Israel-Palestine War: ಭಾರತದಿಂದ ಗಾಜಾ ಪಟ್ಟಿಗೆ 38ಟನ್ ಅಗತ್ಯ ವಸ್ತುಗಳು ರವಾನೆ
ನವದೆಹಲಿ, ಅಕ್ಟೋಬರ್ 25: ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧ ಮುಂದುವರಿದಿದೆ. ಇಸ್ರೇಲ್‌ನ ಬಿರುಸಿನ ಪ್ರತೀಕಾರದ ಬಾಂಬ್ ದಾಳಿಗೆ ತತ್ತರಿಸಿರುವ ಗಾಜಾ ಪಟ್ಟಿ ಭಾರತವು 38 ಟನ್‌ಗಳಷ್ಟು ಆಹಾರ ಮತ್ತು ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ರವಾನಿಸಿದೆ ಎಂದು ವಿಶ್ವಸಂಸ್ಥೆಯ ಉಪ ಖಾಯಂ ಪ್ರತಿನಿಧಿ (ಡಿಪಿಆರ್) ರಾಯಭಾರಿ ಆರ್.ರವೀಂದ್ರ ಅವರು ಭಾರತವನ್ನು ಪ್ರತಿನಿಧಿಸುವ ವೇಳೆ ಮಾಹಿತಿ ನೀಡಿದರು.
ಭಾರತವು ಪ್ಯಾಲೆಸ್ತೀನ್‌ನ ಜನರಿಗೆ ಔಷಧಿಗಳು ಮತ್ತು ಉಪಕರಣಗಳು ಸೇರಿದಂತೆ 38 ಟನ್‌ಗಳಷ್ಟು ಅತ್ಯಗತ್ಯ ವಸ್ತುಗಳನ್ನು ಕಳುಹಿಸಿ ಕೊಟ್ಟಿದೆ. ಎರಡು ಕಡೆ ಶಾಂತಿ ನೆಲೆಸಲು ಅಗತ್ಯವಾದ ಪರಿಸ್ಥಿತಿ ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಕಡಿಮೆ ಮಾಡಲು ನೇರ ಮಾತುಕತೆ ಪುನರಾರಂಭಕ್ಕೆ ಭಾರತ ಆಗ್ರಹಿಸುತ್ತದೆ.

ಯುದ್ಧದಿಂದ ಭೀಕರ ಸ್ಥಿತಿ ಉಂಟಾಗಿದ್ದು, ಮಾನವೀಯ ವಾತಾವರಣ ನಿರ್ಮಿಸಬೇಕಿದೆ. ಇಂತಹ ಸವಾಲಿನ ಸಮಯದಲ್ಲಿ, ಭಾರತವು ಪ್ಯಾಲೆಸ್ತೇನ್ ಜನರಿಗೆ ಮಾನವೀಯ ನೆರವು ಒದಗಿಸುವುದನ್ನು ಮುಂದುವರೆಸಲಿದೆ ಎಂದು ಅವರು ತಿಳಿಸಿದರು.
ಹಮಾಸ್ ದಾಳಿಗೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಇದರಿಂದ ಗಾಜಾ ಪಟ್ಟಿಯಲ್ಲಿ ಭಾರೀ ಸಾವುನೋವುಗಳನ್ನು ವರದಿ ಮಾಡಿದೆ. ಭಾರತವು ಭಯೋತ್ಪಾದನಾ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಿದೆ ಎಂದು ವಿಶ್ವಸಂಸ್ಥೆ ಉಪ ಖಾಯಂ ರಾಯಭಾರಿ ಹೇಳಿದ್ದಾರೆ. ಪ್ರಾಣ ಕಳೆದುಕೊಂಡವರಿಗೆ ದೇಶ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಪ್ರಾರ್ಥಿಸಿದರು ಎಂದರು.
ಆಸ್ಪತ್ರೆ ಮೇಲಿನ ದಾಳಿ ಖಂಡನೀಯ
ಹಮಾಸ್ ನಿರ್ಧಾರದಿಂದಾಗಿ ಇಸ್ರೇಲ್ ನಾಗರಿಕರು ಭಯೋತ್ಪಾದಕ ದಾಳಿ ಎದುರಿಸುವಂತಾಗಿದೆ. ಅವರ ಈ ಬಿಕ್ಕಟ್ಟಿನ ಕ್ಷಣದಲ್ಲಿ ನಾವು ಅವರೊಂದಿಗೆ ಒಗ್ಗಟ್ಟಿನಿಂದ ಇರಲಿದ್ದೇವೆ. ಗಾಜಾದ ಅಲ್ ಹಲಿ ಆಸ್ಪತ್ರೆ ಮೇಲಾದ ದಾಳಿಯಿಂದ ನೂರಾರು ನಾಗರಿಕ ಸಾವು ನೋವುಗಳು ಸಂಭವಿಸಿವೆ. ಮಕ್ಕಳು ಸೇರಿದಂತೆ ಸಾವಿರಾರು ಜನರು ಗಾಯಗೊಂಡಿರುವ ದುರಂತದ ಪ್ರಾಣಹಾನಿಯ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಭಾರತ ಪ್ರಾರ್ಥಿಸಿದೆ ಎಂದು ಅವರು ತಿಳಿಸಿದರು.

ಇಸ್ರೇಲ್ ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಡೆಯುತ್ತಿರುವ ಯುದ್ಧದಲ್ಲಿ ನಾಗರಿಕ ಜೀವಗಳ ಭಾರೀ ನಷ್ಟದ ಬಗ್ಗೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ. ಹೆಚ್ಚುತ್ತಿರುವ ಮಾನವೀಯ ವಿರೋಧ ಸ್ಥಿತಿ, ಬಿಕ್ಕಟ್ಟು ಹೆಚ್ಚು ಆತಂಕಕಾರಿ ಆಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆ
ಇಸ್ರೇಲ್-ಪ್ಯಾಲೆಸ್ತೇನ ಸಮಸ್ಯೆಗೆ ಪರಿಹಾರಕ್ಕಾಗಿ ಭಾರತದ ಬೆಂಬಲ ಕುರಿತು ಮಾತನಾಡಿದ ಉಪರಾಯಭಾರಿ ರವಿಂದ್ರ ಅವರು, ಭಾರತದ ಬೆಂಬಲವು ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆಗೆ ಸಹಕಾರಿ ಆಗಬಹುದು. ಸುರಕ್ಷಿತ ಗಡಿ ಅಕ್ಕಪಕ್ಕದಲ್ಲಿ ಶಾಂತಿಯಿಂದ ಬದುಕುವ ವಾತಾವರಣ ಸೃಷ್ಟಿಗೆ ಕಾರಣವಾಗಬಹುದು ಎಂದು ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಾಯಕರು ನೇರ ಶಾಂತಿ ಮಾತುಕತೆಗಳ ನಡೆಸಬೇಕಿರುವುದು ಅಗತ್ಯವಾಗಿದೆ. ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಉದ್ಯಮಶೀಲತೆ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿರುವ ನಮ್ಮ ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆಯ ಮೂಲಕ ಭಾರತ ಪ್ಯಾಲೇಸ್ತೇನಿಯರನ್ನು ಬೆಂಬಲಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications