ಅಬ್ಬಾ! ಬೆಳಕಿಗಿಂತ ವೇಗವಾಗಿ ಹಾರುವ ಆಕಾಶನೌಕೆ
ವಾಷಿಂಗ್ಟನ್, ಜೂನ್ 14: ಅಬ್ಬಬ್ಬಾ! ನಿಸರ್ಗ ಸಹಜ ಬೆಳಕಿಗಿಂತ ವೇಗವಾಗಿ ಹಾರಬಲ್ಲ ವಸ್ತು ಯಾವುದು? ಎಂಬ ಯಕ್ಷ ಪ್ರಶ್ನೆಗೆ ಉತ್ತರಿಸಬೇಕೆಂದರೆ ಮನಸ್ಸು ಅನ್ನಬಹುದು. ಆದರೆ ವಾಸ್ತವದಲ್ಲಿ ಇಷ್ಟು ವೇಗವಾಗಿ ಹಾರುವುದು ಯಾವುದಾದರೂ ಇದೆಯಾ? ಎಂಬುದಕ್ಕೆ ಆಧುನಿಕ ಯುಗ ಉತ್ತರ ಕಂಡುಕೊಂಡಿದೆ.
ಹೌದು, ಮನುಷ್ಯ ನಿರ್ಮಿತ ಆಕಾಶನೌಕೆ ಇದೀಗ ಬೆಳಕಿಗಿಂತ ವೇಗವಾಗಿ ಹಾರಬಲ್ಲದಂತೆ. ಅಂದಹಾಗೆ ಅಮೆರಿಕದ ನಾಸಾ ವಿಜ್ಞಾನಿಗಳು ಇಂತಹ ಆಕಾಶನೌಕೆ ತಯಾರು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಯಶಸ್ವಿಯಾದರೆ ಅದು ಬೆಳಕಿಗಿಂತ ವೇಗವಾಗಿ ಹಾರಬಲ್ಲದು ಅನ್ನುತ್ತಾರೆ ಅಲ್ಲಿನ ವಿಜ್ಞಾನಿಗಳು.

ಮೊದಲೇ ಅಮೆರಿಕದವರು ಹಾಲಿವುಡ್ ಪಿಕ್ಚರುಗಳಲ್ಲಿ ಜನರಿಗೆ ಏನೇನೋ ಮೋಡಿ ಮಾಡಿ ತೋರಿಸಿದ್ದಾರೆ. ತೆಲುಗು ಪೌರಾಣಿಕ ಚಿತ್ರಗಳಲ್ಲೂ ಹಾಗೆಯೇ ಅಲ್ವಾ? ಕಲ್ಪನೆಯನ್ನೇ ಪರದೆಯ ಮೇಲೆ ಭಟ್ಟಿಯಿಳಿಸುತ್ತಿದ್ದರು. ಇಲ್ಲೂ ಅದೇ ಆಗಿದೆ. ಹಾಲಿವುಡ್ ಪಿಕ್ಚರಿನಲ್ಲಿ ತೋರಿಸಿದ್ದನ್ನು (Star Trek) ನಾವೇಕೆ ಜನರಿಗೆ ವಾಸ್ತವವಾಗಿ ತೋರಿಸಬಾರದು ಎಂಬ ಹುಕಿಗೆ ಬಿದ್ದವರೆ ನಾಸಾ ವಿಜ್ಞಾನಿಗಳಿಬ್ಬರೂ ಇದೀಗ ಬೆಳಕಿಗಿಂತ ವೇಗದ ಆಕಾಶನೌಕೆಯನ್ನು ತಯಾರಿಸುತ್ತಿದ್ದಾರೆ.
ನಾಸಾ ವಿಜ್ಞಾನಿಗಳಾದ ಹರೋಲ್ಡ್ ವೈಟ್ ಮತ್ತು ಮಾರ್ಕ್ ರೇಡ್ ಮೇಕರ್ ಎಂಬಿಬ್ಬರು IXS Enterprise Space ship ತಯಾರಿಯಲ್ಲಿ ಅದಾಗಲೇ ಮಗ್ನರಾಗಿದ್ದಾರೆ. ಯುವಜನತೆಗೆ ಪ್ರೇರಕವಾಗಲು ಇಂತಹ ನಿರ್ಮಾಣಕ್ಕೆ ಕೈಹಾಕಿದ್ದಾರಂತೆ. STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಮ್ಯಾಥಮ್ಯಾಟಿಕ್ಸ್) ಕ್ಷೇತ್ರದಲ್ಲಿ ಯುವ ವಿಜ್ಞಾನಿಗಳನ್ನು ಪ್ರೇರೇಪಿಸಲು ಸ್ಪೇಸ್ ಶಿಪ್ ತಯಾರಿಸುತ್ತಿರುವುದಾಗಿ ಅವರಿಬ್ಬರೂ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತಿಳಿಸಿದ್ದಾರೆ.
ಇದು ವಿಜ್ಞಾನ ಮತ್ತು ಕಾಲ್ಪನಿಕ ಅಂಶಗಳನ್ನು ಒಳಗೊಂಡಿರುತ್ತದೆ. ವಾಸ್ತವದಲ್ಲಿ ಇದು ಸಾಕಾರಗೊಳ್ಳುವುದು ಅಸಾಧ್ಯ. ಆದರೆ ನಮ್ಮ ಪ್ರಯತ್ನ ಬಿಡುವುದಿಲ್ಲ ಎಂದು ಅವರಿಬ್ಬರೂ ಅಪಾರ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಹೀಗೆ ಅಸಾಧ್ಯವಾಗಿರುವುದನ್ನು ಸಾಧಿಸಿ ತೋರಿಸುವ ನಿಟ್ಟಿನಲ್ಲಿ ವಿಜ್ಞಾನಿ ಐನ್ಸ್ ಟೀನ್ ಮಹಾ ಮೇಧಾವಿಯ ಥಿಯರಿ ಆಫ್ ರಿಲೇಟಿವಿಟಿ ಪ್ರಮೇಯದಲ್ಲಿ ಹಾಗೆಯೇ ಉಳಿದುಬಿಟ್ಟಿರುವ ಲೋಪವೊಂದನ್ನು ಸರಿಪಡಿಸುವ ಹುಕಿಗೂ ಬಿದ್ದಿದ್ದಾರೆ.

