ಜೀವ, ಜೀವನ ಕಳೆದುಕೊಂಡು ಬೀದಿಗೆ ಬಿದ್ದ ಬಡ ಜನ
ಕೇವಲ 3 ದಿನಗಳ ಹಿಂದೆ ಅಲ್ಲಿನ ಜನರು ನಮ್ಮ, ನಿಮ್ಮಂತೆ ಜೀವನ ನಡೆಸುತ್ತಿದ್ದರು. ಆ ಭಾಗದಲ್ಲಿ ನೆಮ್ಮದಿ ನೆಲೆಸಿತ್ತು. ಆದರೆ ಪ್ರಕೃತಿ ಮಾತೆಯ ಮುನಿಸಿನ ಬಳಿಕ ಅಕ್ಷರಶಃ ನರಕ ಸೃಷ್ಟಿಯಾಗಿದೆ. ನೆಮ್ಮದಿಯ ಮಾತು ಬಿಡಿ, ಹೊಟ್ಟೆಗೆ ಅನ್ನ ಸಿಕ್ಕರೆ ಸಾಕು. ಬದುಕುಳಿದರೆ ಸಾಕಪ್ಪಾ ಎಂಬಂತಹ ಸ್ಥಿತಿ ಇದೀಗ ಅಲ್ಲಿ ಸೃಷ್ಟಿಯಾಗಿದೆ. ಎಲ್ಲಿ ನೋಡಿದ್ರೂ ಶವಗಳದ್ದೇ ರಾಶಿ ಕಾಣುತ್ತಿದೆ. ಭೂಕಂಪಕ್ಕೆ ನಲುಗಿದ ಮೊರೊಕ್ಕೊ ಸ್ಥಿತಿ ಬಗ್ಗೆ ಮಾಹಿತಿ ಇಲ್ಲಿದೆ.
ಭೂಕಂಪನ ಸಂಭವಿಸಿದ ನಂತರ ಮೊರಾಕ್ಕೊ ಸ್ಥಿತಿ ಹದಗೆಟ್ಟು ಹೋಗಿದೆ. ಶುಕ್ರವಾರ ರಾತ್ರಿ ಮೊರಾಕ್ಕೊದಲ್ಲಿ 6.8 ತೀವ್ರತೆ ಭೂಕಂಪ ಸಂಭವಿಸಿ ಸಾವಿರಾರು ಜನ ಮೃತಪಟ್ಟಿದ್ದರು. ಈ ವೇಳೆ ನೂರಾರು ಕಟ್ಟಡ ಕುಸಿದು ಬಿದ್ದವು. ಕಟ್ಟಡದ ಅವಶೇಷ ತೆರವು ಕಾರ್ಯಾಚರಣೆಗೆ ಜಗತ್ತಿನಾದ್ಯಂತ ಸಹಾಯ ಸಿಗುತ್ತಿದೆ. ಈ ಹೊತ್ತಲ್ಲಿ ಸಾವಿನ ಸಂಖ್ಯೆ ಕೂಡ ಊಹೆಗೆ ಮೀರಿ ಏರಿಕೆ ಕಾಣುತ್ತಿದೆ. ಈವರೆಗೂ 2,800 ಜನರ ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುವ ಭೀತಿ ಇದೆ.

ಜಗತ್ತಿನ ವಿವಿಧೆಡೆಯಿಂದ ನೆರವಿನ ಹಸ್ತ
ಪ್ರಬಲ ಭೂಕಂಪ ಸಂಭವಿಸಿದ್ದ ಮೊರೊಕ್ಕೊದಲ್ಲಿ ಮೃತರ ಸಂಖ್ಯೆ 2,800ರ ಗಡಿ ದಾಟಿದ್ದರೆ, ಅವಶೇಷಗಳ ಅಡಿ ಪವಾಡ ಎಂಬಂತೆ ಕೆಲವರು ಬದುಕುಳಿದ ಜೀವಂತವಾಗಿ ಸಿಕ್ಕಿದ್ದಾರೆ. ಈ ದುರಂತದಲ್ಲಿ 2,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೊರಕ್ಕೊ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ. ಮರ್ರಾಕೆಚ್ ನೈಋತ್ಯಕ್ಕೆ 71 ಕಿಲೋ ಮೀಟರ್ ದೂರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿತ್ತು. ಅಲ್ ಹೌಜ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜೀವ ಹಾನಿ ಉಂಟಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಜಗತ್ತಿನ ವಿವಿಧ ದೇಶಗಳು ಸಹಾಯಕ್ಕೆ ಈಗ ಮುಂದಾಗಿವೆ.
ದಿಢೀರ್ ಇಂತಹ ಪರಿಸ್ಥಿತಿ ಎದುರಾದ ನಂತರ ಮೊರೊಕ್ಕೊ ಬೆಚ್ಚಿಬಿದ್ದಿದೆ. ಈ ಕಾರಣಕ್ಕೇ ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಅಲ್ಲಿನ ಜನ ಪರದಾಡುತ್ತಿದ್ದರು. ಆದರೆ ಮೊರೊಕ್ಕೊ ಮಂದಿ ಸಂಕಷ್ಟಕ್ಕೆ ಹಲವು ದೇಶಗಳು ಕೈಜೋಡಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಪೇನ್, ಬ್ರಿಟನ್, ಕತಾರ್ & ಯುಎಇ ಸೇರಿ ಹಲವು ದೇಶಗಳಿಂದ ರಕ್ಷಣಾ ತಂಡ ಕಳುಹಿಸಲಾಗಿದೆ. ಈ ತಂಡಗಳು ಮೊರಕ್ಕೊ ಜೊತೆ ಕೈಜೋಡಿಸಿವೆ. ಹಾಗೇ ಭಾರತ ಕೂಡ ನೆರವಿನ ಭರವಸೆ ನೀಡಿದ್ದು, ಭೂಕಂಪದಿಂದ ನಲುಗಿದವರ ಸಂಕಷ್ಟಕ್ಕೆ ಸ್ಪಂದಿಸಿದೆ.

ಭೂಕಂಪದ ತವರು ಮೊರಾಕ್ಕೊ ನೆಲ
ಮೊರಾಕ್ಕೊ ಪದೇಪದೆ ಭೂಕಂಪನಕ್ಕೆ ತುತ್ತಾಗಿ ಪರದಾಡಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊ ಭಾಗದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 2004ರ ಭೂಕಂಪದಲ್ಲಿ 628 ಜನ ಮೃತಪಟ್ಟು, 926 ಜನ ಗಾಯಗೊಂಡು ಸುಮಾರು 15000 ಜನರು ಮನೆ ಕಳೆದುಕೊಂಡರು. 1960ರಲ್ಲಿ 5.8 ತೀವ್ರತೆಯ ಭೂಕಂಪನಕ್ಕೆ 12 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟರು, 35,000 ಹೆಚ್ಚು ಜನ ಬೀದಿಗೆ ಬಿದ್ದರು. ಹೀಗೆ ಹಲವು ಬಾರಿ ಭೂಕಂಪಕ್ಕೆ ನಲುಗಿದೆ ಮೊರಾಕ್ಕೊ. ಈ ಬಾರಿ ಮತ್ತೆ ದುರ್ಘಟನೆ ಸಂಭವಿಸಿದೆ.












Click it and Unblock the Notifications