
ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ
ಮಿಲಿಟರಿ ವಿರುದ್ಧ ಭಿನ್ನಾಭಿಪ್ರಾಯವನ್ನು ಪ್ರಚೋದನೆ ಮತ್ತು ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾನ್ಮಾರ್‌ನ ಉಚ್ಚಾಟಿತ ಪ್ರಧಾನಿ ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದೆ. ಮ್ಯಾನ್ಮಾರ್‌ನ ನ್ಯಾಯಾಲಯವು ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಶಿಕ್ಷೆ ಘೋಷಿಸಿದೆ.
ಫೆಬ್ರವರಿ 1ರಂದು ಆಂಗ್ ಸಾನ್ ಸೂಕಿಯಿಂದ ಅಧಿಕಾರ ವಶಪಡಿಸಿಕೊಂಡಿದ್ದ ಮ್ಯಾನ್ಮಾರ್ ಸೇನೆ, ಸೂಕಿ ಸೇರಿದಂತೆ ಅವರ ಸಂಪುಟದ ಸಹೋದ್ಯೋಗಿಗಳನ್ನು ಜೈಲಿಗೆ ತಳ್ಳಿತ್ತು.
ಸೂಕಿ ವಿರುದ್ಧ ಒಟ್ಟು 6 ಆರೋಪಗಳಿದ್ದು, ಇದರಲ್ಲಿ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದ ಗಂಭೀರ ಆರೋಪವೂ ಸೇರಿದೆ. ಇದರ ಜೊತೆಗೆ ಸೂಕಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೂಡ ಸೇರಿದ್ದು, ನ್ಯಾಯಾಲಯದ ವಿಚಾರಣೆ ಎದುರಿಸಿದ್ದಾರೆ ಆಂಗ್ ಸಾನ್ ಸೂಕಿ.
ಸೂಕಿ ಮೇ ತಿಂಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಇನ್ನೊಂದೆಡೆ ಮ್ಯಾನ್ಮಾರ್ ಹೊತ್ತಿ ಉರಿಯುತ್ತಿದೆ. ರೊಹಿಂಗ್ಯಾ ಹತ್ಯಾಕಾಂಡ ನಡೆದು ಕೆಲವೇ ವರ್ಷದಲ್ಲಿ ಮ್ಯಾನ್ಮಾರ್ ಮತ್ತೆ ಧಗಧಗಿಸುತ್ತಿದೆ.
ಈವರೆಗೂ 800ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಮ್ಯಾನ್ಮಾರ್ ಸೇನೆ ಕೊಂದು ಹಾಕಿದ್ದು, ಇದೇ ರಿವೇಂಜ್‌ಗೆ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು 13 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಇತ್ತೀಚೆಗೆ ಸಾವಿರಾರು ಪೊಲೀಸರು ಮ್ಯಾನ್ಮಾರ್‌ನಿಂದ ಓಡಿ ಹೋಗಿದ್ದರು, ಬಳಿಕ 1 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನ ಸಸ್ಪೆಂಡ್ ಮಾಡಿತ್ತು ಮ್ಯಾನ್ಮಾರ್ ಸೇನಾ ಸರ್ಕಾರ. ಪ್ರತ್ಯುತ್ತರವಾಗಿ ಪ್ರತಿಭಟನಾಕಾರರು 13 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದು, ಮತ್ತೊಮ್ಮೆ ಹಿಂಸೆಯ ಬೆಂಕಿ ಧಗಧಗಿಸುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಸಿಗುವ ಲಕ್ಷಣಗಳೇ ಕಾಣ್ತಿಲ್ಲ. ಇದು ಜನರನ್ನ ಮತ್ತಷ್ಟು ಚಿಂತೆಗೀಡು ಮಾಡಿದೆ.
ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್‌ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಕಂಡಲ್ಲಿ ಗುಂಡಿಟ್ಟು ಜನರನ್ನ ಕೊಲೆ ಮಾಡುತ್ತಿದೆ ಸೇನೆ.
ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಮ್ಯಾನ್ಮಾರ್ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿ, ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿದೆ. ಸೇನೆ ಹಿಡಿತಕ್ಕೆ ಹೋದ ನಂತರ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದ್ದು, ಸೇನೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಜನ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಕೂಡ, ಸೇನಾಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿ ಕದಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಭಾರತ ಹಾಗೂ ಮ್ಯಾನ್ಮಾರ್ ಗಡಿ 1643 ಕಿ.ಮೀ ಹಂಚಿಕೆಯಾಗಿದೆ. ಮಿಜೋರಾಂನ ಛಂಫಾಯಿ ಹಾಗೂ ಶೇರ್ಛಿಪ್ ಗಡಿ ದಾಟಿ ಈ ಸಿಬ್ಬಂದಿಗಳು ಬಂದಿದ್ದಾರೆ. ಸಿಬ್ಬಂದಿಗಳು ನಿಶಸ್ತ್ರಧಾರಿಗಳಾಗಿದ್ದರು, ಕೆಳ ಸ್ತರದ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಪ್ತಚರ ವರದಿ ಪ್ರಕಾರ ಭಾರತದತ್ತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಕೋರಿ ಮ್ಯಾನ್ಮಾರ್ ಜನರು ಬರಲಿದ್ದಾರೆ.