Donald Trump: ಟ್ರಂಪ್ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ತೂಗುಗತ್ತಿ?
ಟ್ರಂಪ್ ಒಂದು ಎಡವಟ್ಟು ಮಾಡಿಕೊಂಡರೆ ಹೋಗಲಿ ಬಿಡು ಎನ್ನಬಹುದು, ಇಲ್ಲ ಎರಡನೇ ಎಡವಟ್ಟು ಮಾಡಿದ್ದರೂ ಏನೋ ಆಗೋಯ್ತು ಅಂತಾ ಹೇಳಬಹುದು. ಆದರೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ವಿವಾದದ ಬಿರುಗಾಳಿ ಎದ್ದಿದೆ. ದಿನಕ್ಕೆ ಹತ್ತಾರು ಎಡವಟ್ಟು ಮಾಡಿಕೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ಮಾನ & ಮರ್ಯಾದಿ ಕಳೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗಲೇ ಟ್ರಂಪ್ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ತೂಗುಗತ್ತಿ ನೇತಾಡುತ್ತಿದೆಯಾ?
ಡೊನಾಲ್ಡ್ ಟ್ರಂಪ್ & ಅಮೆರಿಕದ ನ್ಯಾಯಾಂಗದ ನಡುವೆ ತಿಕ್ಕಾಟ ನಡೆಯುತ್ತಿರುವುದು ಇಂದು ಅಥವಾ ನಿನ್ನೆಯಲ್ಲ. ಸುಮಾರು 9 ವರ್ಷದಿಂದಲೂ ಇದೇ ರೀತಿ ವಾತಾವರಣ ಇದ್ದು, ಈ ರೀತಿ ಪದೇ ಪದೇ ಫೈಟಿಂಗ್ ಆಗುತ್ತಿದೆ. ಹೀಗಿದ್ದಾಗಲೇ ಮತ್ತೊಂದು ಮಹಾನ್ ಎಡವಟ್ಟನ್ನು ಮಾಡಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಆಡಳಿತ, ಈಗ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪ ಎದುರಿಸುವ ಭಯದಲ್ಲಿ ಸಿಲುಕಿದೆ. ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡೊನಾಲ್ಡ್ ಟ್ರಂಪ್ ಮಹಾನ್ ಎಡವಟ್ಟು ಮಾಡಿದ್ದಾರಾ? ಬನ್ನಿ ತಿಳಿಯೋಣ.

ಡೊನಾಲ್ಡ್ ಟ್ರಂಪ್ ಆಡಳಿತದ ಎಡವಟ್ಟು!
ಹೌದು, ಅಮೆರಿಕದಲ್ಲಿ ಇರುವ ಅಕ್ರಮ ವಲಸಿಗರನ್ನ ಹೊರ ಹಾಕಲು ಹಲವು ರೀತಿ ಕ್ರಮವನ್ನು ಕೈಗೊಳ್ಳುತ್ತಿದೆ ಡೊನಾಲ್ಡ್ ಟ್ರಂಪ್ ಸರ್ಕಾರ. ಹೀಗಿದ್ದಾಗ ವೆನಿಜುವೆಲಾ ಮೂಲದ ಹಲವು ಜನ ಅಕ್ರಮ ವಲಸಿಗರು, ಎಂದು ಕಾರಣ ನೀಡಿ ಹೊರಗಡೆ ತಳ್ಳಿತ್ತು. ಇದೇ ವಿಚಾರ ಈಗ ಟ್ರಂಪ್ ಆಡಳಿತದ ಅಧಿಕಾರಿಗಳು ಹಾಗೂ ಅಮೆರಿಕದ ನ್ಯಾಯಾಂಗ ವ್ಯವಸ್ಥೆ ನಡುವೆ ಭಾರಿ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗಾದ್ರೆ ಟ್ರಂಪ್ ಆಡಳಿತ ಮಾಡಿದ ಎಡವಟ್ಟು ಏನು? ಅಕಸ್ಮಾತ್ ಇದಕ್ಕೆ ಶಿಕ್ಷೆಯಾದರೆ ಪರಿಸ್ಥಿತಿ ಏನಾಗಲಿದೆ?
ಯುದ್ಧ ಸಮಯದ ಕಾನೂನಿನ ಅಡಿಯಲ್ಲಿ ವೆನಿಜುವೆಲಾ ಮೂಲದ ಪ್ರಜೆಗಳನ್ನು ಗಡೀಪಾರು ಮಾಡಬಾರದು ಎನ್ನುವ ಆದೇಶವಿದ್ದರೂ ಡೊನಾಲ್ಡ್ ಟ್ರಂಪ್ ಆಡಳಿತ ಎಡವಟ್ಟು ಮಾಡಿದೆ, ಎಂಬ ಗಂಭೀರ ಆರೋಪವನ್ನ ಈಗ ನ್ಯಾಯಾಧೀಶರು ಮಾಡಿದ್ದಾರೆ. ಅಮೆರಿಕದ ಫೆಡರಲ್ ನ್ಯಾಯಾಧೀಶರು ಮಾಡಿರುವ ಆರೋಪ ಸಂಚಲನವನ್ನೇ ಸೃಷ್ಟಿ ಮಾಡಿದೆ. ಹಾಗಾದ್ರೆ ಘಟನೆ ಹಿನ್ನೆಲೆ ಏನು? ಮುಂದೆ ಓದಿ.
ನ್ಯಾಯಾಲಯದ ಆದೇಶಕ್ಕೂ ಬೆಲೆ ಇಲ್ವಾ?
ಅಂದಹಾಗೆ ಈ ಘಟನೆ ಹಿನ್ನೆಲೆಯನ್ನ ನೋಡುವುದಾದರೆ, ವೆನಿಜುವೆಲಾ ದೇಶದಲ್ಲಿ ಹಲವು ಗ್ಯಾಂಗ್‌ಗಳು ಇವೆ. ವೆನಿಜುವೆಲಾ ಜಗತ್ತಿನ ಟಾಪ್ ಡ್ರಗ್ ಡೀಲರ್ ದೇಶಗಳ ಪೈಕಿ ಒಂದಾಗಿದೆ ಎಂಬ ಆರೋಪ ಇದೆ. ಹೀಗೆ ವೆನಿಜುವೆಲಾದಲ್ಲಿ ಇರುವ ಡ್ರಗ್ ಗ್ಯಾಂಗ್ ಸದಸ್ಯರು ಅಮೆರಿಕಗೆ ಅಕ್ರಮವಾಗಿ ವಲಸೆ ಬಂದಿದ್ದಾರೆ, ಅವರನ್ನು ನಾವು ಹೊರಗೆ ಕಳುಹಿಸಬೇಕು ಎಂಬ ಆದೇಶ ಟ್ರಂಪ್ ಅವರದ್ದು. ಆದೇ ರೀತಿ ವೆನಿಜುವೆಲಾದ ಗ್ಯಾಂಗ್ ಸದಸ್ಯರೆಂದು ಕೆಲವರನ್ನ ದಿಢೀರ್ ಅವರ ದೇಶಕ್ಕೆ ಕಳುಹಿಸಲು ಟ್ರಂಪ್ ಸರ್ಕಾರ ಮುಂದಾಗಿತ್ತು. ಆದರೆ ಟ್ರಂಪ್ ಅಧಿಕಾರಿಗಳು ಕೈಗೊಂಡಿದ್ದ ಈ ಕ್ರಮಕ್ಕೆ ವಾಷಿಂಗ್ಟನ್‌ನ ನ್ಯಾಯಾಲಯ ತಡೆ ನೀಡಿತ್ತು. ಹೀಗೆ ಕೋರ್ಟ್ ತಡೆ ನೀಡಿದ್ದರೂ, ಕೋರ್ಟ್ ಆದೇಶವನ್ನ ಮೀರಿ ಹೋಗಿರುವ ಆರೋಪ ಟ್ರಂಪ್ ಆಡಳಿತದ ವಿರುದ್ಧವೇ ಕೇಳಿ ಬಂದಿದೆ.

ಮಾರ್ಚ್ 15ರ ಶನಿವಾರ ಅಮೆರಿಕದ ನ್ಯಾಯಾಲಯ ಈ ರೀತಿ ಟ್ರಂಪ್ ಆಡಳಿತದ ಆದೇಶಕ್ಕೆ ತಡೆ ನೀಡಿತ್ತು. ಯುದ್ಧ ಸಮಯದ ಕಾನೂನಿನ ಅಡಿಯಲ್ಲಿ ವೆನಿಜುವೆಲಾ ಮೂಲದ ಪ್ರಜೆಗಳ ಗಡೀಪಾರು ಆದೇಶಕ್ಕೆ ತಡೆ ನೀಡಲಾಗಿತ್ತು. ಆದರೆ, ಹೀಗೆ ನೀಡಿದ್ದ ಆದೇಶವನ್ನು ಡೊನಾಲ್ಡ್ ಟ್ರಂಪ್ ಸರ್ಕಾರದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡೆ ಹಿಡಿದ್ದಾರೆ, ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಇದೀಗ ರೊಚ್ಚಿಗೆದ್ದಿರುವ ಅಮೆರಿಕದ ನ್ಯಾಯಾಂಗ ವ್ಯವಸ್ಥೆ, ಟ್ರಂಪ್ ಸರ್ಕಾರದ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗಿದೆ. ವಾಷಿಂಗ್ಟನ್ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಬೋಸ್‌ಬರ್ಗ್ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕೋರ್ಟ್ ಕಡೆಯಿಂದ ಕ್ರಮ ಗ್ಯಾರಂಟಿ?
