Israel–Hamas war: ಐವರು ಶಸ್ತ್ರಸಜ್ಜಿತ ಉಗ್ರರನ್ನು ಕೊಂದು ಸಾಹಸ ಮೆರೆದ ಇಸ್ರೇಲಿ ಯುವತಿ- ಇಲ್ಲಿದೆ ವೀರಗಾಥೆಯ ವಿವರ
Israel-Hamas war: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿಯನ್ನು ಆರಂಭಿಸಿದ್ದಾರೆ. ಸಾವಿರಾರು ರಾಕೆಟ್‌ಗಳನ್ನು ಇಸ್ರೇಲ್‌ಗೆ ನುಗ್ಗಿಸುವ ಮೂಲಕ ಯಹೂದಿ ರಾಷ್ಟ್ರದಲ್ಲಿ ರಕ್ತಪಾತಕ್ಕೆ ನಾಂದಿ ಹಾಡಿದ್ದಾರೆ. ವಾಯು, ಭೂ ಹಾಗೂ ಸಮುದ್ರ ಮಾರ್ಗವಾಗಿ ಸಾವಿರಾರು ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದ್ದಾರೆ. ಹಮಾಸ್ ವಿರುದ್ಧ ಹೋರಾಟ ನಡೆಸುತ್ತಿರುವ ಇಸ್ರೇಲ್ ಜನರ ಸಾಹಸಗಾಥೆಗಳು ಒಂದೊಂದಾಗಿ ಹೊರಬರುತ್ತಿವೆ.
25 ವರ್ಷದ ಯುವತಿಯೊಬ್ಬಳು ಕೆಚ್ಚೆದೆಯಿಂದ ಹೋರಾಡಿ ಹಮಾಸ್ ಉಗ್ರರನ್ನು ಎದುರಿಸಿದ್ದಾಳೆ. ಹಮಾಸ್ ಉಗ್ರರ ಉಪಟಳವನ್ನು ತಡೆದು ಕಿಬ್ಬುಟ್ಜ್ ಸಮುದಾಯದ ( ಕೃಷಿಯಲ್ಲಿ ತೊಡಗಿಕೊಂಡಿರುವ ರೈತ ಸಮೂಹ ) ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಕೊನೆಯ ಹಂತದ ರಕ್ಷಣೆಯಲ್ಲಿ ಕಿಬ್ಬುಟ್ಜ್ ನಿವಾಸಿಗಳನ್ನು ಮುನ್ನಡೆಸಿದ ಆಕೆಯ ಸಾಹಸವು ಎಲ್ಲರಿಗೂ ಮಾದರಿ ಎಂದು ಹೇಳಲಾಗುತ್ತಿದೆ. 25 ವರ್ಷ ವಯಸ್ಸಿನ ಇನ್ಬಾರ್ ಲೈಬರ್ಮನ್ ಎಂಬ ಯುವತಿ ಆಮ್‌ನ ಭದ್ರತಾ ಮುಖ್ಯಸ್ಥೆಯಾಗಿದ್ದಾಳೆ. ಹಮಾಸ್ ದಾಳಿಯನ್ನು ಹಿಮ್ಮೆಟ್ಟಿಸಿ ದಾಳಿಕೋರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ.
ಕಿಬ್ಬುಟ್ಜ್ ಜನರು ವಾಸಿಸುವ ಪ್ರದೇಶವನ್ನು ರಕ್ಷಿಸಲು 12 ಯುವಕರನ್ನು ತಕ್ಷಣವೇ ನೇಮಿಸಿಕೊಂಡ ಲೈಬರ್ಮನ್ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾಳೆ. ಯುವಕರ ಗುಂಪನ್ನು ಮುನ್ನೆಡಿಸಿದ ಆಕೆ ಐವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ವರದಿಯಾಗಿದೆ.
