ಅಮೆರಿಕಕ್ಕೆ ಸಡ್ಡು ಹೊಡೆದು ಸ್ವದೇಶಿ ಯುದ್ಧ ವಿಮಾನ ನಿರ್ಮಿಸಿದ ಇರಾನ್
ಇರಾನ್ ನ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಮಂಗಳವಾರ ಪ್ರದರ್ಶಿಸಲಾಗಿದೆ. ಇದು ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಜತೆಗೆ ಬಹುಪಯೋಗಿ ರಾಡಾರ್ ಹೊಂದಿದೆ ಎಂದು ಇರಾನ್ ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇರಾನ್ ನ ರಾಜಧಾನಿ ಟೆಹರಾನ್ ನಲ್ಲಿ ನಡೆದ ಪ್ರದರ್ಶನದಲ್ಲಿ ಯುದ್ಧ ವಿಮಾನ ಪ್ರದರ್ಶಿಸಲಾಯಿತು. ನ್ಯಾಷನಲ್ ಡಿಫೆನ್ಸ್ ಇಂಡಸ್ಟ್ರಿ ಪ್ರದರ್ಶನದಲ್ಲಿ ವಿಮಾನದ ಕಾಕ್ ಪಿಟ್ ನಲ್ಲಿ ಅಧ್ಯಕ್ಷ ಹಸನ್ ರೌಹಾನಿ ಕೂತಿರುವಂಥ ದೃಶ್ಯಗಳು ಸರಕಾರಿ ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನಕ್ಕೆ 'ಕೌಸರ್' ಎಂದು ಹೆಸರಿಡಲಾಗಿದೆ.
ಈ ಯುದ್ಧ ವಿಮಾನದ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿದೆ. ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಎದುರು ನೋಡಲಾಗುತ್ತಿದೆ. ಈ ಯುದ್ಧ ವಿಮಾನದ ಬಗ್ಗೆ ಮಾಹಿತಿಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ರಕ್ಷಣಾ ಸಚಿವ ಅಮಿರ್ ಹಟಾಮಿ ಶನಿವಾರ ನೀಡಿದರು. ಇದನ್ನು ಬುಧವಾರ ಬಹಿರಂಗ ಪಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ಕೂಡ ಅವರು ನೀಡಿದ್ದಾರೆ. ಈ ಹಿಂದೆ ಇರಾಕ್ ಯುದ್ಧದ ಸಂದರ್ಭದಲ್ಲಿ ಆದ ಕಹಿ ಅನುಭವಗಳು ಹಾಗೂ ಇಸ್ರೇಲ್-ಅಮೆರಿಕದಿಂದ ಇರುವ ಆತಂಕದ ಕಾರಣಕ್ಕೆ ನಮ್ಮ ರಕ್ಷಣಾ ವಲಯವನ್ನು ಬಲಪಡಿಸಬೇಕಾಗಿದೆ ಎಂದು ಹಟಾಮಿ ಹೇಳಿದ್ದಾರೆ.
ಇರಾನ್ ಗೆ ಪ್ರಾದೇಶಿಕವಾಗಿ ಆತಂಕ ಒಡ್ಡಿರುವ ವೈರಿಗಳಿಗೆ ಅಮೆರಿಕವು ನೂರಾರು ಕೋಟಿ ಡಾಲರ್ ಬೆಲೆಯ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ. ಜತೆಗೆ ಟೆಹರಾನ್ ನಿಂದ ರಕ್ಷಣಾ ಯೋಜನೆಗಳನ್ನು ಯಾವುದೂ ಮಾಡಬಾರದು ಎಂಬ ಒತ್ತಡ ಹೇರುತ್ತಿದೆ. ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿ ಮತ್ತಷ್ಟು ಒತ್ತಡ ಹಾಕುತ್ತಿದೆ.












Click it and Unblock the Notifications