Breaking; ಲಿಜ್ ಟ್ರಸ್ ಬ್ರಿಟನ್ ಹೊಸ ಪ್ರಧಾನಿ, ರಿಷಿ ಸುನಕ್‌ಗೆ ಸೋಲು
ಲಂಡನ್, ಸೆಪ್ಟೆಂಬರ್ 5: ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ಆಯ್ಕೆಯಾಗಿದ್ದಾರೆ. ಅಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ರಿಷಿ ಸುನಕ್ ವಿರುದ್ಧ ಲಿಜ್ ಟ್ರುಸ್ ಗೆಲುವು ಸಾಧಿಸಿದರು.
ಲಿಜ್ ಸುನಕ್ ಬೋರಿಸ್ ಜಾನ್ಸನ್ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದರು. ರಿಷಿ ಸುನಕ್ ಹಣಕಾಸು ಸಚಿವರಾಗಿ ನಂತರ ರಾಜೀನಾಮೆ ನೀಡಿದ್ದರು. ನಾಳೆ ಮಂಗಳವಾರ ಲಿಜ್ ಟ್ರಸ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೊನ್ನೆಯೇ ಕನ್ಸರ್ವೇಟಿವ್ ಪಕ್ಷದ ಚುನಾವಣೆ ಮುಕ್ತಾಯವಾಗಿತ್ತು. ಇಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿದೆ. ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಲಿಜ್ ಟ್ರುಸ್ 81,326 ಮತಗಳನ್ನು ಪಡೆದರೆ ರಿಷಿ ಸುನಕ್ 60,399 ಮತಗಳನ್ನು ಗಳಿಸಿದರು.

ಬ್ರಿಟನ್ ದೇಶ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಲಿಜ್ ಟ್ರುಸ್ ಪ್ರಧಾನಿಯಾಗಿ ಗುರುತರ ಜವಾಬ್ದಾರಿ ಹೊಂದಿದ್ದಾರೆ.
ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ ಗೆಲುವು ಸಾಧಿಸುವುದು ನಿರೀಕ್ಷಿತವೇ ಆಗಿತ್ತು. ಹಣಕಾಸು ಸಚಿವರಾಗಿ ರಿಷಿ ಸುನಕ್ ದೇಶದ ಜನತೆಗೆ ತೆರಿಗೆಗಳ ಬರೆ ಹಾಕಿದ್ದು ಬಹುಶಃ ಅವರ ಸೋಲಿಗೆ ಕಾರಣ ಎಂದು ಬಗೆಯಲಾಗಿದೆ.
ಸಮೀಕ್ಷೆಗಳಿಂದಲೂ ಲಿಜ್ ಗೆಲುವು ಅಂದಾಜು
ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆ ಬಳಿಕ ನಡೆದ ಸಮೀಕ್ಷೆಗಳೆಲ್ಲವೂ ಲಿಜ್ ಟ್ರುಸ್ ಗೆಲುವಿನ ಭವಿಷ್ಯ ನುಡಿದಿದ್ದವು. ಸಮೀಕ್ಷೆಗಳ ಪ್ರಕಾರ ರಿಷಿ ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಕೆಲ ಸುತ್ತುಗಳಲ್ಲಿ ಮುನ್ನಡೆ ಹೊಂದಿದ್ದರೂ ನಂತರದ ಸುತ್ತುಗಳಲ್ಲಿ ಭಾರೀ ಹಿನ್ನಡೆ ಹೊಂದಿದರಂತೆ.
ಮೊದಲ ಹಂತದಲ್ಲಿ ಮುಂದಿದ್ದ ರಿಷಿ
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಏಳೆಂಟು ಜನರು ಸ್ಪರ್ಧೆ ಮಾಡಿದ್ದವರು. ಅವರ ಪೈಕಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರಿಬ್ಬರು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದರು. ಆಡಳಿತಾರೂಢ ಪಕ್ಷದ ನಾಯಕರಾದವರು ಪ್ರಧಾನಿ ಹುದ್ದೆ ಪಡೆಯುತ್ತಾರೆ. ಅಂತೆಯೇ, ಈಗ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇದು ಎರಡು ಹಂತದಲ್ಲಿ ನಡೆದ ಚುನಾವಣೆ ಆಗಿದೆ. ಮೊದಲ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಜನಪ್ರತಿನಿಧಿಗಳು ಮತ ಚಲಾಯಿಸಿದ್ದರು. ಏಳೆಂಟು ಜನರು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಒಂದೊಂದೇ ಸುತ್ತಿನ ಮತದಾನದಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ಹೊರಬೀಳುತ್ತಾ ಹೋಗಿದ್ದರು. ಅಂತಿಮವಾಗಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಾತ್ರವೇ ಉಳಿದುಕೊಂಡರು.
ಮೊದಲ ಹಂತದ ಎಲ್ಲಾ ಸುತ್ತುಗಳಲ್ಲೂ ರಿಷಿ ಸುನಕ್ ಮೊದಲ ಸ್ಥಾನ ಪಡೆದದ್ದು ವಿಶೇಷ. ಹೀಗಾಗಿ, ರಿಷಿ ಸುನಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ, ಎರಡನೇ ಹಂತದ ಚುನಾವಣೆಯ ರೂಪವೇ ಬೇರೆ ಆಗಿತ್ತು. ಎರಡನೇ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಎಲ್ಲಾ ಸಾಮಾನ್ಯ ಸದಸ್ಯರೂ ಮತದಾನದ ಹಕ್ಕು ಹೊಂದಿದ್ದರು. ಈ ಪಕ್ಷದ ಒಟ್ಟು 1.6 ಲಕ್ಷ ಸದಸ್ಯರಿದ್ದಾರೆ. ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರು ಕನ್ಸರ್ವೇಟಿವ್ ಸದಸ್ಯರನ್ನು ಒಲಿಸಿಕೊಳ್ಳಲು ವಿವಿಧ ಕಡೆ ಚರ್ಚಾ ಕಾರ್ಯಕ್ರಮಗಳನ್ನು ನಡೆಸಿದ್ದರು, ತಮ್ಮ ವಿಚಾರಧಾರೆಗಳನ್ನು ಪ್ರಸ್ತುಪಡಿಸಿದ್ದರು. ಆದರೆ, ಬೇರೆ ಬೇರೆ ಕಾರಣಕ್ಕೆ ರಿಷಿ ಸುನಕ್ ಬಗ್ಗೆ ಕನ್ಸರ್ವೇಟಿವ್ ಪಕ್ಷದ ಸಾಮಾನ್ಯ ಸದಸ್ಯರಿಗೆ ಅಸಮಾಧಾನ ಇದೆ. ಆ ಕಾರಣಕ್ಕೆ ರಿಷಿಗೆ ಸೋಲಾಯಿತು, ಲಿಜ್ ಗೆಲ್ಲಲು ಕಾರಣವಾಯಿತು ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications