Japan Tsunami: ಜಪಾನ್‌ನಲ್ಲಿ ಭೂಕಂಪ; ಸುನಾಮಿ ಎಚ್ಚರಿಕೆ
ಸೋಮವಾರ ತಡರಾತ್ರಿ ನೈಋತ್ಯ ಜಪಾನ್ ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶದಲ್ಲಿ ಸುನಾಮಿ ಅಲೆಗಳು ಉಂಟಾಗಿದೆ. ಆದರೆ ಸುನಾಮಿ ಅಲೆಗಳು ಸಣ್ಣ ಪ್ರಮಾಣದಲ್ಲಿ ಇದ್ದ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಜಪಾನ್ ಕ್ಯುಶಿಯ ಮಿಯಾಝಾಕಿ ಪ್ರಾಂತ್ಯದ ಕರವಾಳಿ ಪ್ರದೇಶದಿಂದ 18 ಕಿಲೋ ಮೀಟರ್ ದೂರದಲ್ಲಿ ಸೋಮವಾರ ರಾತ್ರಿ 9 ಗಂಟೆ 19 ನಿಮಿಷದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ ಒಂದು ಮೀಟರ್ ವರೆಗೆ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಿದ್ದು ಸಾರ್ವಜನಿಕರು ಸಮುದ್ರ ತೀರ ಪ್ರದೇಶಗಳಿಂದ ದೂರ ಇರುವಂತೆ ಸೂಚನೆ ಕೊಟ್ಟಿದೆ. ದೊಡ್ಡ ಅಲೆಗಳು ಪದೇ ಪದೇ ಅಪ್ಪಳಿಸಬಹುದು. ಯಾರೂ ಕೂಡ ಸಮುದ್ರ ತೀರಕ್ಕೆ ಅಥವಾ ತೀರದ ಸಮೀಪಕ್ಕೆ ಹೋಗಬಾರದು ಎಂದು ಎಕ್ಸ್‌ನಲ್ಲಿ ತಿಳಿಸಿದೆ. ಇಲ್ಲಿನ ಎರಡು ಬಂದರು ಪ್ರದೇಶದಲ್ಲಿ ಎರಡು ಸಣ್ಣ ಸುನಾಮಿ ಪತ್ತೆಯಾಗಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.
ಯಾವುದೇ ಹಾನಿಯಾಗಿಲ್ಲ!
ಜಪಾನ್‌ನ ಸ್ಥಳೀಯ ಮಾಧ್ಯಮಗಳು ಭೂಕಂಪದ ಬಗ್ಗೆ ವರದಿ ಮಾಡಿದ್ದು, ಯಾರೂ ಕೂಡ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ, ನೇರ ಪ್ರಸಾರದ ದೃಶ್ಯಗಳಲ್ಲಿ ಯಾವುದೇ ಹಾನಿಯಾಗದೆ ಪ್ರಶಾಂತವಾಗಿರುವುದನ್ನು ನೋಡಬಹುದು. ಸಮುದ್ರ ಕೂಡ ಶಾಂತವಾಗಿದ್ದು ಹಡಗುಗಳನ್ನು ಕಾರ್ಯನಿರ್ವಹಿಸುತ್ತಿದ್ದು ಸಂಚಾರ ಸಾಮಾನ್ಯವಾಗಿತ್ತು.
ಭೂಕಂಪ ಹೆಚ್ಚಾಗಿ ಸಂಭವಿಸುವ ರಿಂಗ್ ಆಫ್ ಫೈರ್ ನ ಪಶ್ಚಿಮ ಪ್ರದೇಶದಲ್ಲಿ ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲೆ ಜಪಾನ್ ಇರುವುದರಿಂದ ಇಲ್ಲಿ ಭೂಕಂಪ ಸರ್ವೇ ಸಾಮಾನ್ಯವಾಗಿದೆ. ಜಗತ್ತಿನ ಅತ್ಯಂತ ಸಕ್ರಿಯ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಹೊಂದಿರುವ ದೇಶವಾಗಿದೆ.
ಜಪಾನ್‌ನಲ್ಲಿ ಪ್ರತಿ ವರ್ಷ 1,500 ಭೂಕಂಪನದ ಅನುಭವವಾಗುತ್ತದೆ. ವಿಶ್ವದ ಒಟ್ಟು ಭೂಕಂಪದ ಒಟ್ಟು 18 ಪ್ರತಿಶತ ಭೂಕಂಪನ ಜಪಾನ್‌ನಲ್ಲಿ ಸಂಭವಿಸುತ್ತದೆ. 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್ ಭೂಕಂಪದ ನಡುವೆಯೂ ಸವಾಲುಗಳನ್ನು ಮೆಟ್ಟಿನಿಂತು ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದೆ.
2024ರ ಹೊಸ ವರ್ಷದ ದಿನದಂದೇ ನೋಟೊ ಪರ್ಯಾಯ ದ್ವೀದಪಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು, ದಶಕದಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿತ್ತು, ಭೂಕಂಪನದಿಂದ ಸುಮಾರು 470 ಜನ ಮೃತಪಟ್ಟಿದ್ದರು. 2024ರ ಆಗಸ್ಟ್‌ನಲ್ಲಿ ಸಂಭವಿಸಿದ್ದ 7.1 ತೀವ್ರತೆಯ ಭೂಕಂಪದಲ್ಲಿ 15 ಜನ ಗಾಯಗೊಂಡಿದ್ದರು.












Click it and Unblock the Notifications