ಪಾಕಿಸ್ತಾನ ಸೇನೆಯಲ್ಲಿ ದಿಢೀರ್ ಬದಲಾವಣೆ
ಇಸ್ಲಾಮಾಬಾದ್, ಅಕ್ಟೋಬರ್ 06: ಪಾಕಿಸ್ತಾನದ ಸೇನೆಯಲ್ಲಿ ದಿಢೀರ್ ಬದಲಾವಣೆ ಕಂಡುಬಂದಿದೆ. ಅಲ್ಲಿನ ಗುಪ್ತಚರ ಇಲಾಖೆ ಐಎಸ್ಐನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸ್ಥಾನದಲ್ಲಿ ಬದಲಾವಣೆ ಮಾಡಿ, ಹೊಸಬರ ನೇಮಕ ಮಾಡಲಾಗಿದೆ.
ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಮೀರ್ ಅವರನ್ನ ಗುಜ್ರಾನ್ ವಾಲಾ ಕಾರ್ಪ್ಸ್ ಕಮಾಂಡರ್ ಆಗಿ ಹಾಗೂ ಲೆಫ್ಟಿನೆಂಟ್ ಜನರಲ್ ಅಸಿಮ್ ಅವರನ್ನ ಮಾಸ್ಟರ್ ಜನರಲ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 2019ರಲ್ಲಿ ಹಮೀದ್ ಐಎಸ್ಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನ ಆ ಸ್ಥಾನದಿಂದ ವರ್ಗಾವಣೆ ಮಾಡಿ ಇದೀಗ ಪೇಶಾವರ್ ಕಾರ್ಪ್ಸ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಇದೀಗ ISI ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇವರು ಕರಾಚಿ ಕಾರ್ಪ್ಸ್ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಇನ್ನೊಂದೆಡೆ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಭಯೋತ್ಪಾಕರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಗುಂಪುಗಳ ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂದು ಯೂರೋಪಿಯನ್ ಯೂನಿಯನ್ ಟುಡೇ ಸಂಸ್ಥೆಯು ನಿಕ್ಕಿ ಏಷ್ಯಾದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜುಲೈನಿಂದ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿಯ ಬುಡಕಟ್ಟು ಪ್ರದೇಶಗಳಿಂದ ಸುಮಾರು 50 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ ಬಿಗಿಯಾದ ಕ್ರಮಗಳಿಂದಾಗಿ ಭಯೋತ್ಪಾದಕರ ಸಂಖ್ಯೆ ಕ್ಷೀಣಿಸಿತ್ತು.
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಭಯೋತ್ಪಾದಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಂತೆ ದೇಶದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಶಂಕೆಯನ್ನು ಕೂಡಾ ತಜ್ಞರು ವ್ಯಕ್ತಪಡಿಸಿದ್ದಾರೆ.












Click it and Unblock the Notifications