ಪ್ರೀತಿಸಿದ ಯುವಕನಿಗಾಗಿ ಅರಸೊತ್ತಿಗೆಯನ್ನೇ ಬಿಟ್ಟ ಜಪಾನ್ ರಾಜಕುಮಾರಿ
ಟೋಕಿಯೋ, ಸೆಪ್ಟೆಂಬರ್ 6: ಕುವೆಂಪು ಅವರು 'ಜಾತಿ ಸುಡುವ ಮಂತ್ರ ಕಿಡಿ ಪ್ರೀತಿ' ಎಂದರು. ಪ್ರೀತಿಯ ಬಗೆಗಿನ ಅದೆಷ್ಟೋ ತ್ಯಾಗ ಕೂಡ ಕೇಳಿದ್ದೀವಿ. ಈ ಸುದ್ದಿಯಲ್ಲಿನ ತ್ಯಾಗ ಹೊಸ ಸೇರ್ಪಡೆ ಹಾಗೂ ಆಸಕ್ತಿಕರವಾಗಿದೆ. ಜಪಾನ್ ನ ರಾಜಕುಮಾರಿ, ಇಪ್ಪತ್ತೈದು ವರ್ಷದ ಮಾಕೋ ತಮ್ಮ ಪ್ರೀತಿಯ ಸಲುವಾಗಿ ಅರಸೊತ್ತಿಗೆಯನ್ನೇ ತ್ಯಜಿಸಿದ್ದಾರೆ.
ಏನಿದು ಪ್ರೀತಿ, ಇದೆಂಥ ಅರಸೊತ್ತಿಗೆ ತ್ಯಾಗ ಅಂತೀರಾ? ಜಪಾನ್ ಚಕ್ರವರ್ತಿ ಅಕಿಹಿಟೋ ಅವರ ಮೊಮ್ಮಗಳು ಈ ಮಾಕೋ. ತಾನು ಪ್ರೀತಿಸಿದ ಯುವಕ ಕಿ.ಕೊಮುರೋನನ್ನು ಮದುವೆಯಾಗಲು ನಿರ್ಧಾರ ಮಾಡಿರುವುದರಿಂದ ಆಕೆ ರಾಜಕುಮಾರಿ ಪಟ್ಟವನ್ನೇ ತ್ಯಜಿಸಿದ್ದಾರೆ.

ಜಪಾನ್ ನಲ್ಲಿ ರಾಜಮನೆತನ ಹೊರತುಪಡಿಸಿದಂತೆ ಯಾರನ್ನಾದರೂ ಮದುವೆ ಆಗುವುದಾದರೆ ರಾಜಕುಮಾರಿ ಪಟ್ಟ ಮತ್ತು ರಾಜಮನೆತನದ ಸೌಲಭ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದೀಗ ಜಪಾನ್ ರಾಜಕುಮಾರಿ ಮಾಕೋ ರಾಜಮನೆತನದ ಹೊರಗಿನ ವ್ಯಕ್ತಿಯ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಅಂದಹಾಗೆ, ರಾಜ ಫ್ಯೂಮಿಹಿಟೋ ಮತ್ತು ಕಿಕೋ ದಂಪತಿಯ ಮಗಳು ಈ ಮಾಕೋ. ಇವರಿಬ್ಬರು ಟೋಕಿಯೋದ ಕ್ರಿಶ್ಚಿಯನ್ ಲಾ ಯೂನಿರ್ವಸಿಟಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿ, ಆ ಬಳಿಕ ಪರಸ್ಪರ ಪ್ರೀತಿಸಿದ್ದರು.

ಜನಸಾಮಾನ್ಯನನ್ನು ಮದುವೆಯಾದರೆ ರಾಜಮನೆತನದ ಪಟ್ಟ ಕಳೆದುಕೊಳ್ಳಬೇಕಾಗುತ್ತದೆ ಎಂದು ಗೊತ್ತಿತ್ತು. ನಾನು ರಾಜಕುಮಾರಿಯಾಗಿ ಎಷ್ಟು ಕಾರ್ಯ ನಿರ್ವಹಿಸಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಇನ್ನು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಗಮನ ಕೊಡಬೇಕಾಗಿದೆ ಎಂದು ಮಾಕೋ ತಿಳಿಸಿದ್ದಾರೆ.
ಮಾಕೋ ಭಾನುವಾರ ನಿಶ್ಚಿತಾರ್ಥದ ಘೋಷಣೆ ಮಾಡಿದ್ದಾರೆ. ಮಾಕೋ ಹಾಗೂ ಕೋಮುರೋ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆ ಇದೆ.












Click it and Unblock the Notifications