Israel-Palestine conflict: ಹಮಾಸ್ ಉಗ್ರರ ಬಿಲಗಳ ಮೇಲೆ ಇಸ್ರೇಲ್ ಬಾಂಬ್ ಮಳೆ!
ತನ್ನ ನೆಲದ ಮೇಲೆ ಉಗ್ರರು ದಾಳಿ ಮಾಡಿದ ಕಾರಣಕ್ಕೆ ರೊಚ್ಚಿಗೆದ್ದಿರುವ ಇಸ್ರೇಲ್ ಇದೀಗ ಯುದ್ಧವನ್ನೇ ಸಾರಿಬಿಟ್ಟಿದೆ. ಆದರೆ ಹೀಗೆ ಇಸ್ರೇಲ್ ಯುದ್ಧ ಸಾರುತ್ತಿದ್ದಂತೆ ಇಡೀ ಜಗತ್ತು ನಡುಗಿ ಹೋಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯ ಆವರಿಸಿದೆ. ಈ ಮಧ್ಯೆ ಉಗ್ರರ ಹೆಣ ಕೆಡವಲು ಇಸ್ರೇಲ್ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಹಾಗಾದ್ರೆ ಇಸ್ರೇಲ್‌ನ ಈ ಕ್ರಮದಿಂದ ಹಮಾಸ್ ಉಗ್ರರು ಏನಾಗಬಹುದು?
ಹಮಾಸ್ ಬಂಡುಕೋರರು ಪದೇ ಪದೆ ಇಸ್ರೇಲ್ ಮೇಲೆ ದಾಳಿ ಮಾಡಿ ಓಡಿ ಹೋಗುತ್ತಿದ್ರು. ಆದ್ರೆ ಹಮಾಸ್ ಉಗ್ರರ ಗ್ರಹಚಾರ ಇವತ್ತು ಸರಿ ಇರಲಿಲ್ಲ ಅಂತಾ ಕಾಣುತ್ತಿದೆ. ಹೀಗಾಗಿಯೇ 5000ಕ್ಕೂ ರಾಕೆಟ್ ಉಡಾಯಿಸಿದ್ದ ಹಮಾಸ್ ಬಂಡುಕೋರರ ತಿಥಿ ಮಾಡುತ್ತಿದೆ ಇಸ್ರೇಲ್‌ನ ಸೇನೆ. ಉಗ್ರರನ್ನು ಅವರ ನೆಲದಲ್ಲೇ ಹೊಸಕಿ ಹಾಕಲು, ಇಸ್ರೇಲ್ ಭೀಕರ ಕಾರ್ಯಾಚರಣೆ ಶುರುಮಾಡಿದೆ. 'ಆಪರೇಷನ್ ಐರನ್ ಸ್ವಾರ್ಡ್ಸ್' ಹೆಸರಲ್ಲಿ ಉಗ್ರರ ಬಿಲದ ಮೇಲೆ ಬಾಂಬ್ ಹಾಕುತ್ತಿದೆ ಇಸ್ರೇಲ್.

ಹೇಗಿದೆ ಗೊತ್ತಾ ಭಯಾನಕ ಕಾರ್ಯಾಚರಣೆ?
ಇಸ್ರೇಲ್ ತನ್ನ ಉಗ್ರಾಣದಲ್ಲಿ ಇಟ್ಟಿದ್ದ ಹತ್ಯಾರಗಳನ್ನು ಇದೀಗ ಹೊರಗೆ ತೆಗೆದಿದ್ದು, ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಡ್ರೋನ್ ಹಾಗೂ ಯುದ್ಧ ವಿಮಾನಗಳ ಸಹಾಯದಿಂದ ಇದೀಗ ಹಮಾಸ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ದಾಳಿ ಆರಂಭಿಸಿದೆ. ಈ ಹಿನ್ನೆಲೆ ಗಾಜಾಪಟ್ಟಿ ಅಕ್ಷರಶಃ ನರಕವಾಗಿ ಬದಲಾಗಿದೆ. ಒಂದ್ಕಡೆ ಉಕ್ರೇನ್ ಹಾಗೂ ರಷ್ಯಾ ನಡುವೆ ಭೀಕರ ಕಲಹ ನಡೆಯುವಾಗ ಮತ್ತೊಂದು ಭಾಗದಲ್ಲೂ ತಿಕ್ಕಾಟ ಶುರುವಾಗಿದೆ. ಹಾಗಾದರೆ ಹಮಾಸ್ ಉಗ್ರರನ್ನು ನಾಶ ಮಾಡಲು ಇಸ್ರೇಲ್ ರೂಪಿಸಿರುವ ರಣತಂತ್ರ ಏನು?
ಇಸ್ರೇಲ್ ಪುಟಾಣಿ ದೇಶವೇ ಆಗಿದ್ದರೂ ಅದರ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸಿ ನಿಲ್ಲುತ್ತದೆ. ಹೀಗಾಗಿಯೇ ಇಸ್ರೇಲ್ ಸೇನೆಯ ಬಳಿ ಭಯಾನಕ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿಯ 75 ಯುದ್ಧ ವಿಮಾನಗಳು ಇವೆ. ಇದಿಷ್ಟೇ ಅಲ್ಲದೆ ಡ್ರೋನ್‌ಗಳು ಸೇರಿ ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಹಾಗೇ ಇದನ್ನು ನಿಭಾಯಿಸಲು 34,000 ಸೈನಿಕರು ಸಿದ್ಧವಾಗಿದ್ದು, 55,000 ಮೀಸಲು ಪಡೆ ಸೈನಿಕರಿಗೂ ಇದೀಗ ಕರೆ ಹೋಗಿದೆ. ಈ ಮೂಲಕ ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್ ಉಗ್ರರ ರಕ್ತಪಾತ ಮಾಡಲು ಇಸ್ರೇಲ್ ನುಗ್ಗುತ್ತಿದೆ. ಇನ್ನು ಇಸ್ರೇಲ್ ಭೂ ಸೇನೆ ಕೂಡ ಬಲವಾಗಿದ್ದು, 2,500 ಯುದ್ಧ ಟ್ಯಾಂಕರ್ ಹಾಗೂ 5,000 ಶಸ್ತ್ರಾಸ್ತ್ರ ಸಾಗಿಸುವ ವಾಹನಗಳು ಕೂಡ ಇವೆ.

