ಕೈಯಲ್ಲಿ ಕಾಸಿಲ್ಲದೆ ರಾಯಭಾರ ಕಚೇರಿಗಳನ್ನೇ ಮುಚ್ಚುತ್ತಿದೆ ಈ ದೇಶ!
ಒಂದು ದೇಶಕ್ಕೆ ಹೆಂಗೆಲ್ಲಾ ಆದಾಯ ಬರುತ್ತೆ ಹೇಳಿ? ಒಂದೋ ತನ್ನ ದೇಶದಲ್ಲೇ ವಸ್ತುಗಳ ಉತ್ಪಾದನೆ ಮಾಡಿ, ಅದನ್ನ ಹೊರ ದೇಶಕ್ಕೆ ಮಾರಾಟ ಮಾಡಬೇಕು. ಇಲ್ಲವೇ ಬೇರೆ ಬೇರೆ ದೇಶಗಳಲ್ಲಿ ಹೂಡಿಕೆ ಮಾಡಿರಬೇಕು. ಆದರೆ ಇಲ್ಲೊಂದು ದೇಶ ಇದೆ ಆ ದೇಶದ ಆದಾಯ ಅವಲಂಬಿಸಿರುವುದೇ ಡ್ರಗ್ಸ್ & ವೆಪನ್ ಮಾಫಿಯಾ ಮೇಲೆ ಎಂಬ ಗಂಭೀರವಾದ ಆರೋಪ ಇದೆ. ಇಂತಹ ದೇಶಕ್ಕೆ ಇದೀಗ ತೀವ್ರವಾದ ಆರ್ಥಿಕ ಸಂಕಷ್ಟ ಎದುರಾಗಿದೆಯಂತೆ!
ಹೌದು, ನಾವು ಹೇಳುತ್ತಿರುವುದು ಸರ್ವಾಧಿಕಾರಿ ನಾಡು ಎಂದೇ ಫೇಮಸ್ ಆಗಿರುವ ಕಿಮ್ ಜಾಂಗ್ ಉನ್ ತವರು ಉತ್ತರ ಕೊರಿಯಾ ಬಗ್ಗೆ. ಈ ದೇಶದಲ್ಲಿ ಬಡತನ ತಾಂಡವವಾಡಿ, ಜನರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಆದರೆ ಅದನ್ನ ಸರಿ ಮಾಡುವುದು ಬಿಟ್ಟು, ಸ್ವತಃ ಕಿಮ್ ಜಾಂಗ್ ಉನ್ ಡ್ರಗ್ಸ್, ವೆಪನ್ ಹಾಗೂ ಹ್ಯಾಕಿಂಗ್ ದಂಧೆಕೋರರಿಗೆ ಜಾಗ ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಇದೆ. ಹೀಗೆ ಇಷ್ಟೆಲ್ಲಾ ಆರೋಪಗಳ ಮಧ್ಯೆ ಈಗ ಉತ್ತರ ಕೊರಿಯಾ ಬೇರೆ ಬೇರೆ ದೇಶದಲ್ಲಿ ಇದ್ದ ತನ್ನ ರಾಯಭಾರ ಕಚೇರಿಗಳಿಗೆ ಬೀಗ ಹಾಕಲು ಮುಂದಾಗಿದೆ. ಯಾಕೆ ಗೊತ್ತಾ?

