ಅಭಿನಂದನ್ ಬಿಡುಗಡೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಪಾಕ್ ಹೈಕೋರ್ಟ್
ಇಸ್ಲಾಮಾಬಾದ್, ಮಾರ್ಚ್ 01: ಪಾಕ್ ಹಿಡಿತದಲ್ಲಿರುವ ಭಾರತೀಯ ವಾಯುಪಡೆ ಕಂಮ್ಯಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗೆ ತಡೆಕೋರಿ ಸಾಮಾಜಿಕ ಕಾರ್ಯಕರ್ತನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ ಹೈಕೋರ್ಟ್ ವಜಾಗೊಳಿಸಿದೆ.
ಈತನನ್ನು ಬಿಡುಗಡೆ ಮಾಡುತ್ತಿರುವ ಔಚಿತ್ಯ ಏನು ಎಂದು ಆತ ತನ್ನ ಅರ್ಜಿಯಲ್ಲಿ ಪ್ರಶ್ನಿಸಿರುವುದಾಗಿ ಹೇಳಲಾಗಿದೆ. ಭಾರತೀಯ ವಾಯುಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್16 ಯುದ್ಧವಿಮಾನಗಳನ್ನು ರಷ್ಯಾ ನಿರ್ಮಿತ ಮಿಗ್-21 ಬೈಸನ್ ಜೆಟ್ ಯುದ್ಧವಿಮಾನದಲ್ಲಿ ಬೆನ್ನಟ್ಟಿ ಹೋಗಿದ್ದ ಅಭಿನಂದನ್, ಒಂದು ವಿಮಾನವನ್ನು ಹೊಡೆದುರುಳಿಸಿದ್ದರು.
ತಮ್ಮ ವಿಮಾನದ ಮೇಲೆ ದಾಳಿ ನಡೆದು, ಅದು ಹಾನಿಗೊಂಡಿದ್ದನ್ನು ಗಮನಿಸಿದ್ದ ಅವರು ವಿಮಾನದಿಂದ ಜಿಗಿದಿದ್ದರು. ದುರದೃಷ್ಟವಶಾತ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದ ಅವರನ್ನು ಪಾಕ್ ಸೇನಾಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.

ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಹಾಗೂ ಜಿನೀವಾ ಒಪ್ಪಂದದ ಪ್ರಕಾರ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು ಇದೀಗ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಭಾರತದ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಪಾಕಿಸ್ತಾನ ಬಿಡುಗಡೆಗೊಳಿಸುತ್ತಿದ್ದು ವಾಘಾ ಗಡಿ ಸೇರಿ ದೇಶಾದ್ಯಂತ ಅವರ ಸ್ವಾಗತಕ್ಕೆ ಸಂಭ್ರಮದಿಂದ ಎದುರು ನೋಡುತ್ತಿದೆ.
ಆದರೆ ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹಮ್ಮದ್ ಮಾತ್ರ ಅಭಿನಂದನ್ ಅವರನ್ನು ಭಾರತಕ್ಕೆ ಮರಳಿಸುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications