ಕಿಮ್ ಜಾಂಗ್ ಉನ್ ಮತ್ತೊಂದು ಅಸ್ತ್ರ, ಸುಸ್ತಾಗಿ ಹೋಯ್ತಾ ದೊಡ್ಡಣ್ಣ ಅಮೆರಿಕ?
ಅಮೆರಿಕ ಇರಲಿ ಯುರೋಪ್ ಇರಲಿ, ಜಗತ್ತಿನ ಯಾವುದೇ ಶಕ್ತಿಶಾಲಿ ಎನಿಸಿಕೊಂಡ ದೇಶಕ್ಕೂ ಈ ಕಿಮ್ ಜಾಂಗ್ ಉನ್ ಹೆಸರು ಕೇಳಿದರೆ ಭಯ ಆಗದೆ ಇರಲಾರದು. ಇದಕ್ಕೆ ಕಾರಣ ಕಿಮ್ ಜಾಂಗ್ ಉನ್ ಇಟ್ಟಿರುವ ಹವಾ. ತನ್ನ ಬಳಿ ನ್ಯೂಕ್ಲಿಯರ್ ಅಸ್ತ್ರಗಳು ಇವೆ ಎಂದು ಹೇಳುತ್ತಲೇ ಜಗತ್ತಿನ ದೊಡ್ಡ ದೊಡ್ಡ ದೇಶಗಳನ್ನು ಭಯಪಡಿಸಿ, ತನ್ನ ಬೇಳೆ ಬೇಯಿಸಿಕೊಳ್ಳಲು ಕಿಮ್ ಜಾಂಗ್ ಉನ್ ಶತಪ್ರಯತ್ನ ಮಾಡುತ್ತಲೇ ಇರುತ್ತಾನೆ. ಕೆಲವು ತಿಂಗಳಿಂದ ಸೈಲೆಂಟ್ ಆಗಿದ್ದ ಈ ಪುಣ್ಯಾತ್ಮ ಈಗ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದು, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರ ಎದೆ ನಡುಗಿ ಹೋಗುತ್ತಿದೆ.
ಅಮೆರಿಕದ ಪಾಲಿನ ಪುರಾತನ ಶತ್ರುವಾಗಿರುವ ಉತ್ತರ ಕೊರಿಯಾ ತನ್ನ ಬಳಿ ಇರುವ ಅಸ್ತ್ರಗಳನ್ನು ತೋರಿಸಿಯೇ ಭಯ ಹುಟ್ಟಿಸುತ್ತಾ ಬಂದಿದೆ. ಅದರಲ್ಲೂ ಉತ್ತರ ಕೊರಿಯಾ ಆಡಳಿತ ಕಿಮ್ ಜಾಂಗ್ ಉನ್ ಕೈಗೆ ಸಿಕ್ಕ ನಂತರ ಬರೀ ಜಗಳ & ಗಲಾಟೆ ನಡೆಯುತ್ತಲೇ ಇದೆ. ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಕೂಡ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆ ಕಿರಿಕ್ ಬೇಡ ಅಂತಾನೇ ಸೈಲೆಂಟ್ ಆಗಿದ್ದಾರೆ. ಹಾಗೇ ಇಷ್ಟೆಲ್ಲಾ ಬೆಳವಣಿಗೆ ನಡುವೆ ಸುಮ್ಮನೆ ಇರದ ಕಿಮ್ ಕೂಡ ತನ್ನ ಹಳೇ ಚಾಳಿ ಮುಂದುವರಿಸಿದ್ದು, ನೋಡ ನೋಡುತ್ತಲೇ ಮತ್ತಷ್ಟು ಪರಮಾಣು ಅಸ್ತ್ರಗಳ ರಾಶಿ ರೆಡಿ ಮಾಡಲು ಮುಂದಾಗಿರುವ ಆರೋಪ ಕೇಳಿ ಬಂದಿದೆ.

2 ಮಹತ್ವದ ಕ್ಷಿಪಣಿಗಳ ಪರೀಕ್ಷೆ
ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಸೇನಾಪಡೆ ಈಗ ಮಹತ್ವದ 2 ಮಿಸೈಲ್ ಟೆಸ್ಟ್ ಮಾಡಿದೆ. ಉತ್ತರ ಕೊರಿಯಾ ಸುದ್ದಿವಾಹಿನಿ ನೀಡಿರುವ ಮಾಹಿತಿ ಪ್ರಕಾರ, ದೂರಗಾಮಿ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ಪರಮಾಣು ಸಾಮರ್ಥ್ಯ ಕೂಡ ಹೊಂದಿದೆ. ಈ ಕಾರಣಕ್ಕೆ ಕಿಮ್ ಜಾಂಗ್ ಉನ್ ಮಾಡಿರುವ ಕಿತಾಪತಿ ಮತ್ತಷ್ಟು ಭಯ ಹುಟ್ಟಿಸಿದೆ.
ಖುದ್ದಾಗಿ ಇದನ್ನು ವೀಕ್ಷಣೆ ಮಾಡಿರುವ ಕಿಮ್ ಜಾಂಗ್ ಉನ್ ಶತ್ರುಗಳ ಎದೆಯಲ್ಲಿ ಹೊಸ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾನಾ? ಎಂಬ ಪ್ರಶ್ನೆ ಮೂಡಿಸಿದ್ದಾನೆ. ಅಮೆರಿಕ ಸೇರಿದಂತೆ ತನ್ನ ಶತ್ರು ನೆಲ ಸುಲಭವಾಗಿ ತಲುಪಲು ಉತ್ತರ ಕೊರಿಯಾ ಇದೀಗ ಮತ್ತಷ್ಟು ಕ್ಷಿಪಣಿಗಳನ್ನು ಪರೀಕ್ಷೆ ಮಾಡುತ್ತಿದ್ದು, ಜಾಗತಿಕವಾಗಿ ಈಗಾಗಲೇ ಹಲವು ನಿರ್ಬಂಧ ಎದುರಿಸುತ್ತಿದೆ.
ಮಗಳಿಗೆ ಪಟ್ಟ ಕಟ್ಟಲು ತಯಾರಿ?
ಉತ್ತರ ಕೊರಿಯಾ ಆಡಳಿತ ಒಂದೇ ವಂಶದ ಕೈಗೆ ಸಿಲುಕಿದ್ದು, ಕಿಮ್ ಜಾಂಗ್ ಉನ್ ತನ್ನ ತಂದೆ ಸಾವಿನ ನಂತರ ಅಧಿಕಾರಕ್ಕೆ ಬಂದಿದ್ದ. ಮುಂದೆ ಕಿಮ್ ಜಾಂಗ್ ಉನ್ ತಂಗಿ ಉತ್ತರ ಕೊರಿಯಾ ಸರ್ವಾಧಿಕಾರಿ ಆಗಲಿದ್ದಾರೆ ಅನ್ನೋ ಮಾತು ಇತ್ತು. ಆದರೆ ಅಂತಿಮವಾಗಿ ಕಿಮ್ ಜಾಂಗ್ ಉನ್ ಮಗಳಿಗೆ ಪಟ್ಟ ಕಟ್ಟುವ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ಮುಂದಿನ ವರ್ಷ, ಅಂದರೆ ಕಿಮ್ ಮಗಳಿಗೆ 2026 ಮುಗಿಯುವ ಒಳಗೆ ಪಟ್ಟಾಭಿಷೇಕ ಆಗುತ್ತಾ? ಅನ್ನೋ ಚರ್ಚೆ ಕೂಡ ಜೋರಾಗಿದೆ. ಯಾಕಂದ್ರೆ ಕಿಮ್ ಜಾಂಗ್ ಉನ್ ಆರೋಗ್ಯ ಪದೇ ಪದೇ ಕೈಕೊಡುತ್ತಿರುವ ಊಹಾಪೋಹ ಕೂಡ ಆಗಾಗ ಸಂಚಲನ ಸೃಷ್ಟಿ ಮಾಡುತ್ತಿದೆ.












Click it and Unblock the Notifications