ಕಿಬ್ಬುಟ್ಜ್ ಜನರು ವಾಸಿಸುವ ನಿರ್ ಆಮ್ ಪ್ರದೇಶವು ಗಾಜಾದಿಂದ ಕೇವಲ ಒಂದು ಮೈಲಿ ದೂರದಲ್ಲಿದೆ. ಅಕ್ಟೋಬರ್ 7 ರಂದು ಶಸ್ತ್ರಸಜ್ಜಿತ ಭಯೋತ್ಪಾದಕರಿಂದ ಭಾರೀ ದಾಳಿಗೆ ಒಳಗಾಗಿದೆ. ಆದರೆ, ಲೈಬರ್ಮನ್ ಅವರ ಸಾಹಸದಿಂದ ಅಲ್ಲಿನ ಜನರು ಬದುಕಿ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ಬಾರ್ ಲೈಬರ್ಮನ್ ಅವರ ಸಾಹಸಗಾಥೆಯು ಹೊರಬೀಳುತ್ತಿದ್ದಂತೆ ಆಕೆಯನ್ನು ಹೊಗಳಿ ಸಾಮಾಜಿಕ ಮಾಧ್ಯಮಗಳಲ್ಲಿ ಪೊಸ್ಟ್ ಮಾಡಲಾಗುತ್ತಿದೆ. ಇಸ್ರೇಲ್ ಸರ್ಕಾರ ಆಕೆಯನ್ನು ಗೌರವಿಸಬೇಕೆಂದು ಒತ್ತಾಯಿಸಲಾಗಿದೆ.
'ಆಕೆಯ ವೀರಗಾಥೆಯು ಇಸ್ರೇಲಿ ಪುರಾಣಗಳಲ್ಲಿ ಉಳಿಯಲಿದೆ. ಇದು ತಲೆಮಾರುಗಳವರೆಗೆ ಸ್ಮರಿಸುವಂತಹ ಕಥೆಯಾಗಿದೆ' ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಹೇಳಿದ್ದಾರೆ.
ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ. ಗಾಜಾ ಗಡಿ ಬೇಲಿಯನ್ನು ಭೇದಿಸಿ ಒಳನುಗ್ಗಿದ್ದಾರೆ. ಚೆಕ್‌ಪೋಸ್ಟ್‌ಗಳ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.
ಭಾರೀ ಶಸ್ತ್ರಸಜ್ಜಿತ ಹಮಾಸ್ ಉಗ್ರರು ಇಸ್ರೇಲಿ ಸೈನ್ಯದ ಮೇಲೆ ದಾಳಿ ಮಾಡಿ ಹಲವಾರು ಸೈನಿಕರನ್ನು ಕೊಂದು ಹಾಕಿದ್ದಾರೆ. ಇತರರನ್ನು ವಶಪಡಿಸಿಕೊಂಡು ಬಂಧನದಲ್ಲಿ ಇರಿಸಿದ್ದಾರೆ.
ಯಾವುದೇ ಮುನ್ಸೂಚನೆಯನ್ನೂ ನೀಡದೇ ಕಂಡಕಂಡವರ ಮೇಲೆ ಗುಂಡು ಹಾರಿಸಿದ್ದಾರೆ. ಮನೆಗಳಿಗೆ ನುಗ್ಗಿ ಕೌರ್ಯ ಮೆರೆದಿದ್ದಾರೆ.
ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯ ಮೇಲೆ ವ್ಯಾಪಕವಾಗಿ ದಾಳಿ ನಡೆಸುತ್ತಿದೆ. 20 ಲಕ್ಷಕ್ಕೂ ಅಧಿಕ ಜನರು ವಾಸವಾಗಿರುವ ಗಾಜಾ ಪ್ರದೇಶ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಎರಡೂ ಕಡೆಗಳಲ್ಲಿ ಸಾವಿರಾರು ಜನರು ಅಸುನೀಗಿದ್ದಾರೆ.












Click it and Unblock the Notifications