Israel-Lebanon War: ಲೆಬನಾನ್ ವಿರುದ್ಧ ನಿಲ್ಲುತ್ತಿಲ್ಲ ಇಸ್ರೇಲ್ ಭೀಕರ ದಾಳಿ!
ಇಸ್ರೇಲ್ ಮಿಲಿಟರಿ ತನ್ನ ದಾಳಿಯ ತೀವ್ರತೆಯನ್ನ ಮತ್ತಷ್ಟು ಹೆಚ್ಚು ಮಾಡುತ್ತಿದ್ದು, ಹೀಗೆ ಇಸ್ರೇಲ್ ನಡೆಸುತ್ತಿರುವ ದಾಳಿ ಪರಿಣಾಮ ಲೆಬನಾನ್ ದೇಶ ನಡುಗಿ ಹೋಗಿದೆ. ಅದರಲ್ಲೂ ಇಸ್ರೇಲ್ ಸೇನೆಯ ಆರ್ಭಟ ಕಂಡು ಈಗಾಗಲೇ ಹಿಜ್ಬುಲ್ಲಾ ನಡುಗಿ ಹೋಗಿದ್ದು, ಒಬ್ಬೊಬ್ಬರೇ ಹಿಜ್ಬುಲ್ಲಾ ಮುಖಂಡರು ಜೀವ ಬಿಡುತ್ತಿದ್ದಾರೆ. ಈ ಸಮಯದಲ್ಲೇ ತನ್ನ ದಾಳಿಯನ್ನು ಇನ್ನಷ್ಟು ಜೋರು ಮಾಡಿರುವ ಇಸ್ರೇಲ್ ಸೇನೆ ಲೆಬನಾನ್ ಪ್ರಜೆಗಳ ಎದೆ ನಡುಗಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹಾಗಾದ್ರೆ ಲೆಬನಾನ್ ನೆಲದಲ್ಲಿ ಹೇಗಿದೆ ಇಸ್ರೇಲ್ & ಹಿಜ್ಬುಲ್ಲಾ ಯುದ್ಧ?
ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ನಂತರ ಇಸ್ರೇಲ್ ಸೇನೆ ಮತ್ತಷ್ಟು ಅಲರ್ಟ್ ಆಗಿದ್ದು, ದಾಳಿ ಇನ್ನಷ್ಟು ಹೆಚ್ಚು ಮಾಡಿದೆ. ಹೀಗೆ ಇಸ್ರೇಲ್ ಸೇನೆ ನಡೆಸುತ್ತಿರುವ ನಿರಂತರ ದಾಳಿ ಹಿನ್ನೆಲೆ ಮಧ್ಯಪ್ರಾಚ್ಯ ಇದೀಗ ಬೂದಿ ಮುಚ್ಚಿದ ಕೆಂಡವಾಗಿದೆ. ಅದರಲ್ಲೂ ಲೆಬನಾನ್ ಪರಿಸ್ಥಿತಿ ಈ ಸಮಯದಲ್ಲಿ ಅತಿ ಹೀನಾಯವಾಗಿದೆ. ಯಾಕಂದ್ರೆ ಲೆಬನಾನ್ ವಿರುದ್ಧ ಇದೀಗ ಇಸ್ರೇಲ್ ಸೇನೆ ಅತ್ಯಂತ ಶಕ್ತಿಶಾಲಿ ಅಸ್ತ್ರ ಬಳಕೆ ಮಾಡುತ್ತಿದೆ. ಇಸ್ರೇಲ್ ತನ್ನ ಬಳಿ ಇರುವ, ಅತ್ಯಾಧುನಿಕ ಬಾಂಬ್ & ಮಿಸೈಲ್‌ಗಳ ಮೂಲಕ ಲೆಬನಾನ್ ರಾಜಧಾನಿ ಮೇಲೆ ದಾಳಿ ಮಾಡುತ್ತಿದೆ. ಈ ಮೂಲಕ ಹಿಜ್ಬುಲ್ಲಾ ನಾಯಕರ ಜೀವ ತೆಗೆಯಲು ಕಾರ್ಯಾಚರಣೆ ನಡೆಸುತ್ತಿದೆ.

ಲೆಬನಾನ್ ಪ್ರಜೆಗಳಿಗೂ ಪರದಾಟ ಶುರು
ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ನೋಡಿದರೆ, ಇದೀಗ ಲೆಬನಾನ್ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶೋಚನೀಯ ಹಂತಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಅದ್ರಲ್ಲೂ ಲೆಬನಾನ್ ರಾಜಧಾನಿ ಸುತ್ತಮುತ್ತಲ ಪ್ರದೇಶದಲ್ಲಿ ಭೀಕರ ದಾಳಿಯನ್ನು ನಡೆಸುತ್ತಿದೆ ಇದೇ ಇಸ್ರೇಲ್ ಸೇನೆ. ಈಗಾಗಲೇ ಸಾವಿರಾರು ಕುಟುಂಬಗಳು ಜೀವ ಉಳಿಸಿಕೊಳ್ಳಲು ಲೆಬನಾನ್‌ನ ಬಿಟ್ಟು ಹೋಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ದೇಶ ತೊರೆಯುವ ಆತಂಕ ಆವರಿಸಿದೆ.
ಗಾಜಾ ಯುದ್ಧಕ್ಕೆ ಒಂದು ವರ್ಷ
ಮತ್ತೊಂದು ಕಡೆ ಇಸ್ರೇಲ್ & ಹಮಾಸ್ ಯುದ್ಧಕ್ಕೆ ಇದೀಗ ಒಂದು ವರ್ಷ ಪೂರ್ತಿಯಾಗಿದೆ. ಅಕ್ಟೋಬರ್ 7, 2023 ರಂದು ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ದಿಢೀರ್ ಯುದ್ಧದ ಬೆಂಕಿ ಹೊತ್ತಿಸಿದ್ದವು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ, ಯುದ್ಧ ನಿಲ್ಲಿಸುವ ಯತ್ನ ಕೂಡ ಫ್ಲಾಪ್ ಆಗುತ್ತಿವೆ. ಹಾಗಾದರೆ ಈ ಯುದ್ಧ ನಿಲ್ಲುವುದು ಯಾವಾಗ? ಎಂಬ ಬಿಲಿಯನ್ ಡಾಲರ್ ಪ್ರಶ್ನೆ ಇದೀಗ ಎಲ್ಲೆಲ್ಲೂ ಕಾಡತೊಡಗಿದೆ.












Click it and Unblock the Notifications