ಭಾರತೀಯರೇ ಇನ್ಮುಂದೆ ನಿಮಗೆ ವೀಸಾ ಬೇಡ: ಈ ದೇಶಕ್ಕೆ ಫ್ರೀಯಾಗಿ ಹೋಗಿ!
ಭಾರತ ಇಲ್ಲದೆ ಜಗತ್ತು ಇಲ್ಲ ಯಾಕಂದ್ರೆ ಭಾರತದ ಹೊರತು ಜಗತ್ತಿನ ಕೈಕಾಲು ಆಡಲ್ಲ. ವ್ಯಾಪಾರ ವ್ಯವಹಾರದಿಂದ ಹಿಡಿದು ಸಾಂಸ್ಕೃತಿಕವಾಗಿಯು ಭಾರತದ ಮೇಲೆ ಇಡೀ ಜಗತ್ತು ಅವಲಂಬಿತವಾಗಿದೆ. ಸಾವಿರಾರು ವರ್ಷಗಳಿಂದ ಭಾರತ ಜಗತ್ತಿನ ಹೃದಯದಂತೆ ಕಾರ್ಯ ನಿರ್ವಹಿಸುತ್ತಿದೆ. ಇಂತಿಪ್ಪ ಭಾರತದ ಪ್ರಜೆಗಳಿಗೆ, ಇಲ್ಲೊಂದು ದೇಶವು ವೀಸಾ ಇಲ್ಲದೆ ಫ್ರೀ ಎಂಟ್ರಿಗೆ ಒಪ್ಪಿಗೆ ಸೂಚಿಸಿದೆ.
ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು, ಈಗಾಗಲೇ ಟಾಪ್-5 ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ಏಷ್ಯಾ ಖಂಡದಿಂದ ಹಿಡ್ದು ಯುರೋಪ್, ಅಮೆರಿಕ ತನಕ ಭಾರತದ್ದೇ ಹವಾ. ಹೀಗಿದ್ದಾಗ ಈಗಾಗಲೇ ಹಲವು ದೇಶಗಳು ಭಾರತದ ಪ್ರಜೆಗಳಿಗೆ ವೀಸಾ ಇಲ್ಲದೆಯೇ ಎಂಟ್ರಿ ಕೊಡುತ್ತಿವೆ. ಈ ಸಾಲಿಗೆ ಈಗ ಹೊಸ ದೇಶವು ಸೇರ್ಪಡೆ ಆಗಿದ್ದು ಏಷ್ಯಾದಲ್ಲಿ ಈಗ ಭಾರತಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಹಾಗಾದರೆ ಯಾವುದು ಆ ದೇಶ? ಭಾರತೀಯರ ಪಾಲಿಗೆ ಇದು ಹೇಗೆ 'ಜಾಕ್‌ಪಾಟ್' ಆಗಬಹುದು? ತಿಳಿಯೋಣ ಬನ್ನಿ.

ಮಲೇಷ್ಯಾಗೆ ಹೋಗಲು ವೀಸಾ ಬೇಡ!
ಭಾರತದಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಮಲೇಷ್ಯಾಗೆ ಪ್ರವೇಶ ಮಾಡುತ್ತಾರೆ. ಈ ಮೂಲಕ ಸಾವಿರಾರು ಕೋಟಿ ವ್ಯವಹಾರ ಕೂಡ ನಡೆಯುತ್ತದೆ. ಹೀಗಿದ್ದಾಗ ಭಾರತ ಮತ್ತು ಚೀನಾ ಮೂಲದ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಘೋಷಿಸಿದೆ. ಇಷ್ಟೇ ಅಲ್ಲದೆ ಡಿಸೆಂಬರ್ 1 ರಿಂದ ಈ ಹೊಸ ನಿಯಮವು ಜಾರಿಗೆ ಬರಲಿದ್ದು, ಭಾರತೀಯರಿಗೆ ಇದು ಭಾರಿ ಉಪಯೋಗಕ್ಕೆ ಬರಲಿದೆ.
ಮಲೇಷ್ಯಾ ಈ ಕ್ರಮ ಕೈಗೊಂಡಿದ್ದು ಏಕೆ?
ಮೊದಲೇ ಹೇಳಿದಂತೆ ಭಾರತದಿಂದ ಲಕ್ಷಾಂತರ ಜನ ಪ್ರತಿವರ್ಷ ಮಲೇಷ್ಯಾ ಪ್ರವಾಸಕ್ಕಾಗಿ ಹೋಗುತ್ತಾರೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಕೂಡ ನಡೆಯುತ್ತೆ. ಹೀಗಿದ್ದಾಗ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಅಂತಾ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಮಾಹಿತಿ ನೀಡಿದ್ದಾರೆ. ವೀಸಾ ಮುಕ್ತ ಪ್ರವೇಶ ಇದ್ರು ಪ್ರವಾಸಿಗರು ನಿಗದಿತ ಭದ್ರತಾ ತಪಾಸಣೆ ಪೂರೈಸಬೇಕು ಎಂಬ ಆದೇಶ ಹೊರಡಿಸಲಾಗಿದೆ.
