Breaking News: ಅಫ್ಘಾನ್ ಸರ್ಕಾರಕ್ಕೆ ಮೊಹಮ್ಮದ್ ಹಸನ್ ನಾಯಕತ್ವ
ಕಾಬೂಲ್, ಸಪ್ಟೆಂಬರ್ 7: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಘೋಷಿಸಲಾಗಿದೆ. ಮೊಹಮ್ಮದ್ ಹಸನ್ ಅಖುಂದಾ ತಾಲಿಬಾನ್ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಫ್ಘಾನಿಸ್ತಾನ ಸರ್ಕಾರದ ನೂತನ ಪ್ರಧಾನಮಂತ್ರಿಯಾಗಿ ಮೊಹಮ್ಮದ್ ಹಸನ್ ಅಖುಂದಾರನ್ನು ಘೋಷಿಸಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಮಂತ್ರಿಯಾಗಿದ್ದಾರೆ.
ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಿ ಹಾಗೂ ಸಿರಾಜುದ್ದೀನ್ ಹಕ್ಕಾನಿ ಆಂತರಿಕ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಅಫ್ಘಾನ್ ಸರ್ಕಾರ ರಚನೆ ಘೋಷಣೆ ವಿಳಂಬಕ್ಕೆ ಕಾರಣ:
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಅಂತಿಮ ಹಂತದ ಘೋಷಣೆಯೊಂದೇ ಬಾಕಿ ಉಳಿದುಕೊಂಡಿದ್ದು, ಈ ವಿಷಯದಲ್ಲಿ ಕೆಲವು ದಿನಗಳಿಂದ ವಿಳಂಬ ಧೋರಣೆ ಪ್ರದರ್ಶಿಸಲಾಗುತ್ತಿದೆ. ಅಧಿಕಾರ ಹಂಚಿಕೆ ವಿಷಯದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ನಡುವಿನ ಭಿನ್ನಾಭಿಪ್ರಾಯವೇ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿತ್ತು.
ತಾಲಿಬಾನ್ ಸರ್ಕಾರ ರಚನೆ ಹಿಂದೆ ನಿಂತ ಐಎಸ್ಐ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಹಿಂದೆ ಇಸ್ಲಮಾಬಾದ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಪಾಕಿಸ್ತಾನ ಗುಪ್ತಚರ ಇಲಾಖೆಯೇ ಸೃಷ್ಟಿಕರ್ತ ಮತ್ತು ಬೆಂಬಲವಾಗಿ ನಿಂತಿದೆ ಎಂದು ಸೆರ್ಗಿಯೋ ರೆಸ್ಟೆಲ್ಲಿ ವರದಿಯಲ್ಲಿ ಬರೆದಿದ್ದಾರೆ. ತಾಲಿಬಾನ್ ಸರ್ಕಾರದ ರಚನೆಯು ಕಾಬೂಲ್‌ನಲ್ಲಿ ಹಿಡಿತ ಸಾಧಿಸುವ ಇಸ್ಲಾಮಾಬಾದ್ ಪ್ರಯತ್ನವಾಗಿದ್ದು, ಈ ಪ್ರದೇಶದಲ್ಲಿ ಹಿಡಿತ ಸಾಧಿಸುವ ತನ್ನ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ ಎಂದು ರೆಸ್ಟೆಲ್ಲಿ ಹೇಳಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ತಾಲಿಬಾನ್ ಸಂಘಟನೆಗೆ ಇದೇ ಐಎಸ್ಐ ಸಹಕಾರವನ್ನು ನೀಡಿತ್ತು ಎಂದು ಗೊತ್ತಾಗಿದೆ.
