ಭಾರತ, ನರೇಂದ್ರ ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆಯಿಂದ ಶ್ಲಾಘನೆ: ಯಾಕೆ ಗೊತ್ತಾ?
ನ್ಯೂಯಾರ್ಕ್: ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮುನ್ನುಗ್ಗಿ ಬೆಳೆಯುತ್ತಿದೆ. ಅದ್ರಲ್ಲೂ ಕಳೆದ 2 ದಶಕದಲ್ಲಿ ಭಾರತದ ಅಭಿವೃದ್ಧಿಯ ದಿಕ್ಕು ಬದಲಾಗಿ ಹೋಗಿದೆ. ಇದೀಗ ಪಿಎಂ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಈ ಸಾಧನೆಯ ಬಗ್ಗೆ ಖುದ್ದು ವಿಶ್ವಸಂಸ್ಥೆ ಮುಖ್ಯಸ್ಥರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ನಿಮಗಾಗಿ ಇಲ್ಲಿದೆ ಓದಿ.
ಅಭಿವೃದ್ಧಿಶೀಲ ರಾಷ್ಟ್ರ ಅಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಇನ್ನೇನು ಕೆಲವೇ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಸ್ಥಾನ ಅಲಂಕರಿಸಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಭಾರತದ ಅಭಿವೃದ್ಧಿ ಬೆಳವಣಿಗೆ ಅಷ್ಟಿದೆ. ಅದರಲ್ಲೂ ಈ ಹಿಂದೆ ಭಾರತ ಯಾವೆಲ್ಲಾ ಕ್ಷೇತ್ರದಲ್ಲಿ ಹಿಂದೆ ಉಳಿದಿತ್ತೋ ಅದನ್ನೆಲ್ಲಾ ಸರಿದಾರಿಗೆ ತರಲಾಗುತ್ತಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದ ಸಾಧನೆಗೆ ಭಾರತ ಮತ್ತೊಂದು ಮೈಲಿಗಲ್ಲು ತಲುಪಿದೆ, ವಿಶ್ವಸಂಸ್ಥೆಯ ಮಕ್ಕಳ ಮೇಲಿನ ಸಂಘರ್ಷದ ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಲಾಗಿದೆ. ಯಾಕೆ ಅಂದ್ರಾ? ಮುಂದೆ ಓದಿ.

ಭಾರತದ ಸಾಧನೆಗೆ ಮತ್ತೊಂದು ಗರಿ!
ಅಂದಹಾಗೆ ವಿಶ್ವಸಂಸ್ಥೆ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಡಲಾಗಿದೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದ ವರದಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಭಾರತ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇನ್ನು ಮಕ್ಕಳ ರಕ್ಷಣೆ ಬಗ್ಗೆ ಭಾರತ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ 2022ರ ವರದಿಯಲ್ಲಿ ಶ್ಲಾಘಿಸಿದ್ದರು ಗುಟೆರಸ್. ಅಲ್ಲದೆ ಸರ್ಕಾರದ ಕ್ರಮಗಳು ಆತಂಕದ ಸನ್ನಿವೇಶದಿಂದ ಭಾರತವನ್ನು ಮುಕ್ತವಾಗಿಸಲು ನೆರವಾಗಲಿವೆ ಎಂದು ಹೇಳಿದ್ದರು. ಇದೀಗ 2023ರ ವರದಿಯಲ್ಲಿ ಭಾರತ ಆ ಸಾಧನೆ ಮಾಡೇ ಬಿಟ್ಟಿದೆ.
ವಿಶ್ವಸಂಸ್ಥೆ ಭಾರತದ ಬಗ್ಗೆ ಹೇಳಿದ್ದೇನು?
ಬಲಿಷ್ಠವಾಗಿ ಬೆಳೆಯುತ್ತಿರುವ ಭಾರತದ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಹೀಗಾಗಿ ಭಾರತ ಮಾಡುವ ಪ್ರತಿಯೊಂದು ಸಾಧನೆ ಕೂಡ ಪ್ರಪಂಚದ ಗಮನ ಸೆಳೆಯುತ್ತದೆ. ಅದೇ ರೀತಿ, ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟ ಬಗ್ಗೆ ವಿಶ್ವಸಂಸ್ಥೆ ಶ್ಲಾಘಿಸಿದೆ. 'ಮಕ್ಕಳ ಸುರಕ್ಷತೆಗಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ಪರಿಗಣಿಸಿ, ಭಾರತವನ್ನು ವಾರ್ಷಿಕ ವರದಿಯಿಂದ ಕೈಬಿಟ್ಟಿದ್ದೇವೆ' ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಅಮೆರಿಕ ಭೇಟಿ ಬಳಿಕ ಮಹತ್ವದ ಬೆಳವಣಿಗೆ
ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆಗ ಕೂಡ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡಿತ್ತು. ಇದೀಗ ಮತ್ತೊಂದು ಬೆಳವಣಿಗೆ ಕೂಡ ಭಾರತವನ್ನು ಶೈನ್ ಮಾಡಿದೆ. ಅನೇಕ ರಾಷ್ಟ್ರಗಳಲ್ಲಿ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷ ನಿರಂತರವಾಗಿದ್ದು, ಭಾರತದಲ್ಲಿ ಅದಕ್ಕೆ ಕಡಿವಾಣ ಬಿದ್ದಿರುವುದು ಹೆಮ್ಮೆ ತರಿಸಿದೆ. ಇದು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಹೋಗಲು ಇನ್ನೊಂದು ಹೆಜ್ಜೆ ಅಂತಾ ಹೇಳಬಹುದು.
ಒಟ್ನಲ್ಲಿ ಭಾರತ ಈಗಾಗಲೇ ಹಲವು ಪಿಡುಗುಗಳ ಪಟ್ಟಿಯಿಂದ ಹೊರಬಂದಿದೆ. ಆದ್ರೆ ಈಗ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷ ಸಂಬಂಧಿಸಿದ ವರದಿಯಿಂದ ಹೊರಬಂದು ಮಹತ್ವದ ಸಾಧನೆ ಮಾಡಿದೆ. ಅಷ್ಟಕ್ಕೂ ಕಣಿವೆ ರಾಜ್ಯ ಜಮ್ಮು & ಕಾಶ್ಮೀರದಲ್ಲಿ ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರ 2022ರ ನವೆಂಬರ್‌ನಲ್ಲಿ ವಿಶ್ವಸಂಸ್ಥೆ ಜೊತೆ ಸೇರಿ ಆಯೋಜಿಸಿದ್ದ ಕಾರ್ಯಾಗಾರದ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್, ಭಾರತವನ್ನು ಮುಕ್ತವಾಗಿ ಈ ವಿಚಾರದಲ್ಲಿ ಶ್ಲಾಘಿಸಿದ್ದಾರೆ.












Click it and Unblock the Notifications