ಬಾಹ್ಯಾಕಾಶದ ಸುಂದರ ಚಿತ್ರ ಸೆರೆಹಿಡಿದ ನಾಸಾದ 'ಟೆಸ್'
Recommended Video

ವಾಷಿಂಗ್ಟನ್, ಸೆಪ್ಟೆಂಬರ್ 19: ಬಾಹ್ಯಾಕಾಶದಲ್ಲಿ ಹೊಸ ಗ್ರಹಗಳನ್ನು ಪತ್ತೆಹಚ್ಚಲು ನಾಸಾ ಉಡಾಯಿಸಿದ್ದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟೆಸ್) ದಕ್ಷಿಣ ಆಕಾಶದ 'ಫರ್ಸ್ಟ್ ಲೈಟ್' ಚಿತ್ರವನ್ನು ರವಾನಿಸಿದೆ.
ಟೆಸ್ ಕಳುಹಿಸಿದ ಚಿತ್ರವನ್ನು ನಾಸಾ ಹಂಚಿಕೊಂಡಿದೆ. 'ಫರ್ಸ್ಟ್ ಲೈಟ್' ಎಂದರೆ ಬಾಹ್ಯಾಕಾಶ ವಿಜ್ಞಾನ ಭಾಷೆಯಲ್ಲಿ, ಟೆಲಿಸ್ಕೋಪ್ ಒಂದು ರಚನೆಯಾದ ಬಳಿಕ ಮೊದಲ ಬಾರಿಗೆ ಚಿತ್ರಗಳನ್ನು ಪಡೆದುಕೊಳ್ಳುವುದು.

ಟೆಸ್ ಕಳುಹಿಸಿರುವ ಚಿತ್ರದಲ್ಲಿ ಸುಮಾರು 2 ಲಕ್ಷ ನಕ್ಷತ್ರಗಳು ಇವೆ. ಟೆಸ್ ಭೂಮಿಗೆ ಚಿತ್ರ ಕಳುಹಿಸಿರುವುದು ಇದು ಮೊದಲೇನಲ್ಲ. ಪರೀಕ್ಷೆಯ ಹಂತದಲ್ಲಿ ಕೇವಲ ಒಂದು ಕ್ಯಾಮೆರಾ ಬಳಸಿ ಬಾಹ್ಯಾಕಾಶದ ಎರಡು ಸೆಕೆಂಡ್ ಪರೀಕ್ಷಾರ್ಥ ಚಿತ್ರವನ್ನು ಕ್ಲಿಕ್ಕಿಸಿತ್ತು.
ಉಪಗ್ರಹದ ಎಲ್ಲ ನಾಲ್ಕು ಕ್ಯಾಮೆರಾಗಳನ್ನು ಬಳಸಿಕೊಂಡು ಈ ಚಿತ್ರ ತೆಗೆಯಲಾಗಿದೆ. ಇದರಿಂದ ದಕ್ಷಿಣ ಆಕಾಶದ 16 ವಿಭಿನ್ನ ಚಿತ್ರಗಳನ್ನು ಒಂದೆಡೆ ಸೇರಿಸುವ ಪನೋರಮಾ ಚಿತ್ರ ದೊರೆತಿದೆ.
ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳು ಇರುವ ಚಿತ್ರ ಸರಣಿಯಲ್ಲಿ ಕ್ಷೀರಪಥ ಗ್ಯಾಲಕ್ಸಿಗೆ ಸಮೀಪವಿರುವ ಬೃಹತ್ ಮತ್ತು ಸಣ್ಣ ಮೋಡಗಳು (ಮ್ಯಾಗೆಲ್ಲಾನಿಕ್ ಕ್ಲೌಡ್), ಕ್ಷೀರಪಥದ ಸುತ್ತ ಸುತ್ತುತ್ತಿರುವ ಎರಡು ಕುಬ್ಜ ಗ್ಯಾಲಕ್ಸಿಗಳು ಮತ್ತು ಬೆಟಾ ಗ್ರುಯಿಸ್ ಮತ್ತು ಆರ್ ಡೊರಾಡಸ್ ಎಂಬ ಎರಡು ಪ್ರಕಾಶಮಾನ ನಕ್ಷತ್ರಗಳು ಸಹ ಸೆರೆಯಾಗಿವೆ.

ಫರ್ಸ್ಟ್ ಲೈಟ್ ಚಿತ್ರವು ಟೆಸ್ ಕ್ಯಾಮೆರಾಗಳ ಸಾಮರ್ಥ್ಯವನ್ನು ತೋರಿಸಿದೆ. ಮತ್ತೊಂದು ಭೂಮಿಯನ್ನು ಹುಡುಕುವ ನಮ್ಮ ಯೋಜನೆಗೆ ನಂಬಲಸಾಧ್ಯವಾದಷ್ಟು ಶಕ್ತಿ ಇದೆ ಎನ್ನುವುದನ್ನು ಇದು ಸಾಬೀತುಪಡಿಸಿದೆ ಎಂದು ನಾಸಾದ ವಿಜ್ಞಾನಿ ಪೌಲ್ ಹೆರ್ಟ್ಜ್ ಹೇಳಿದ್ದಾರೆ.
ಹೊಸ ಗ್ರಹಗಳನ್ನು ಅನ್ವೇಷಣೆ ಮಾಡುವ ಯೋಜನೆಯಲ್ಲಿ ಟೆಸ್ 27 ದಿನಗಳ ಕಾಲ ಬಾಹ್ಯಾಕಾಶದ ಚಿತ್ರಗಳನ್ನು ಸೆರೆಹಿಡಿಯಲಿದೆ. ತನ್ನ ಮೊದಲ ಒಂದು ವರ್ಷ ಅದು ದಕ್ಷಿಣ ಭಾಗದ ಆಕಾಶದತ್ತ ಕೇಂದ್ರೀಕರಿಸಲಿದೆ. ನಂತರದ ವರ್ಷ ಉತ್ತರ ಭಾಗದತ್ತ ಪಥ ಬದಲಿಸಲಿದೆ.












Click it and Unblock the Notifications