ಅಂದರೆ ವಸ್ತುವೊಂದರ ಹಿಂದೆಯಿರುವ ಜಾಗ ಮತ್ತು ಸಮಯವನ್ನು ವಿಶಾಲಗೊಳಿಸುವುದರ ಜತೆಗೆ ಆ ವಸ್ತುವಿನ ಮುಂದೆಯಿರುವ ಜಾಗ ಮತ್ತು ಸಮಯವನ್ನು ಕಿರಿದಾಗಿಸುವುದರಿಂದ ಇದನ್ನು ಸಾಧ್ಯವಾಗಿಸಬಹುದು ಅಂತನೋ ಅವರಿಬ್ಬರೂ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಇದೇನಾದಾರೂ ಸಾಧ್ಯವಾದರೆ, ಈಗ ದೂರದ ಆಕಾಶಕಾಯಗಳತ್ತ ಸಾಗಲು ವರ್ಷಾನುಗಟ್ಟಲೆ ಸಮಯ ಹಿಡಿಸುತ್ತಿದೆ. ಆ ದೂರವನ್ನು ಭವಿಷ್ಯದಲ್ಲಿ ಒಂದೆರಡು ವಾರಗಳ ಅವಧಿಯಲ್ಲಿ ಕ್ರಮಿಸಬಹುದಾಗಿದೆ ಎಂಬುದು ಅವರಿಬ್ಬರ ಲೆಕ್ಕಾಚಾರ. ಉದಾಹರಣೆಗೆ Alpha Centauri ಗೆ ಒಂದೆರಡು ವಾರಗಳಲ್ಲಿ ತಲುಪಬಹುದಂತೆ. ಅದೆಲ್ಲಿದೆ ಆಲ್ಫಾ ಸೆಂಚುರಿ ಅಂತ ಕೇಳಿದಿರಾ? ಅದು ನಮ್ಮಿಂದ 4.3 ಬೆಳಕಿನ ವರ್ಷ ದೂರದಲ್ಲಿದೆ!
ಏನೇ ಆಗಲಿ ಹರೋಲ್ಡ್ ವೈಟ್ ಮತ್ತು ಮಾರ್ಕ್ ರೇಡ್ ಮೇಕರ್ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.












Click it and Unblock the Notifications