Israel & Gaza: ಗಾಜಾ ನಿರಾಶ್ರಿತರ ಸಹಾಯಕ್ಕೆ 10,000 ಟ್ರಕ್‌ಗಳ ಎಂಟ್ರಿ
ಗಾಜಾ ಪಟ್ಟಿ ಜನರು ಯುದ್ಧ ನಿಂತರೂ ನೆಮ್ಮದಿಯಾಗಿ ಜೀವನ ನಡೆಸಲು ಆಗುತ್ತಿಲ್ಲ. ಈ ರೀತಿ ಪರದಾಡುತ್ತಿರುವ ಗಾಜಾ ನಿರಾಶ್ರಿತರಿಗೆ ನೆರವಾಗಲು ಜಗತ್ತಿನಾದ್ಯಂತ ವಿವಿಧ ದೇಶಗಳ ನಾಯಕರು ಭಾರಿ ದೊಡ್ಡ ಪ್ರಮಾಣದ ನೆರವಿನ ಸಾಮಗ್ರಿ ಕಳುಹಿಸಿದ್ದರು. ಆದರೆ ಯುದ್ಧ ನಿಲ್ಲದ ಕಾರಣ ಹಲವು ದಿನಗಳಿಂದ ಗಡಿಯಲ್ಲೇ ಅಗತ್ಯ ವಸ್ತುಗಳ ಟ್ರಕ್ ನಿಂತಿದ್ದವು. ಹೀಗಾಗಿ ಗಾಜಾ ಪಟ್ಟಿ ಜನರು ಕೂಡ ಅಗತ್ಯ ವಸ್ತುಗಳಿಗಾಗಿ ಒದ್ದಾಡಿ ಹೋಗಿದ್ದರು.
ಕಳೆದ ತಿಂಗಳು ಇಸ್ರೇಲ್ ಮತ್ತು ಗಾಜಾ ಪಟ್ಟಿ ನಡುವೆ ಒಪ್ಪಂದ ನಡೆದು, ಕದನ ವಿರಾಮ ಘೋಷಣೆ ಮಾಡಲಾಗಿದೆ. ಆ ನಂತರವೇ ಗಾಜಾ ನಿರಾಶ್ರಿತರ ಸಹಾಯಕ್ಕೆ 10,000 ಟ್ರಕ್‌ಗಳು ಎಂಟ್ರಿಯಾಗಿದ್ದು, ಅನ್ನ & ನೀರು ಇಲ್ಲದೆ ನರಳಾಡುತ್ತಿದ್ದ ಜನರಿಗೆ ನೆರವಾಗುತ್ತಿವೆ. ಹೀಗಾಗಿ ಗಾಜಾ ಪಟ್ಟಿಯಲ್ಲಿ ಒಂದಷ್ಟು ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದಾಗಲೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಜಾ ಪಟ್ಟಿಯ ಮೇಲೆ ಹಕ್ಕು ಸಾಧಿಸುವ ಬಗ್ಗೆ ಮಾತನಾಡಿರುವುದು ಆತಂಕ ಮತ್ತೆ ಮೂಡುವಂತೆ ಮಾಡಿದೆ.

ನೀರಿಗಾಗಿ ಕಿತ್ತಾಡಿದ ಗಾಜಾ ಜನ
ಗಾಜಾ ಪಟ್ಟಿ ಗಡಿಯಲ್ಲಿ ನಿಂತಿದ್ದ ಟ್ರಕ್‌ಗಳು ಒಂದೇ ಬಾರಿಗೆ ಗಾಜಾ ಒಳಗೆ ನುಗ್ಗಿದ ಹಿನ್ನೆಲೆ ಜನರು ಕೂಡ ಒಮ್ಮೆಲೆ ಮುಗಿಬಿದ್ದಿದ್ದಾರೆ. ಅದರಲ್ಲೂ ನೀರಿಗಾಗಿ ಸಾಕಷ್ಟು ಸಮಸ್ಯೆ ಇದ್ದು ಜನರು ನೀರು ಕಂಡ ತಕ್ಷಣ ಮುಗಿಬಿದ್ದಿದ್ದಾರೆ. ಸಾಧ್ಯವಾದಷ್ಟು ನೀರಿನ ಬಾಟಲ್ ಎತ್ತುಕೊಂಡು ಹೋಗಿದ್ದಾರೆ. ಬರದ ನಾಡಾಗಿರುವ ಗಾಜಾ ಪಟ್ಟಿಯಲ್ಲಿ ಯುದ್ಧದ ನಂತರ ನೀರಿಗೆ ಜನರು ಇನ್ನಷ್ಟು ನರಳಾಡುವಂತೆ ಆಗಿದೆ.
ವಾಪಸ್ ಬರುತ್ತಿರುವ ನಿರಾಶ್ರಿತರು
ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆ ನಡೆದ ಕಾಳಗದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎಂಬ ಆರೋಪ ಇದೆ. ಹೀಗೆ ಇಸ್ರೇಲ್ ಸೇನೆ ದಿಢೀರ್ ದಾಳಿ ಮಾಡಿ, ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸಲು ಮುಂದಾದ ಹಿನ್ನೆಲೆ ಜನರು ಕೂಡ ತಮ್ಮ ತಮ್ಮ ಜಾಗ ಬಿಟ್ಟು ಓಡಿ ಹೋಗಿದ್ದರು. ಆದರೆ ಇದೀಗ ಪರಿಸ್ಥಿತಿ ಸುಧಾರಿಸಿದ ಕಾರಣ ವಾಪಸ್ ಬರುತ್ತಿದ್ದಾರೆ.
ಒಟ್ನಲ್ಲಿ ಇಸ್ರೇಲ್ & ಹಮಾಸ್ ಯುದ್ಧದ ನಂತರ ಗಾಜಾ ಪಟ್ಟಿ ಭಾಗಶಃ ಸರ್ವನಾಶವಾಗಿದೆ. ಸಾವಿರಾರು ಕಟ್ಟಡಗಳು ಸರ್ವನಾಶವಾಗಿ ಹೋಗಿದ್ದು, ಜನರು ಕೂಡ ತುತ್ತು ಅನ್ನಕ್ಕೋಸ್ಕರ ನರಳುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದ್ದು, ಇದನ್ನೆಲ್ಲ ಎದುರಿಸಲು ಅಲ್ಲಿನ ಜನ ಸನ್ನದ್ಧವಾಗಬೇಕು. ಇದೇ ವೇಳೆ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಅಮೆರಿಕದ ವಶಕ್ಕೆ ಒಪ್ಪಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications