ಅಮೆರಿಕ ಅಧ್ಯಕ್ಷರ ಮನೆಯಲ್ಲಿ ಅಧಿಕಾರಿಗಳಿಗೆ ನಾಯಿ ಕಾಟ!
ಅಮೆರಿಕ ಅಧ್ಯಕ್ಷರ ನಿವಾಸ ಯಾರಿಗೆ ಗೊತ್ತಿಲ್ಲ ಹೇಳಿ? ಅದ್ರಲ್ಲೂ ಜಗತ್ತಿನ ಶಕ್ತಿಶಾಲಿ ವ್ಯಕ್ತಿ ಎಂದು ಕರೆಸಿಕೊಳ್ಳುವ ಇವರ ಮನೆ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಅದು ಥೇಟ್ ಅರಮನೆ, ಕೈಗೆ & ಕಾಲಿಗೆ ಎನ್ನುವಂತೆ ಕೆಲಸಗಾರರು. ಹೀಗೆ ಎಲ್ಲಾ ಸೌಲಭ್ಯದಿಂದ ಕಂಗೊಳಿಸುವ ಈ ಮನೆಯಲ್ಲಿ ನಾಯಿಯ ಕಾಟ ಹೆಚ್ಚಾಗಿದೆ. ಅದರಲ್ಲೂ ಜೋ ಬೈಡನ್ ಸಾಕಿರುವ ಮುದ್ದು ನಾಯಿಯೇ ಭದ್ರತಾ ಅಧಿಕಾರಿಗಳಿಗೆ ಕಂಟಕವಾಗಿದೆ.
ನಾಯಿ ಕಂಡರೆ ಬೀದಿಯಲ್ಲಿ ಓಡಾಡುವವರು ಓಡಿ ಹೋಗುವುದು ಮಾಮೂಲು. ಆದರೆ ಅಮೆರಿಕ ಅಧ್ಯಕ್ಷ ಬೈಡನ್ ಅವರ ಸರ್ಕಾರಿ ನಿವಾಸ ಶ್ವೇತ ಭವನದ ಅಧಿಕಾರಿಗಳು ಕೂಡ ನಾಯಿ ಬೊಗಳಿದ ಸದ್ದು ಕೇಳಿದರೆ ಓಡುತ್ತಾರಂತೆ. ಇದಕ್ಕೆಲ್ಲಾ ಕಾರಣ ಅಮೆರಿಕ ಅಧ್ಯಕ್ಷ ಬೈಡನ್ ಅವರ 2 ವರ್ಷದ ಜರ್ಮನ್ ಶೆಫರ್ಡ್ ನಾಯಿ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುದ್ದಾಗಿ ಈ ನಾಯಿಗೆ 'ಕಮಾಂಡರ್' ಎಂದು ಹೆಸರು ಇಟ್ಟಿದ್ದಾರೆ. ಇದೇ ಕಾರಣಕ್ಕೋ ಏನು, ಈ ನಾಯಿ ಕಂಡ ಕಂಡವರ ಮೇಲೆ ದಾಳಿ ಮಾಡಿ ಕಚ್ಚುತ್ತಿದೆ.

ಶ್ವೇತ ಭವನದಲ್ಲಿ 'ಕಮಾಂಡರ್' ಕಾಟ
ಹೌದು, ಅಮೆರಿಕದ ಅಧ್ಯಕ್ಷ ಬೈಡನ್‌ರ ಮನೆಯಲ್ಲಿ ಕೆಲಸ ಮಾಡುವ ನೂರಾರು ಭದ್ರತಾ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಬೈಡನ್ ಅವರ ಮುದ್ದಿನ ನಾಯಿ 'ಕಮಾಂಡರ್'ಗೆ ಏನಾಗಿದೆಯೋ ಗೊತ್ತಿಲ್ಲ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಈಗ ಶ್ವೇತ ಭವನದ ಮೈದಾನದಲ್ಲಿ ಮತ್ತೊಬ್ಬ ಸೀಕ್ರೆಟ್ ಏಜೆಂಟ್‌ಗೆ ಕಚ್ಚಿದೆಯಂತೆ. ಹೀಗೆ ಶ್ವೇತ ಭವನದಲ್ಲಿಯೇ ಅಧಿಕಾರಿಗಳಿಗೆ 'ಕಮಾಂಡರ್' ಕಚ್ಚಿದ 11ನೇ ಪ್ರಕರಣ ಇದಾಗಿದೆ.
ಅಧಿಕಾರಿಗೆ ನಾಯಿ ಕಚ್ಚಿದ್ದು ಹೇಗೆ?
ಇದೀಗ ಆಗಿದ್ದು ಏನೆಂದರೆ ಶ್ವೇತ ಭವನದ ರಹಸ್ಯ ಸೇವೆಯ ಸಮವಸ್ತ್ರ ವಿಭಾಗದ ಅಧಿಕಾರಿ, ಜೋ ಬೈಡನ್ ಅವರ ಸಾಕು ನಾಯಿ ಕಮಾಂಡರ್ ಬಳಿ ಬಂದಿದ್ದಾರಂತೆ. ಆಗ ಹಿಂದೆಮುಂದೆ ನೋಡದ ನಾಯಿ ಕಚ್ಚಿದೆ. ನಾಯಿ ಕಚ್ಚಿದ್ದೇ ತಡ ಸ್ಥಳದಲ್ಲಿಯೇ ವೈದ್ಯರು ನಾಯಿಯಿಂದ ಕಚ್ಚಿಸಿಕೊಂಡ ಅಧಿಕಾರಿಗೆ ಚಿಕಿತ್ಸೆ ನೀಡಿದ್ದಾರೆ. ಈಗ ಅಧಿಕಾರಿ ಆರೋಗ್ಯವಾಗಿದ್ದಾರೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಯಿ ಭಯದಲ್ಲಿ ಶ್ವೇತ ಭವನ
ಪರಿಸ್ಥಿತಿ ಹೀಗಿದ್ದರೂ ಸುಖಾಸುಮ್ಮನೆ ಬೈಡನ್ ಅವರ ಮನೆ ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಕಾರಣ ಮಾತ್ರ ಬಯಲಾಗಿಲ್ಲ. ಹೀಗೆ ಒಟ್ಟಾರೆ 11 ಅಧಿಕಾರಿಗಳ ಮೇಲೆ ಬೈಡನ್ ಅವರ ನಾಯಿ ಎರಗಿದೆ. ಅದ್ರಲ್ಲೂ 2022ರ ನವೆಂಬರ್‌ನಲ್ಲಿ ಇದೇ ರೀತಿ ಸೀಕ್ರೆಟ್ ಏಜೆಂಟ್ ಒಬ್ಬರ ತೊಡೆ ಹಾಗೂ ತೋಳಿಗೆ ಕಚ್ಚಿತ್ತು. ತಕ್ಷಣ ಆ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗಿತ್ತು. ಈ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಬೆಳವಣಿಗೆ ಬಳಿಕ ಮತ್ತೊಮ್ಮೆ ನಾಯಿ ದಾಳಿ ಶ್ವೇತ ಭವನದ ಅಧಿಕಾರಿಗಳನ್ನು ಬೆಚ್ಚಿಸಿದೆ.
ಬಹುಶಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಕುಟುಂಬಕ್ಕೆ ನಾಯಿ ಕಾಟ ಇರುವಂತೆ ಕಾಣುತ್ತಿದೆ. ಏಕೆಂದರೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಜೋ ಬೈಡನ್ ಶ್ವೇತ ಭವನಕ್ಕೆ ಬಂದಾಗಿನಿಂದ ಹೀಗೆ ಆಗುತ್ತಿದೆ. ಈ ಹಿಂದೆ ಬೈಡನ್ ಕುಟುಂಬದ ಬಳಿ 'ಮೇಜರ್' ಎಂಬ ನಾಯಿ ಇತ್ತು. ಮೇಜರ್ ಕೂಡ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳ ಮೇಲೆ ದಾಳಿ ಮಾಡುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ನಂತರ ಅಲ್ಲಿಂದ ಆ ನಾಯಿಯನ್ನ ಕಳಿಸಲಾಗಿತ್ತು. ಈಗ ನೋಡಿದರೆ 'ಕಮಾಂಡರ್' ಕಾಟ ಶುರುವಾಗಿದೆ.
ಒಟ್ನಲ್ಲಿ ಅಮೆರಿಕ ಅಧ್ಯಕ್ಷರ ನಿವಾಸದಲ್ಲಿ ಕಳ್ಳರ ಕಾಟಕ್ಕಿಂತ ನಾಯಿಯ ಭಯವೇ ಇದೀಗ ಹೆಚ್ಚಾಗಿದೆ. ಹೀಗಾಗಿ ಅಧಿಕಾರಿಗಳು ನೆಮ್ಮದಿಯಾಗಿ ವೈಟ್‌ಹೌಸ್ ಆವರಣದಲ್ಲಿ ಓಡಾಡುವ ಪರಿಸ್ಥಿತಿ ಕೂಡ ಇಲ್ಲ. ಈ ಎಲ್ಲಾ ಘಟನೆ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ಯಾವ ಕ್ರಮ ಕೈಗೊಳ್ಳುತ್ತಾರೆ? ಅಂತಾ ಕಾದು ನೋಡಬೇಕಿದೆ. ಕ್ರಮ ಕೈಗೊಳ್ಳದೆ ಇದ್ದರೆ ಶ್ವೇತ ಭವನದ ಅಧಿಕಾರಿಗಳು ಪರದಾಡುವುದು ಪಕ್ಕಾ.












Click it and Unblock the Notifications