ಇನ್ನು ಹೀಗೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದ ಟ್ರಂಪ್ ಸರ್ಕಾರದ ಅಧಿಕಾರಿ ವರ್ಗ, ವೆನಿಜುವೆಲಾ ಮೂಲದ ಪ್ರಜೆಗಳನ್ನು ತುಂಬಿಕೊಂಡು ವಿಮಾನದಲ್ಲಿ ಹೊರಟಿತ್ತು. ಆ ಮೂಲಕ ವೆನಿಜುವೆಲಾ ರಾಜಧಾನಿಗೆ ಅವರನ್ನು ಇಳಿಸುವ ಪ್ಲಾನ್ ಮಾಡಿತ್ತು. ಆದರೆ, ದಿಢೀರ್ ಈ ವಿಚಾರವನ್ನ ತಿಳಿದು ವೆನಿಜುವೆಲಾ ಮೂಲದ ಪ್ರಜೆಗಳು ಇದ್ದ 2 ವಿಮಾನಗಳನ್ನು ತಕ್ಷಣ ಅಮೆರಿಕಗೆ ಮರಳಿ ಕರೆತನ್ನಿ ಎಂದಿದ್ರು ವಾಷಿಂಗ್ಟನ್ ಜಿಲ್ಲಾ ನ್ಯಾಯಾಧೀಶರಾದ ಜೇಮ್ಸ್ ಬೋಸ್‌ಬರ್ಗ್ ಅವರು, ಇದನ್ನೂ ಲೆಕ್ಕಿಸದೆ ಟ್ರಂಪ್ ಆಡಳಿತದ ಅಧಿಕಾರಿಗಳು ಮಾಡಿರುವ ಮಹಾನ್ ಎಡವಟ್ಟು ಇದೀಗ ಕಿಚ್ಚು ಹೊತ್ತಿಸಿದೆ.
ಹೀಗೆಲ್ಲಾ ಟ್ರಂಪ್ ಆಡಳಿತದ ಅಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ, ತಮ್ಮ ಮನಸ್ಸಿಗೆ ಬಂದ ರೀತಿ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸರ್ಕಾರವನ್ನ ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಪಡಿಸಲು ಎಲ್ಲಾ ಅವಕಾಶ ಇದೆ ಎಂದಿದ್ದಾರೆ ನ್ಯಾಯಾಧೀಶರಾದ ಜೇಮ್ಸ್ ಬೋಸ್‌ಬರ್ಗ್. ಇನ್ನು ಈ ಪ್ರಕರಣ ಮತ್ತಷ್ಟು ಗಟ್ಟಿಯಾಗುವ ಮುನ್ಸೂಚನೆ ಸಿಕ್ಕಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಘಟನೆ ಬಗ್ಗೆ ಟ್ರಂಪ್ ಸರ್ಕಾರಕ್ಕೆ ಈಗ ಕೇಳಿರುವ ಪ್ರತಿಕ್ರಿಯೆಗೆ ಸರಿಯಾದ ಉತ್ತರ ಕೂಡ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಹೀಗೆ ತಪ್ಪುಗಳ ಮೇಲೆ ತಪ್ಪುಗಳು ನಡೆದು ಹೋಗುತ್ತಿವೆ. ಹಾಗೇ ಭಾರತೀಯರಿಗೆ ಕೂಡ ಟ್ರಂಪ್‌ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ಸಮಸ್ಯೆ ಉಂಟುಮಾಡಿವೆ.