ಮಲೇಷ್ಯಾಗೆ ಹೋದ ಭಾರತೀಯರು ಎಷ್ಟು?
ಭಾರತದ ಜೊತೆಗೆ ಏಷ್ಯಾದ 8 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದ್ದು ಇದರ ಜೊತೆ ಹೊಸ ಗುರಿಯನ್ನ ಹಾಕಿಕೊಂಡಿದೆ. ಅದೇನಂದ್ರೆ ವಾರ್ಷಿಕವಾಗಿ ಮಲೇಷ್ಯಾ 16 ಮಿಲಿಯನ್‌ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಭಾರತದ ಪ್ರವಾಸಿಗರ ಸಂಖ್ಯೆ ಇದರಲ್ಲಿ ಅತಿಹೆಚ್ಚು ಎಂಬುದು ವಿಶೇಷ. ಇನ್ನ 2022 ರಲ್ಲಿ 3,24,548 ಭಾರತೀಯರು ಮಲೇಷ್ಯಾ ದೇಶಕ್ಕೆ ವಿಸಿಟ್ ಕೊಟ್ಟಿದ್ದರು. ಈಗ ಭಾರತ ಹಾಗೂ ಮಲೇಷ್ಯಾ ನಡುವೆ ಪ್ರತಿ ವಾರವೂ 158 ವಿಮಾನಗಳು ಹಾರಾಟ ನಡೆಸುತ್ತಿವೆ. ಈ ಸಂಖ್ಯೆಯೂ ಮುಂದೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಸಂಬಂಧ ಸುಧಾರಣೆಗೂ ಸಹಾಯ!
ಒಟ್ನಲ್ಲಿ ಭಾರತದ ಜೊತೆಗೆ ಅತ್ಯುತ್ತಮ ಸಂಬಂಧ ಬೆಸೆಯಲು ಮಲೇಷ್ಯಾ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ಕಾರಣಕ್ಕೆ ವೀಸಾ ಮುಕ್ತವಾಗಿ ಭಾರತ ಮೂಲದ ಪ್ರವಾಸಿಗರನ್ನ ಆಹ್ವಾನಿಸಲು ಮುಂದಾಗಿದೆ. ಹೀಗಾಗಿ ಮಲೇಷ್ಯಾ ಪ್ರವಾಸಕ್ಕೆ ಹೋಗಬೇಕು ಅಂತ ಅಂದುಕೊಂಡ ಭಾರತೀಯರಿಗೆ ಇದರಿಂದ ಸಾಕಷ್ಟು ಲಾಭವಾಗಲಿದೆ. ಇದರ ಜತೆಗೆ ಭಾರತ & ಮಲೇಷ್ಯಾ ಸಂಬಂಧ ಕೂಡ ಮತ್ತಷ್ಟು ಗಟ್ಟಿಯಾಗಲಿದೆ ಅಂತಿದ್ದಾರೆ ತಜ್ಞರು.
ಈಗಾಗ್ಲೇ ಭಾರತ & ಮಲೇಷ್ಯಾ ವ್ಯಾಪಾರ ಮತ್ತು ವ್ಯವಹಾರದಲ್ಲಿ ಹಲವು ಒಪ್ಪಂದವನ್ನು ಮಾಡಿಕೊಂಡಿವೆ. ಹಾಗೇ ಮಲೇಷ್ಯಾ ದೇಶದಲ್ಲಿ ಲಕ್ಷಾಂತರ ಭಾರತೀಯರು ವಹಿವಾಟನ್ನು ನಡೆಸುತ್ತಿದ್ದಾರೆ. ಈಗ ಮಲೇಷ್ಯಾ ಸರ್ಕಾರ ಕೈಗೊಂಡಿರುವ ನಿರ್ಧಾರ ಮತ್ತಷ್ಟು ಸಹಕಾರಿ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೇನು ಕೆಲವೇ ದಿನದಲ್ಲಿ ಈ ಸೌಲಭ್ಯವನ್ನು ಇಡೀ ಭಾರತೀಯ ಪ್ರಜೆಗಳು ಪಡೆಯಬಹುದಾಗಿದೆ. ಅಲ್ದೆ ಕುಟುಂಬ ಸಮೇತ ಒಮ್ಮೆ ಮಲೇಷ್ಯಾ ನೆಲಕ್ಕೆ ಅದ್ಧೂರಿ ಪ್ರವಾಸ ಹೋಗಲು ಸಹಾಯಕವಾಗಲಿದೆ.












Click it and Unblock the Notifications