನಬಹುದು.

ಆರು ತಿಂಗಳು ಚುನಾವಣೆ ಅನುಮಾನ?
ಇಷ್ಟೆಲ್ಲದರ ನಡುವೆ ಮತ್ತೊಂದು ಅನುಮಾನ ಮೂಡಿದೆ, ಈಗಿನ ಸ್ಥಿತಿಯಲ್ಲಿ ಚುನಾವಣೆ ಘೋಷಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಹಲವಾರು ಕಾರಣದಿಂದ ಪಾಕಿಸ್ತಾನದಲ್ಲಿ ಚುನಾವಣೆ ಸುಮಾರು 6 ತಿಂಗಳ ಕಾಲ ತಡವಾಗುವ ಸಾಧ್ಯತೆ ಇದೆ. ಆದರೆ ಚುನಾವಣೆಯ ವಿಳಂಬದ ಕಾರಣ ಪಾಕಿಸ್ತಾನದಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು ಎಂಬ ಭಯ ಆವರಿಸಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ರಾಜಕೀಯ ವಿಶ್ಲೇಷಕರು ಆದಷ್ಟು ಬೇಗ ಚುನಾವಣೆಯನ್ನು ನಡೆಸಿ ಅಂತಿದ್ದಾರೆ. ಆದರೆ ಅಲ್ಲಿನ ಸರ್ಕಾರ ಇನ್ನೇನು ತಂತ್ರ ಹೂಡಿದೆಯೋ ಗೊತ್ತಿಲ್ಲ.












Click it and Unblock the Notifications