2,000 ಜನರ ದಿಢೀರ್ ಸಾವು, ಭಾರತಕ್ಕೆ ತೈಲ ಸರಬರಾಜು ಮಾಡುವ ದೇಶದಲ್ಲಿ ಇದೇನಿದು ರಕ್ತಪಾತ? Iran Protests
ಮಧ್ಯಪ್ರಾಚ್ಯ ಭಾಗದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಆಗುತ್ತಲೇ ಇದೆ, ಒಂದು ಕಡೆ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಇನ್ನೊಂದು ಕಡೆ ಸಿರಿಯಾ ಆಂತರಿಕ ಕಲಹ ನಿಂತಿಲ್ಲ, ಯೆಮೆನ್ ಕೂಡ ಧಗಧಗ ಅಂತಿದೆ. ಇಂತಹ ಸಮಯದಲ್ಲಿ ಇವರೆಲ್ಲರನ್ನೂ ಮೀರಿಸಿರುವ ಇರಾನ್ ಹಿಂಸೆಯ ಸುಳಿಯಲ್ಲಿ ಸಿಲುಕಿದೆ. ಇರಾನ್ ಸರ್ವಾಧಿಕಾರಿಗಳ ವಿರುದ್ಧ ಅಲ್ಲಿನ ಜನರು ಈಗ ರೊಚ್ಚಿಗೆದ್ದು ಹೋರಾಟ ಆರಂಭಿಸಿ ಹಲವು ದಿನಗಳೇ ಕಳೆದಿದೆ. ಹೀಗಿದ್ದಾಗ ಹಿಂಸಾಚಾರ ಭುಗಿಲೆದ್ದು 2,000 ಜನರ ದಿಢೀರ್ ಸಾವು ಸಂಭವಿಸಿದೆ.
ಜಗತ್ತಿನ ಪ್ರಮುಖ ತೈಲ ಸರಬರಾಜು ದೇಶಗಳ ಪೈಕಿ ಒಂದಾಗಿರುವ ಇರಾನ್ ದೇಶದಲ್ಲಿ, ಹಣದುಬ್ಬರ ಸೇರಿದಂತೆ ಹಲವು ಆಂತರಿಕ ಸಮಸ್ಯೆಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹೋರಾಟವನ್ನು ಶುರು ಮಾಡಿದ್ದರು. ಹೀಗೆ ಶುರುವಾಗಿದ್ದ ಪ್ರತಿಭಟನೆ ಸಾವಿರಾರು ಜನರ ಜೀವ ಬಲಿ ಪಡೆಯುತ್ತಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 2,000 ಜನರು ಜೀವ ಬಿಟ್ಟಿದ್ದಾರೆ ಎಂದು ಇರಾನ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸುಮಾರು 15 ದಿನ ಅಂದರೆ 2 ವಾರಗಳಿಂದ ಈ ರೀತಿ ಪ್ರತಿಭಟನೆಗಳು ನಡೆಯುತ್ತಿವೆ. ಇಡೀ ಇರಾನ್ ದೇಶದಲ್ಲಿ ಅಶಾಂತಿ ಮೂಡಿದ್ದು, ಭಾರಿ ಘೋರ ಅನಾಹುತಗಳು ಸಂಭವಿಸುತ್ತಿವೆ.

ಭಯೋತ್ಪಾದಕರ ದಾಳಿ ಅಂತಿದೆ ಇರಾನ್
ಹಿಂಸಾಚಾರ ಹಾಗೂ ಸಾವಿನ ಸಂಖ್ಯೆ ಕುರಿತು ರಾಯಿಟರ್ಸ್ ಜೊತೆ ಮಾತನಾಡಿರುವ ಇರಾನ್ ಅಧಿಕಾರಿ ಒಬ್ಬರು, ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸಾವಿನ ಹಿಂದೆ ಭಯೋತ್ಪಾದಕರು ಇದ್ದಾರೆಂಬ ಆರೋಪ ಮಾಡಿರುವುದು ಮತ್ತಷ್ಟು ತಲ್ಲಣ ಸೃಷ್ಟಿಸಿದೆ. ಆದರೆ ಯಾರೆಲ್ಲಾ ಸತ್ತಿದ್ದಾರೆ? ಹೇಗೆಲ್ಲಾ ಈ ಹಿಂಸಾಚಾರ ಸಂಭವಿಸಿದೆ ಎಂಬ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಹೊರಹಾಕಿಲ್ಲ ಇರಾನ್ ದೇಶದ ಅಧಿಕಾರಿಗಳು. ಕಳೆದ ವರ್ಷ ಇಸ್ರೇಲ್ ಮತ್ತು ಅಮೆರಿಕ ಸೇನೆಗಳ ದಾಳಿ ಎದುರಿಸಿದ್ದ ಇರಾನ್ ಇದೀಗ ಆಂತರಿಕ ಕಲಹ ನಿಭಾಯಿಸಲು ಒದ್ದಾಡುವ ವಾತಾವರಣ ನಿರ್ಮಾಣ ಆಗಿದೆ. ಆದರೆ ಖುದ್ದು ಇರಾನ್ ಸರ್ಕಾರವೇ ಈ ಹತ್ಯೆಗಳನ್ನ ಮಾಡಿದೆ ಎಂಬುದು ಇರಾನ್ ಶತ್ರು ದೇಶಗಳ ಆರೋಪ.
ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
ಮತ್ತೊಂದು ಕಡೆ ಭೀಕರ ಆರ್ಥಿಕ ಪರಿಸ್ಥಿತಿ ಪರಿಣಾಮ ಉಂಟಾದ ಅಶಾಂತಿ 1979ರ ಕ್ರಾಂತಿಯ ನಂತರ ಅಧಿಕಾರಕ್ಕೆ ಬಂದಿರುವ ನಾಯಕರ ವಿರುದ್ಧ ಇರಾನ್ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ಆದರೆ ಈ ತಿಕ್ಕಾಟದ ಹಿಂದೆ ನಮ್ಮ ಶತ್ರು ದೇಶಗಳು ಇವೆ ಎಂಬ ಆರೋಪ ಇರಾನ್ ಮಾಡುತ್ತಿದೆ. ಇದೆಲ್ಲಾ ಮೀರಿ ಈಗ ಪ್ರತಿಭಟನೆಗಳು ನಡೆಯುವ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಾಡಲಾಗುತ್ತಿದೆ. ಇಂಟರ್ನೆಟ್ ಕಟ್ ಆಗಿದ್ದು, ಜನರ ನಡುವೆ ಮಾಹಿತಿ ಹಂಚಿಕೆ ಕ್ಷೀಣಿಸಿದೆ. ಇಷ್ಟಾದರೂ ಹೋರಾಟ ಮಾತ್ರ ಮತ್ತಷ್ಟು ತೀವ್ರವಾಗಿ ಹಿಂಸೆ ಭುಗಿಲೇಳುತ್ತಿದೆ. ಹಿಂಸಾಚಾರದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಈಗ ವೈರಲ್ ಆಗುತ್ತಿವೆ.












Click it and Unblock the Notifications