Pakistan Economy: ಸಾಲಕ್ಕಾಗಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕೊನೆಗೂ ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್
ಪಾಕಿಸ್ತಾನ ಆರ್ಥಿಕವಾಗಿ ಬೀದಿಗೆ ಬಂದು ನರಳುತ್ತಿರುವ ವಿಚಾರ ಇಡೀ ಜಗತ್ತಿಗೇ ಗೊತ್ತಾಗಿದ್ದು, ಈ ದೇಶ ತನ್ನನ್ನು ತಾನು ಮುನ್ನಡೆಸಿಕೊಂಡು ಹೋಗಲು ಆಗುತ್ತಿಲ್ಲ. ಅದರಲ್ಲೂ ಸ್ವತಃ ಪಾಕ್ ರಾಜಕಾರಣಿಗಳೇ ಇದೀಗ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಗೌರವ ಯಾಕೆ ಕುಸಿಯುತ್ತಿದೆ ಎಂಬುದನ್ನ ಅವರೇ ಒಪ್ಪಿಕೊಂಡ ರೀತಿ ಕಾಣಿಸುತ್ತಿದೆ. ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿರುವ ಪಾಕಿಸ್ತಾನ ಯಾವುದೇ ದೇಶದ ಬಳಿಯೂ ಒಳ್ಳೆಯ ಹೆಸರು ಉಳಿಸಿಕೊಂಡಿಲ್ಲ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿರುವ ಬಗ್ಗೆ ಮಾತನಾಡಿರುವ ಪ್ರಧಾನಿ ಶೆಹಬಾಜ್ ಷರೀಫ್, ಎಲ್ಲಾ ಕಡೆ ಹೋಗಿ ಹಣಕ್ಕಾಗಿ ಬೇಡುತ್ತಾ ಭಿಕ್ಷೆ ಎತ್ತಲು ನಾಚಿಕೆಯಾಗುತ್ತಿದೆ ಎಂದಿದ್ದು ಈಗ ಪಾಕಿಸ್ತಾನ ಮಾನ ಹರಾಜು ಹಾಕಿದೆ. ಆರ್ಥಿಕ ಶಿಸ್ತು ಇಲ್ಲದೆ ಪಾಕಿಸ್ತಾನ ತೀವ್ರವಾಗಿ ಹಿನ್ನಡೆ ಅನುಭವಿಸಿದೆ, ಇದರ ಜೊತೆಗೆ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವುದು ಸೇರಿದಂತೆ ಭ್ರಷ್ಟಾಚಾರ ಕೂಡ ಪಾಕಿಸ್ತಾನದ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಆ ದೇಶ ಮತ್ತೆ ಮತ್ತೆ ಮಾಡಿದ್ದೇ ತಪ್ಪು ಮಾಡಿ ಸಮಸ್ಯೆಯ ಸುಳಿಗೆ ಸಿಲುಕುತ್ತಿದೆ. ಕೊನೆಗೂ ತಮ್ಮ ದೇಶ ಬೀದಿಗೆ ಬಿದ್ದಿದೆ ಎಂಬುದನ್ನ ಪಾಕಿಸ್ತಾನ ಪ್ರಧಾನಿಯೇ ಒಪ್ಪಿಕೊಂಡಂತೆ ಆಗಿದೆ ಈಗ.

ಯಾವ ಯಾವ ದೇಶದಲ್ಲಿ ಸಾಲ?
ಚೀನಾ, ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್, ವಿಶ್ವ ಹಣಕಾಸು ಸಂಸ್ಥೆ ಹೀಗೆ ಪಾಕಿಸ್ತಾನ ಸಾಲ ಪಡೆಯದೇ ಇರುವ ಜಾಗವೇ ಇಲ್ಲ ಎನ್ನಬಹುದು. ಈಗಾಗಲೇ ಸಾಲ ಮಾಡಿ ಮಾಡಿ ತನ್ನ ದೇಶದ ಬಂದರು ಹಾಗೂ ರಸ್ತೆಗಳನ್ನು ಚೀನಾ ಮತ್ತಿತರ ದೇಶಗಳಿಗೆ ಅಡ ಇಟ್ಟಿರುವ ಪಾಕಿಸ್ತಾನ ಈಗಲೂ ಒದ್ದಾಡುತ್ತಿದೆ. ಕೈಯಲ್ಲಿ ಹಣ ಇಲ್ಲದ ಪರಿಸ್ಥಿತಿ ಪಾಕಿಸ್ತಾನಕ್ಕೆ ದೊಡ್ಡ ತಲೆನೋವನ್ನು ಕೂಡ ತರಿಸಿದೆ. ಇಷ್ಟೆಲ್ಲಾ ಸಂಕಷ್ಟಗಳನ್ನು ಇದೀಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೇರವಾಗಿ ಜನರ ಎದುರು ಒಪ್ಪಿಕೊಂಡಿದ್ದು, ವಿದೇಶಗಳಿಗೆ ಹೋಗಿ ಸಾಲಕ್ಕಾಗಿ ಪಾಕಿಸ್ತಾನ ಭೀಕ್ಷೆ ಎತ್ತುವಂತೆ ಆಗಿದೆ ಎಂದಿದ್ದಾರೆ.
ಈಗಲಾದರೂ ಅಭಿವೃದ್ಧಿ ಮಾಡಲು ಸಲಹೆ!
ಆರ್ಥಿಕತೆ ಸುಧಾರಿಸಲು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ, ವಿದೇಶಿ ವಿನಿಮಯ ಮೀಸಲು ನಿಧಿ ದ್ವಿಗುಣವಾದರೂ ಹೆಚ್ಚಿನದ್ದು ಸ್ನೇಹಿತ ದೇಶಗಳಿಂದ ಪಡೆದ ಸಾಲವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಷರೀಫ್ ವಿವರಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನಿ ರಫ್ತುದಾರರನ್ನು ಉದ್ದೇಶಿಸಿ ಮಾತನಾಡಿರುವ ಪಾಕ್ ಪ್ರಧಾನಿ ಷರೀಫ್, ಪಾಕಿಸ್ತಾನ ಮಾಡುತ್ತಿರುವ ತಪ್ಪುಗಳನ್ನು ನೇರವಾಗಿಯೇ ಒಪ್ಪಿಕೊಂಡಿರುವುದು ಗಮನ ಸೆಳೆದಿದೆ. ಇನ್ನು ಪಾಕಿಸ್ತಾನ ಪ್ರಧಾನಿಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದ್ದು, ಈಗಲಾದರೂ ಉಗ್ರರನ್ನು ಪೋಷಣೆ ಮಾಡುವುದು ಬಿಟ್ಟು ದೇಶ ಅಭಿವೃದ್ಧಿ ಮಾಡಿ ಎಂದು ಜನರು ಪಾಕಿಸ್ತಾನದ ರಾಜಕೀಯ ನಾಯಕರಿಗೆ ಸಲಹೆ ನೀಡುತ್ತಿದ್ದಾರೆ.












Click it and Unblock the Notifications