ಅಫ್ಘಾನ್ ನೆಲದಲ್ಲಿ 20 ವರ್ಷಗಳ ಸಂಘರ್ಷ ಅಂತ್ಯ
ಅಫ್ಘಾನಿಸ್ತಾನದಲ್ಲಿ ಸರಿಯಾಗಿ 23 ದಿನಗಳ ಹಿಂದೆ ಕಾಬೂಲ್ ನಗರಕ್ಕೆ ನುಗ್ಗಿದ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಅಂತ್ಯವಾಗುತ್ತಿದ್ದಂತೆ ದೇಶದಲ್ಲಿ ಕ್ರೌರ್ಯ ಮಿತಿ ಮೀರಿತು. ಒಂದು ದಿಕ್ಕಿನಲ್ಲಿ ವಿದೇಶಿಗರು ತಮ್ಮ ದೇಶಗಳಿಗೆ ವಾಪಸ್ ಆಗುತ್ತಿದ್ದರೆ ಕಾಬೂಲ್ ವಿಮಾನ ನಿಲ್ದಾಣವು ಸ್ಥಳಾಂತರ ಕೇಂದ್ರವಾಗಿ ಬದಲಾಯಿತು. ಆಗಸ್ಟ್ 15ರಿಂದ ಆಗಸ್ಟ್ 31ರವರೆಗೆ ಸಮರೋಪಾದಿಯಲ್ಲಿ ಸ್ಥಳಾಂತರ ಕಾರ್ಯಾಚರಣೆ ನಡೆಯಿತು. ಅಂತಿಮವಾಗಿ ಆಗಸ್ಟ್ 31ರಂದು ಯುಎಸ್ ಸೇನೆಯು ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿತು. ಅಂದಿಗೆ ಅಫ್ಘಾನಿಸ್ತಾನದಲ್ಲಿ ಯುಎಸ್ ನಡೆಸಿದ 20 ವರ್ಷಗಳ ಸಂಘರ್ಷ ಮುಕ್ತಾಯಗೊಂಡು ಸಂಪೂರ್ಣ ದೇಶವು ತಾಲಿಬಾನ್ ಹಿಡಿತಕ್ಕೆ ಸಿಲುಕಿತು.
ಅಫ್ಘಾನ್ ಕಟ್ಟಲು ಆಕ್ರಮಣಕಾರರಿಂದ ಸಾಧ್ಯವಿಲ್ಲ
"ಆಫ್ಘಾನಿಸ್ತಾನದ ಪ್ರಜೆಗಳು ಮೊದಲಿಗೆ ತಿಳಿದುಕೊಳ್ಳಬೇಕಾದ ಅಂಶವೆಂದರೆ ಆಕ್ರಮಣಕಾರರು ಯಾವುದೇ ಕಾರಣಕ್ಕೂ ನಮ್ಮ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ನಮ್ಮ ದೇಶದ ಪುನರ್ ನಿರ್ಮಾಣವು ನಮ್ಮ ಜವಾಬ್ದಾರಿ ಆಗಿರುತ್ತದೆ. ನಮ್ಮಿಂದ ಹಾಗೂ ನಮ್ಮ ಜನರಿಂದಲೇ ಆ ಕಾರ್ಯ ಆಗಬೇಕಿದೆ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದರು.
ರಷ್ಯಾ, ಚೀನಾ, ಕ್ವಾತಾರ್, ಟರ್ಕಿ ಮತ್ತು ಪಾಕಿಸ್ತಾನಕ್ಕೆ ಆಹ್ವಾನ
ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಕಠಿಣ ಪೈಪೋಟಿ ನೀಡುತ್ತಿರುವ ಪಂಜ್ ಶೀರ್ ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಹೊಸ ಸರ್ಕಾರ ರಚಿಸಲಾಗುವುದು ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಯು ಬಹುತೇಕ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ತಾಲಿಬಾನ್ ಸಂಘಟನೆಯಿಂದ ಚೀನಾ, ರಷ್ಯಾ, ಟರ್ಕಿ, ಕ್ವಾತಾರ, ಪಾಕಿಸ್ತಾನ ಮತ್ತು ಇರಾಕ್ ರಾಷ್ಟ್ರಗಳಿಗೆ ಅಹ್ವಾನ ನೀಡಲಾಗಿದೆ.












Click it and Unblock the Notifications