ಉತ್ತರ ಕೊರಿಯಾ ಬೀದಿಪಾಲು?
ಬೇಡ ಬೇಡ ಅಂದರೂ ಮಾತು ಕೇಳದೆ, ಪ್ರತಿಬಾರಿ ನ್ಯೂಕ್ಲಿಯರ್ ಅಂದರೆ ಪರಮಾಣುಗಳ ಅಸ್ತ್ರ ಪರೀಕ್ಷೆ ಮಾಡುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಇಡೀ ದೇಶವನ್ನೇ ಬೀದಿಗೆ ತಳ್ಳಿರುವ ಆರೋಪ ಕೇಳಿಬರುತ್ತಿದೆ. ಈ ಕಾರಣಕ್ಕೆ ಕೈಯಲ್ಲಿ ಹಣ ಇಲ್ಲದೆ, ಉ.ಕೊರಿಯಾ ಸರ್ಕಾರ ಇದೀಗ ಸ್ಪೇನ್, ಹಾಂಗ್‌ಕಾಂಗ್ ಸೇರಿದಂತೆ ಆಫ್ರಿಕಾದ ದೇಶಗಳಲ್ಲಿದ್ದ ರಾಯಭಾರ ಕಚೇರಿಗಳನ್ನು ಮುಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಸಮಸ್ಯೆಗೆ ಕಾರಣ ಆಗಿರುವುದು ಕಿಮ್ ಜಾಂಗ್ ಉನ್ ವರ್ತನೆ ಹಾಗೂ ನಡತೆ.
ನೂರಾರು ಕ್ಷಿಪಣಿಗಳ ಟೆಸ್ಟಿಂಗ್!
1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ಕೆಲ ತಿಂಗಳ ಹಿಂದಷ್ಟೆ ಮೊದಲ ಮಿಲಿಟರಿ ಉಪಗ್ರಹ ಉಡಾವಣೆಗೆ ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದ್ದ. ಹೀಗೆ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಆದರೆ ಈ ಪ್ರಯೋಗ ವಿಫಲವಾಗಿ ಉತ್ತರ ಕೊರಿಯಾದ ಮಿಲಿಟರಿ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಇಷ್ಟಾದ್ರೂ ತನ್ನ ಪ್ರಯತ್ನ ಬಿಡದ ಕಿಮ್ ರಷ್ಯಾ ಬಳಿ ಚರ್ಚೆ ನಡೆಸಿದ್ದು ಉಪಗ್ರಹ ತಂತ್ರಜ್ಞಾನ ಪಡೆಯಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇನ್ನೊಂದು ಕಡೆ ಸರ್ವಾಧಿಕಾರಿ ತೋರಿಸುತ್ತಿರುವ ಇಂತಹ ವರ್ತನೆ ಕಾರಣಕ್ಕೆ, ಅಮೆರಿಕ ಸೇರಿ ಹಲವು ರಾಷ್ಟ್ರಗಳು ಉತ್ತರ ಕೊರಿಯಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಿವೆ.
ಕಿರಿಕ್ ಪಾರ್ಟಿಗೆ ಬಿಗ್ ಶಾಕ್!
ಅಂದಹಾಗೆ ಕಿಮ್ ಜಾಂಗ್ ಉನ್ ಸುಮ್ಮನೆ ಕೂರುವ ಸರ್ವಾಧಿಕಾರಿ ಅಲ್ಲ. ಅಕಸ್ಮಾತ್ ಆ ವ್ಯಕ್ತಿ ಸುಮ್ಮನೆ ಕೂತಿದ್ರೆ, ಆತನ ಸರ್ವಾಧಿಕಾರಿ ಅಂತಾ ಕರೆಯಲು ಆಗುತ್ತಾ ಇರಲಿಲ್ಲ. ಏನಾದರೂ ಕಿತಾಪತಿ ಮಾಡುತ್ತಾ, ಶತ್ರು ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಲ್ಲುವುದೇ ಈತನ ಬ್ಯುಸಿನೆಸ್. ಹೀಗಾಗಿ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಕಿಮ್ ತನ್ನ ದೇಶವನ್ನೂ ಇದೀಗ ಸಂಕಷ್ಟದ ಸುಳಿಗೆ ಸಿಲುಕಿಸಿರುವುದು ಸುಳ್ಳಲ್ಲ.

ಒಟ್ಟಾರೆ ಉತ್ತರ ಕೊರಿಯಾದಲ್ಲಿ ಬಡತನ ಎದುರಾಗಿದ್ದು, ಜನ ಪರದಾಡುತ್ತಿದ್ದಾರೆ ಎಂದು ಪದೇ ಪದೆ ಅಮೆರಿಕ & ಅಮೆರಿಕ ಮಿತ್ರರು ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳ ಅಬ್ಬರದಲ್ಲೂ, ಕಿಮ್ ಜಾಂಗ್ ಉನ್ ಮಾತ್ರ ನೆಮ್ಮದಿಯಾಗಿ ತನ್ನ ಪಾಡಿಗೆ ತಾನು ಕ್ಷಿಪಣಿ ಪರೀಕ್ಷೆಗೆ ಸಜ್ಜಾಗಿದ್ದಾನೆ. ಇದರ ಜೊತೆಗೆ ಈಗ ಉಪಗ್ರಹಗಳ ಶೋಕಿ ಬೇರೆ ಸರ್ವಾಧಿಕಾರಿಗೆ ಅಂಟಿಕೊಂಡಿರುವುದು ವಿಷಾದದ ಸಂಗತಿ.












Click it and Unblock the Notifications