30 ದಿನಗಳ ಡೆಡ್‌ಲೈನ್ ನೀಡಿದ ಟ್ರಂಪ್
ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಧೀನದಲ್ಲಿರುವ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಕೆಲವು ದಿನಗಳ ಹಿಂದೆ ಆದೇಶ ಒಂದನ್ನ ನೀಡಿದೆ. ಹೀಗೆ ನೀಡಿರುವ ಆದೇಶ ತಲ್ಲಣ ಸೃಷ್ಟಿಸಿದೆ. 30 ದಿನಗಳಿಗಿಂತಲೂ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ತಕ್ಷಣವೇ ಫೆಡರಲ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಿ ಎಂದು ಸೂಚಿಸಿದೆ. ಹೀಗೆಲ್ಲ ಆದೇಶ ಹೊರಡಿಸಿರುವುದು ತಲ್ಲಣ ಎಬ್ಬಿಸಿದೆ. ಅಕಸ್ಮಾತ್ ನಿಯಮ ಪಾಲನೆ ಮಾಡಲು ಆಗದೇ ಇದ್ದರೆ ತಕ್ಷಣವೆ ದೇಶಬಿಟ್ಟು ಸ್ವಯಂ ಗಡೀಪಾರು ಆಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
ಭಾರತ ಮೂಲದವರಿಗೂ ಭಾರಿ ಸಮಸ್ಯೆ?
ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ವಲಸಿಗರ ವಿರುದ್ಧ ದಿನಕ್ಕೊಂದು ಆದೇಶ ನೀಡಲಾಗುತ್ತಿದೆ. ಎಚ್-1 ಬಿ ವೀಸಾ ಹೊಂದಿದ ಪ್ರಜೆಗಳಿಗೂ ಇದೀಗ ಆತಂಕ ಶುರುವಾಗಿದ್ದು, ಎಚ್-1 ಬಿ ವೀಸಾ ಪಡೆದ ವ್ಯಕ್ತಿ ಕೆಲಸ ಕಳೆದುಕೊಂಡರೆ ನಿರ್ದಿಷ್ಟ ಅವಧಿ ಒಳಗೆ ದೇಶವನ್ನ ಬಿಡಬೇಕು. ಅಕಸ್ಮಾತ್ ನಿರ್ದಿಷ್ಟ ಅವಧಿ ಒಳಗೆ ದೇಶ ಬಿಡದೇ ಇದ್ದರೆ, ಕ್ರಮ ಎದುರಿಸಬೇಕಾಗುತ್ತೆ ಎಂದು ವಾರ್ನಿಂಗ್ ನೀಡಲಾಗಿದೆ. ಇದು ಭಾರತೀಯರಿಗೆ ಸಾಕಷ್ಟು ಸಮಸ್ಯೆ ಮಾಡುವ ಭಯ ಇದೆ, ಯಾಕಂದ್ರೆ ಭಾರತ ಮೂಲದವರೇ ಹೆಚ್ಚಾಗಿ ಎಚ್-1 ಬಿ ವೀಸಾ ಪಡೆದು ಕೆಲಸ ಮಾಡುತ್ತಿದ್ದಾರೆ. ಹೀಗೆ ಟ್ರಂಪ್ ಆಡಳಿತದ ಗೊಂದಲ ವಲಸಿಗರನ್ನು ಚಿಂತೆಗೆ ದೂಡಿದೆ.
ಪರಿಸ್ಥಿತಿ ಹಿಂಗೆ ಮುಂದುವರಿದರೆ...
ಒಟ್ನಲ್ಲಿ ಇದನ್ನೆಲ್ಲಾ ನೋಡಿ ಹೇಳುವುದಾದರೆ, ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತು ಅಕ್ರಮ ವಲಸಿಗರ ನಡುವೆ ನಡೆಯುತ್ತಿರುವ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಇಲ್ಲ. ಹೀಗೆ ಒಂದು ಕಡೆ ಇದನ್ನೇ ತಮ್ಮ ರಾಜಕೀಯ ಅಸ್ತ್ರ ಮಾಡಿಕೊಳ್ಳುತ್ತಿರುವ ಟ್ರಂಪ್, ವಲಸಿಗರನ್ನ ಹೊರ ಹಾಕಲು ಏನು ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಅಮೆರಿಕ ಮತದಾರರಿಗೆ ಮಾತು ಕೊಟ್ಟಂತೆ ಅಕ್ರಮ ವಲಸಿಗರ ವಿರುದ್ಧ ಯುದ್ಧ ಸಾರಿದ್ದಾರೆ. ಆದರೆ ಹೀಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ಏನೇನೋ ಎಡವಟ್ಟು ಆಗುತ್ತಿರುವ ಆರೋಪ ಕೇಳಿ ಬರುತ್ತಿದೆ.












Click it and Unblock the Notifications