ಕೊರೊನಾ ಲಾಕ್‌ಡೌನ್: ಸಾವಿರಾರು ಮಂದಿಯ ಹೃದಯ ಗೆದ್ದ ಸ್ಕಾಟಿಶ್ ದಂಪತಿ
ಸ್ಕಾಟ್‌ಲೆಂಡ್, ಏಪ್ರಿಲ್ 18: ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿದೆ. ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.
ಇಂತಹ ಸಮಯದಲ್ಲಿ ಸ್ಕಾಟ್‌ಲೆಂಡ್‌ನ ಫಾಲ್‌ಕಿರ್ಕ್‌ನ ದಂಪತಿ ಮಾನವೀಯತೆ ಮೆರೆದಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಸಾವಿರಾರು ಮಂದಿಗೆ ಆಹಾರ ನೀಡಿದ್ದಾರೆ.
ಸಾವಿರಾರು ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್‌ವಾಶ್‌ಗಳನ್ನು ನೋಡಿ ಅವರ ಆರೋಗ್ಯವನ್ನೂ ಕಾಪಾಡಿದ್ದಾರೆ. ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಲಾಕ್‌ಡೌನ್ ಮುಗಿದ ಮೇಲೂ ಕೂಡ ಆಹಾರ ವಿತರಣೆಯನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ. ನಾವು ಇಲ್ಲಿರುವಾಗ ನಮ್ಮ ಸುತ್ತಮುತ್ತಲಿನಲ್ಲಿರುವವರಿಗೆ ಯಾವ ರೀತಿ ತೊಂದರೆಯಾಗಲೂ ನಾವು ಬಿಡುವುದಿಲ್ಲ ಎಂದು ದಂಪತಿ ತಿಳಿಸಿದ್ದಾರೆ.

ಎನ್‌ಎಚ್‌ಎಸ್ ಸಿಬ್ಬಂದಿ ಸಾವು
ಯುಕೆಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುತ್ತಿದ್ದ ಸಾಕಷ್ಟು ಆರೋಗ್ಯ ಸಿಬ್ಬಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕಾರಣ ಯುಕೆ ಸರ್ಕಾರದ ಬಳಿ ಪರ್ಸನಲ್ ಪ್ರೊಟೆಕ್ಟೀವ್ ಇಕ್ವಿಪ್‌ಮೆಂಟ್(ಪಿಪಿಇ) ಕೊರತೆ. ಇದರಿಂದಾಗಿಯೇ ಬಹಳ ಮಂದಿ ಸಾವನ್ನಪ್ಪಿದ್ದಾರೆ. ಇಂತವರ ನೆರವಿಗೆ ಆಸಿಯಾ ಹಾಗೂ ಪತಿ ಜಾವದ್ ಧಾವಿಸಿದ್ದಾರೆ.

ಯಾರಿಗೆ ಮಾಸ್ಕ್ ಅಗತ್ಯವಿದೆ ಎಂಬುದು ಮುಖ್ಯವಾಗಿತ್ತು
ಉಚಿತವಾಗಿ ಮಾಸ್ಕ್ ನೀಡಬೇಕು ಎಂದು ಆಲೋಚನೆ ಮಾಡಿದ್ದೆವು, ಬಳಿಕ ಎನ್‌ಎಚ್‌ಎಸ್ ಸಿಬ್ಬಂದಿಗಳಿಗೆ ಯಾವುದೇ ರಕ್ಷಣೆ ಇಲ್ಲ, ಅವರು ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಂತವರಿಗೆ ಮಾಸ್ಕ್ ನೀಡಬೇಕೆಂದು ನಿರ್ಧರಿಸಿದೆವು. ಅವರಿಂದ ಯಾವುದೇ ಹಣ ನಿರೀಕ್ಷೆ ಮಾಡುವುದಿಲ್ಲ ಎಂದು ಆಸಿಯಾ ಹೇಳುತ್ತಾರೆ.

ಅವರ ಉಳಿತಾಯದ ಹಣದಲ್ಲಿ 5 ಸಾವಿರ ಪೌಂಡ್ ಖರ್ಚು
ಅವರು ಉಳಿತಾಯ ಮಾಡಿದ್ದ ಹಣದಲ್ಲಿ 5 ಸಾವಿರ ಪೌಂಡ್ ಅಂದರೆ 4,78,488 ರೂ. ಖರ್ಚು ಮಾಡಿದ್ದಾರೆ. ಕಳೆದ ನಾಲ್ಕು ವಾರಗಳಿಂದ 3 ಸಾವಿರ ಮಾಸ್ಕ್‌ಗಳನ್ನು ವಿತರಿಸಿದ್ದಾರೆ. 1 ಸಾವಿರ ಮಂದಿಗೆ ಆಹಾರ ಒದಗಿಸಿದ್ದಾರೆ.

ಆಹಾರ ಉಚಿತವಾಗಿ ನೀಡುತ್ತೇವೆಂದು ಫೇಸ್‌ಬುಕ್‌ನಲ್ಲಿ ಹಾಕಿದ್ದೆವು
ಯುಕೆಯಲ್ಲಿ 1.5 ರಿಂದ 2 ಮಿಲಿಯನ್ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದು ಸಾಕಷ್ಟು ಮಂದಿಯನ್ನು ಬಡತನಕ್ಕೆ ದೂಡಿದೆ. ನಾವು ಊಟ ಮಾಡಿ ಬೇರೆಯವರು ಹಸಿದಿರುವುದನ್ನು ನೋಡಲಾಗಲಿಲ್ಲ.ಹಾಗಾಗಿ ಆಹಾರ ಉಚಿತವಾಗಿ ನೀಡುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದೆವು. ತಕ್ಷಣ 200-300 ಕರೆಗಳು ಬಂದಿದ್ದವು ಎಂದು ಜಾವದ್ ವಿವರಿಸಿದ್ದಾರೆ. ಲಾಕ್‌ಡೌನ್ ಮುಗಿದ ಮೇಲೂ ಕೂಡ ಫಾಲ್‌ಕಿರ್ಕ್‌ನಲ್ಲಿ ಆಹಾರ ಉಚಿತ ವಿತರಣೆಯನ್ನು ಮುಂದುವರೆಸುವ ಆಲೋಚನೆ ಮಾಡಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications