ಇಸ್ರೇಲ್‌ ಮೇಲೆ ಇರಾನ್‌ ಭೀಕರ ದಾಳಿ: 8 ಸಾವು, 130 ಮಂದಿಗೆ ಗಾಯ; ಪ್ರತಿದಾಳಿಗೆ ಮುಂದಾದ ಯಹೂದಿ ರಾಷ್ಟ್ರ

Israel Iran War: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಉಭಯ ದೇಶಗಳು ಪರಸ್ಪರ ದಾಳಿಗಳನ್ನು ಮುಂದುವರಿಸಿವೆ. ಭಾನುವಾರ ಬೆಳಿಗ್ಗೆ ಟೆಲ್‌ ಅವಿವ್‌ ( ಇಸ್ರೇಲ್‌ ರಾಜಧಾನಿ ) ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದು, ಕನಿಷ್ಠ 130 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ಮೂಲಗಳು ಖಚಿತಪಡಿಸಿವೆ. ಸಂಘರ್ಷದ ಹಿನ್ನೆಲೆಯಲ್ಲಿ ತೆಹ್ರಾನ್‌ನ ( ಇರಾನ್‌ ರಾಜಧಾನಿ ) ಪರಮಾಣು ಯೋಜನೆ ಕುರಿತು ಇರಾನ್ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಸಭೆಯನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಉಭಯ ದೇಶಗಳು ಭಾನುವಾರವೂ ಪರಸ್ಪರ ದಾಳಿಗಳನ್ನು ತೀವ್ರಗೊಳಿಸಿವೆ. ಇರಾನ್‌ನ ಇಂಧನ ಕೈಗಾರಿಕಾ ಕಚೇರಿ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಇಸ್ರೇಲ್‌ ನೇರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ. ಈ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Iran-Israel Conflict Missiles Airstrikes Nuclear Threats June 15 2025

ಇಸ್ರೇಲ್‌ನ ಅಧಿಕಾರಿಗಳ ಪ್ರಕಾರ, ಇರಾನ್‌ನ ಕ್ಷಿಪಣಿಗಳು ಟೆಲ್‌ ಅವಿವ್‌ ಸಮೀಪದ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಅಪ್ಪಳಿಸಿದ್ದರಿಂದ ಎಂಟು ನಾಗರಿಕರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲಿ ಪಡೆಗಳು ಇರಾನ್‌ನ ಇಂಧನ ಕೈಗಾರಿಕೆ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಉಭಯ ದೇಶಗಳ ಈ ಸಂಘರ್ಷವು ಜಾಗತಿಕ ಮಟ್ಟದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಸಂಘರ್ಷವನ್ನು ತಡೆಯಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ವಿವಿಧ ದೇಶಗಳ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ, ಪರಮಾಣು ನೆಲೆಗಳ ಮೇಲಿನ ದಾಳಿಯು 'ಅಪಾಯಕಾರಿ' ಎಂದು ತಿಳಿಸಿದ್ದಾರೆ.

ಭಾರತದ ಪ್ರತಿಕ್ರಿಯೆ

ಇಸ್ರೇಲ್‌ನ ದಾಳಿಯನ್ನು ಖಂಡಿಸಿ ಚೀನಾ ಹೊರಡಿಸಿರುವ ಹೇಳಿಕೆಯಿಂದ ಭಾರತ ಹಿಂದೆ ಸರಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಚೀನಾದ ಹೇಳಿಕೆಯ ಕುರಿತು ನಡೆದ ಚರ್ಚೆಯಲ್ಲಿ ಭಾರತ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಗಾಜಾದಲ್ಲಿ ಕದನ ವಿರಾಮವನ್ನು ಬೆಂಬಲಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಿಂದಲೂ ಭಾರತ ದೂರವುಳಿದಿದೆ.

ಮುಚ್ಚಿದ ಜೋರ್ಡಾನ್ ವಾಯುಪ್ರದೇಶ

ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದ ಹಿನ್ನೆಲೆಯಲ್ಲಿ ಜೋರ್ಡಾನ್ ತನ್ನ ವಾಯುಪ್ರದೇಶವನ್ನು ಎರಡನೇ ಬಾರಿಗೆ ಮುಚ್ಚಿದೆ. ಜೋರ್ಡಾನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ದೇಶದ ವಾಯುಪ್ರದೇಶವನ್ನು ಮುಚ್ಚಿರುವುದಾಗಿ ತಿಳಿಸಿದೆ. ಅಲ್ಲದೆ, ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಜೋರ್ಡಾನ್‌ ಸರ್ಕಾರ ಮಾಹಿತಿ ನೀಡಿದೆ.

ಇರಾನ್ ತೈಲ ಸಚಿವಾಲಯದ ಹೇಳಿಕೆ

ಇಸ್ರೇಲ್‌ನ ದಾಳಿಯಿಂದ ತೆಹ್ರಾನ್‌ನ ಎರಡು ಇಂಧನ ಡಿಪೋಗಳಿಗೆ ಹಾನಿಯಾಗಿದೆ ಎಂದು ಇರಾನ್ ತೈಲ ಸಚಿವಾಲಯ ತಿಳಿಸಿದೆ. ತೆಹ್ರಾನ್‌ನ ವಾಯುವ್ಯದಲ್ಲಿರುವ ಶಹ್ರಾನ್‌ ತೈಲ ಡಿಪೋ ಮತ್ತು ನಗರದ ದಕ್ಷಿಣದಲ್ಲಿರುವ ಮತ್ತೊಂದು ಡಿಪೋ ಮೇಲೆ ದಾಳಿ ನಡೆದಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.

ಪೋಪ್ ಲಿಯೋ XIV ಕಳವಳ

ಇಸ್ರೇಲ್-ಇರಾನ್ ಯುದ್ಧದ ಬಗ್ಗೆ ಪೋಪ್ ಲಿಯೋ XIV ಕಳವಳ ವ್ಯಕ್ತಪಡಿಸಿದ್ದಾರೆ. ಪರಮಾಣು ಬೆದರಿಕೆಗಳಿಂದ ಮುಕ್ತವಾದ ಜಗತ್ತನ್ನು ನಿರ್ಮಿಸಲು ಅವರು ಕರೆ ನೀಡಿದ್ದಾರೆ. 'ಇರಾನ್ ಮತ್ತು ಇಸ್ರೇಲ್‌ ನಡುವಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಉಬಯ ದೇಶಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಪರಸ್ಪರ ಗೌರವ ಮತ್ತು ಪ್ರಾಮಾಣಿಕ ಸಂವಾದದ ಮೂಲಕ ಶಾಶ್ವತ ಶಾಂತಿಯನ್ನು ನಿರ್ಮಿಸಬೇಕು' ಎಂದು ಅವರು ಟ್ವಿಟ್‌ ಮಾಡಿದ್ದಾರೆ.

ನೆತನ್ಯಾಹು ಅವರ ಎಚ್ಚರಿಕೆ

ಇರಾನ್‌ನ ಪರಮಾಣು ಯೋಜನೆಗೆ ಇಸ್ರೇಲ್‌ನ ದಾಳಿಯಿಂದ 'ಭಾರಿ ಹೊಡೆತ' ಬಿದ್ದಿದೆ ಎಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 'ನಾವು ಅಯತೊಲ್ಲಾ ( ಇರಾನ್‌ನ ಸರ್ವೋಚ್ಚ ನಾಯಕ ) ಆಡಳಿತದ ಪ್ರತಿಯೊಂದು ತಾಣವನ್ನೂ ಗುರಿಯಾಗಿಸುತ್ತೇವೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+