ನೈಜೀರಿಯಾದ ಮಸೀದಿ ಮೇಲೆ ದಾಳಿ, 18 ಮಂದಿ ಸಾವು
ಲಾಗೋಸ್, ಅಕ್ಟೋಬರ್ 26: ಉತ್ತರ ನೈಜೀರಿಯಾದ ಮಸೀದಿಯೊಂದರ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿದ್ದು, 18 ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಉತ್ತರ ನೈಜೀರಿಯಾದ ಮಸೀದಿಯೊಂದರ ಮೇಲೆ ದಾಳಿ ನಡೆಸಿರುವ ಬಂದೂಕುಧಾರಿಗಳು ರಕ್ತಪಾತ ನಡೆಸಿದ್ದಾರೆ.
ಇತ್ತೀಚೆಗೆ ನೈಜೀರಿಯಾದ ವಾಯುವ್ಯ ರಾಜ್ಯಗಳಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ರಾಜಧಾನಿಯಿಂದ ಸುಮಾರು 270 ಕಿಲೋ ಮೀಟರ್ ದೂರದಲ್ಲಿರುವ ಮಜಕುಕಾ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಕಡಿಮೆಯಿದೆ. ಅಲ್ಲದೇ, ಘಟನಾ ಸ್ಥಳಕ್ಕೆ ತಲುಪಲು ಉತ್ತಮವಾದ ರಸ್ತೆ ಮಾರ್ಗವೂ ಇಲ್ಲ. ಈ ಹಿನ್ನೆಲೆ ಸಂಚು ರೂಪಿಸಿ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕಳೆದ ವಾರವಷ್ಟೇ ವಾಯುವ್ಯ ಸುಕೊಟೊ ರಾಜ್ಯದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿ, ಕನಿಷ್ಠ 40 ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವ ಪ್ರದೇಶಗಳೇ ದಾಳಿಕೋರರಿಗೆ ಅಡಗುತಾಣಗಳಾಗಿವೆ ಎಂದು ಹೇಳಲಾಗುತ್ತಿದೆ.
ನೈಜರ್ ರಾಜ್ಯದ ಮಶೆಗು ಸ್ಥಳೀಯ ಆಡಳಿತ ಪ್ರದೇಶದ ಮಜಕುಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಫುಲಾನಿ ಅಲೆಮಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಂದೂಕುಧಾರಿಗಳು ಮಸೀದಿಯನ್ನು ಸುತ್ತುವರಿದು, ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ 18 ಮಂದಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಹಲವು ವರ್ಷಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಅಪಾರ ಸಾವು-ನೋವುಗಳಿಗೆ ಕಾರಣವಾಗುತ್ತಿದೆ. ನೀರು ಮತ್ತು ಪ್ರದೇಶಗಳ ಪ್ರವೇಶಕ್ಕಾಗಿ ದಶಕಗಳ ಹಿಂದಿನಿಂದಲೂ ಫುಲಾನಿ ಅಲೆಮಾರಿಗಳು ಹಾಗೂ ಗ್ರಾಮಸ್ಥರು ಮಧ್ಯೆ ಸಂಘರ್ಷ ಸಾಮಾನ್ಯವಾಗಿದೆ.
ಕಳೆದ ಒಂದು ವಾರದ ಹಿಂದಷ್ಟೇ ಬೈಕ್ಗಳಲ್ಲಿ ಬಂದ ಬಂಡುಕೋರರು ಗುಂಡು ಹಾರಿಸಿ ಸುಮಾರು 43 ಮಂದಿಯನ್ನು ಕೊಂದಿರುವ ಘಟನೆ ನೈಜೀರಿಯಾದ ವಾಯವ್ಯ ರಾಜ್ಯವಾದ ಸೊಕೊಟೊದಲ್ಲಿ ನಡೆದಿತ್ತು.
ಗೊರೊನ್ವೋ ಗ್ರಾಮದಲ್ಲಿ ಭಾನುವಾರ ಬಂಡುಕೋರರು ನಡೆಸಿದ ದಾಳಿಯಲ್ಲಿ ಸುಮಾರು 43 ಮಂದಿ ಮೃತಪಟ್ಟಿರುವುದು ದೃಢವಾಗಿದೆ ಎಂದು ಸೊಕೊಟೊ ಸರ್ಕಾರದ ವಕ್ತಾರ ಮೊಹಮ್ಮದ್ ಬೆಲ್ಲೋ ಹೇಳಿದ್ದಾರೆ ಎಂದು ಏಜೆನ್ಸ್ ಫ್ರಾನ್ಸ್ ಪ್ರೆಸ್ಸೆ ವರದಿ ಮಾಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ಉಲ್ಲೇಖಿಸಿದೆ.
ಸೋಮವಾರ ಬೆಳಗ್ಗೆ ಈ ಬಗ್ಗೆ ವರದಿ ಮಾಡಿರುವ ಸ್ಥಳೀಯ ಪತ್ರಿಕೆ ಪ್ರೀಮಿಯಮ್ ಟೈಮ್ಸ್, ಗ್ರಾಮದಲ್ಲಿ ಮಾರುಕಟ್ಟೆ ನಡೆಯುತ್ತಿದ್ದ ವೇಳೆ ದಾಳಿ ನಡೆದಿದ್ದು, 30 ಮಂದಿ ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಸುಮಾರು 200 ಮಂದಿಯ ಗುಂಪು ಬೈಕ್ಗಳಲ್ಲಿ ಬಂದು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದೆ.
ಇದಕ್ಕೂ ಮೊದಲು ಬೇರೊಂದು ಗ್ರಾಮದ ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದ ಬಂಡುಕೋರರು, 19 ಮಂದಿಯನ್ನು ಕೊಂದಿದ್ದರು. ಸುಮಾರು ವರ್ಷಗಳಲ್ಲಿ ಈ ರಾಷ್ಟ್ರದಲ್ಲಿ ಹಿಂಸಾಚಾರಗಳು ನಡೆಯುತ್ತಿದ್ದು, ಬೋಕೋ ಹರಾಮ್ ಮುಂತಾದ ಬಂಡುಕೋರರು ಇಲ್ಲಿ ಆಗಾಗ ದಾಳಿ ನಡೆಸುತ್ತಿರುತ್ತವೆ.












Click it and Unblock the Notifications