ಮೇಯರ್ ಹತ್ಯೆ ಮಾಡಿದ ರಾಕ್ಷಸರು
ಇಷ್ಟೆಲ್ಲಾ ಒಂದ್ಕಡೆಯಾದರೆ, ಮತ್ತೊಂದು ಕಡೆ ಹಮಾಸ್ ಉಗ್ರರ ದಾಳಿಯಲ್ಲಿ ಇಸ್ರೇಲ್‌ನ ಶಾರ್ ಹನೇಗೆವ್ ಪ್ರಾಂತ್ಯದ ಮೇಯರ್ ಓಫಿರ್ ಲೀಬ್ಸ್ಟೈನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಸ್ರೇಲ್ ಸ್ಥಳೀಯ ಮಾಧ್ಯಮಗಳು ಓಫಿರ್ ಲೀಬ್ಸ್ಟೈನ್ ಅವರ ಸಾವಿನ ಬಗ್ಗೆ ವರದಿಯನ್ನು ಪ್ರಕಟಿಸಿವೆ. ಹೀಗಾಗಿ ಇಸ್ರೇಲ್ ಮತ್ತಷ್ಟು ರೊಚ್ಚಿಗೆದ್ದು ಉಗ್ರರ ವಿರುದ್ಧ ದಾಳಿಯನ್ನ ಮತ್ತೆ ಭೀಕರಗೊಳಿಸಿದೆ. ಇದೇ ಕಾರಣಕ್ಕೆ ಇನ್ನಷ್ಟು ಉಗ್ರರ ಹೆಣಗಳು ಗಾಜಾಪಟ್ಟಿಯ ಬೀದಿಯಲ್ಲಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಆದರೆ ಉಗ್ರರ ಜೊತೆ ಈಗ ಅಮಾಯಕರ ರಕ್ತಪಾತ ಕೂಡ ಮುಂದುವರಿದಿದೆ.
ಕೃತ್ಯದ ಬಗ್ಗೆ ಉಗ್ರರ ನಾಯಕನಿಗೆ ಹೆಮ್ಮೆ!
ಇನ್ನು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ 5000ಕ್ಕೂ ಹೆಚ್ಚು ರಾಕೆಟ್‌ಗಳ ಭೀಕರ ದಾಳಿಗೆ ಉಗ್ರರ ನಾಯಕ ಪ್ರತಿಕ್ರಿಯೆ ನೀಡಿದ್ದಾನೆ. ಹಮಾಸ್ ಸೇನಾ ಘಟಕದ ನಾಯಕನಾದ ಮೊಹಮ್ಮದ್ ದೀಫ್ ಮಾತನಾಡಿ, ಇಸ್ರೇಲ್ ವಿರುದ್ಧದ ದಾಳಿ ಕುರಿತು ಹೇಳಿಕೆ ನೀಡಿದ್ದಾನೆ. ಹೀಗೆ ಹಮಾಸ್ ನಾಯಕ ಹೇಳಿಕೆ ನೀಡಿದ್ದು ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಉಗ್ರರ ಗ್ಯಾಂಗ್ ನಡೆಸಿದ ದಾಳಿಯನ್ನು ಈತ ಸೇನಾ ಕಾರ್ಯಾಚರಣೆ ಎಂದು ಕರೆದಿದ್ದಾನೆ. ಹೀಗಾಗಿ ಇಸ್ರೇಲ್ ಸೇನೆ ಮತ್ತಷ್ಟು ರೊಚ್ಚಿಗೆದ್ದಿದೆ. ಅಲ್ಲದೆ ಹಮಾಸ್ ಉಗ್ರರ ಪ್ರತಿಯೊಂದು ಜಾಗವನ್ನೂ ಉಡೀಸ್ ಮಾಡಲು ರಣತಂತ್ರ ರೂಪಿಸಿದೆ.












Click it and Unblock the Notifications