ಗಲ್ವಾನ್ ಘರ್ಷಣೆಯಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆ ಬರೋಬ್ಬರಿ 42
ಲಡಾಖ್, ಫೆಬ್ರವರಿ 4: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆಯಲ್ಲಿ 42 ಮಂದಿ ಚೀನಾ ಸೈನಿಕರು ಮೃತಪಟ್ಟಿದ್ದರು ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.
2020ರ ಜೂನ್ 15-16ರ ಮಧ್ಯರಾತ್ರಿ ನಡೆದ ಘರ್ಷಣೆಯಲ್ಲಿ ಮೃತ ಚೀನಾ ಸೈನಿಕರ ಕುರಿತು ಚೀನಾ ಸುಳ್ಳಿನ ಕಂತೆಯನ್ನೇ ಹೇಳಿದ್ದು, ನಿಜವಾಗಿಯೂ ಮೃತಪಟ್ಟವರು 42 ಸೈನಿಕರು ಎಂದು ಆಸ್ಟ್ರೇಲಿಯಾದ ಸಿ ಕ್ಲಾಕ್ಸನ್ ವರದಿ ಮಾಡಿದೆ.
ಗಡಿಯ ಆಯಕಟ್ಟಿನ ಗಲ್ವಾನ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಮೀರಿ ಚೀನಾ ಸೇನೆ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿತ್ತು. ಅಲ್ಲಿ ತನ್ನ ಗಸ್ತನ್ನು ಹೆಚ್ಚಿಸಿತ್ತು. ಗಡಿಯ ಬರ್ ವಲಯದಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ ಎಂಬ ಒಪ್ಪಂದವನ್ನೂ ಮುರಿದಿತ್ತು ಎನ್ನಲಾಗಿದೆ.

ಘರ್ಷಣೆ ನಡೆದು ಒಂದು ವರ್ಷದ ಬಳಿಕ ಈ ವರದಿ ಬಿಡುಗಡೆಗೊಂಡಿದೆ. ಈ ಘರ್ಷಣೆಯಲ್ಲಿ ಗಾಯಗೊಂಡ ಎರಡೂ ಸೇನೆಗಳ ಅನೇಕ ಯೋಧರು ಗಲ್ವಾನ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ನದಿಯಲ್ಲಿ ಚೀನಾದ 38 ಯೋಧರು ಕೊಚ್ಚಿಹೋಗಿ ಮೃತಪಟ್ಟಿದ್ದಾರೆ, ಒಬ್ಬ ಜ್ಯೂನಿಯರ್ ಸಾರ್ಜೆಂಟ್ ಮಾತ್ರ ಕೊಚ್ಚಿ ಹೋಗಿದ್ದು, ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಇಲ್ಲಿನ ತಾಪಮಾನ ಶೂನ್ಯಕ್ಕಿಂತ ಕೆಳಗೆ ಇದ್ದ ಕಾರಣ ಕೊರೆಯುತ್ತಿದ್ದ ನದಿ ನೀರಿನಲ್ಲಿ ಬಿದ್ದಿದ್ದ ಗಾಯಗೊಂಡ ಅವರ ಪೈಕಿ ಹಲವರು ಮೃತಪಟ್ಟಿರುವುದಾಗಿ ವರದಿ ಹೇಳಿದೆ.
2020ರ ಮೇ ತಿಂಗಳಿನಲ್ಲಿ ಪ್ಯಾಂಗಾಂಗ್ ತ್ಸೊ ಸರೋವರದ ಕೆಲ ಪ್ರದೇಶವನ್ನು ಅತಿಕ್ರಮಿಸಿಕೊಂಡು ಕ್ಯಾತೆ ತೆಗೆದಿದ್ದ ಚೀನಾ, ಗಲ್ವಾನ್ ಕಣಿವೆಯಲ್ಲಿ ಎಲ್‌ಎಸಿ ಆಚೆಗೆ ವೀನಾ ಗೋಪುರ, ಬಂಕರ್‌ಗಳನ್ನು ನಿರ್ಮಿಸಿತ್ತು.
ಇದನ್ನು ತೆರವುಗೊಳಿಸುವಂತೆ ಭಾರತದ ಒತ್ತಾಯವನ್ನು ಒಪ್ಪಿಕೊಂಡಿದ್ದರೂ ತೆರವುಗೊಳಿಸಿರಲಿಲ್ಲ, ಹೀಗಾಗಿ 2020ರ ಜೂನ್ 15ರ ಸಂಜೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಪಡೆ, ವಿವಾದಾತ್ಮಕ ನಿರ್ಮಾಣಗಳನ್ನು ತೆಗೆಯಲು ಮುಂದಾಯಿತು. ಆಗ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ರತಿರೋಧ ವ್ಯಕ್ತಪಡಿಸಿತ್ತು.
ಈ ಮಧ್ಯೆಯೇ ಚೀನಾದ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ಶುಕ್ರವಾರ ಚಾಲನೆಗೊಳ್ಳಲಿದ್ದು, ಇದರ ಕ್ರೀಡಾ ಜ್ಯೋತಿ ತರುವ ಗೌರವಕ್ಕೆ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧನನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಗಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಗಾಯಗೊಂಡ ಸೇನಾಧಿಕಾರಿ ಚಳಿಗಾಲದ ಒಲಿಂಪಿಕ್ಸ್‌ನ ಪರೇಡ್‌ನಲ್ಲಿ ಕ್ರೀಡಾಜ್ಯೋತಿ ತರುವುದನ್ನು ಖಂಡಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಭಾರತ ಬಹಿಷ್ಕರಿಸಿದೆ. ಚೀನಾ ಕ್ರೀಡೆಯನ್ನು ರಾಜಕೀಯದ ವೇದಿಕೆಯನ್ನಾಗಿ ಮಾಡಿಕೊಂಡಿದ್ದು, ವಿಷಾಧನೀಯ ಎಂದು ಹೇಳಿದೆ.
ಈ ಕ್ರಮ ಸರಿಯಲ್ಲ ಎಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ, ಚೀನಾ, ಕ್ರೀಡೆಯನ್ನು ರಾಜಕೀಯಗೊಳಿಸುತ್ತಿರುವುದು ನಾಚಿಕೆಗೇಡು ಎಂದು ಅಮೆರಿಕ ಹೇಳಿದೆ.












Click it and Unblock the Notifications