ಕುವೈತ್ ಕಟ್ಟಡ ಅಗ್ನಿ ದುರಂತ; ಮೃತಪಟ್ಟ ಬಹುತೇಕರು ತಮಿಳುನಾಡು, ಕೇರಳದವರು
ಕುವೈತ್‌ನ ಮಂಗಾಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು 40 ಮಂದಿ ಭಾರತೀಯರು ಸೇರಿದಂತೆ 49 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದ್ದು. 40 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು, ಅವರು ಅದೇ ಕಂಪನಿಯ ಕೆಲಸಗಾರರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವರು ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಕಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, "ಕುವೈತ್ ನಗರದಲ್ಲಿ ಸಂಭವಿಸಿದ ಅಗ್ನಿ ದುರಂತವು ದುಃಖಕರವಾಗಿದೆ. ಸಾವನ್ನಪ್ಪಿದವರಿಗೆ ಸಂತಾಪಗಳು, ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂತ್ರಸ್ತರಿಗೆ ಸಹಾಯ ಮಾಡಲು ಅಲ್ಲಿನ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ" ಎಂದು ಹೇಳಿದರು. ದುರಂತದ ಕುರಿತು ಪ್ರಧಾನಿ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ.
ಭಾರತೀಯ ರಾಯಭಾರಿ ಈಗಾಗಲೇ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. "ಕುವೈತ್ ನಗರದಲ್ಲಿ ಬೆಂಕಿ ಘಟನೆಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40 ಕ್ಕೂ ಹೆಚ್ಚು ಸಾವುಗಳು ಮತ್ತು 50 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ರಾಯಭಾರಿ ಸ್ಥಳಕ್ಕೆ ಹೋಗಿದ್ದಾರೆ. ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ" ಎಂದು ಶ್ರೀ ಎಸ್ ಜೈಶಂಕರ್ ಹೇಳಿದರು.
ಸಹಾಯವಾಣಿ ಆರಂಭ
ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ ಮತ್ತು ಅಗ್ನಿ ಅವಘಡದಲ್ಲಿ ಕೆಲವು ಭಾರತೀಯ ಕಾರ್ಮಿಕರು ಭಾಗಿಯಾಗಿದ್ದಾರೆ ಮತ್ತು ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ಹೇಳಿದೆ. ತುರ್ತು ಸಹಾಯವಾಣಿ ಸಂಖ್ಯೆ +965-65505246 ಕರೆ ಮಾಡಲು ಕೇಳಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, "ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ. ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ನೆರವು ನೀಡಲು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ನಾವು ತಕ್ಷಣವೇ ಕುವೈತ್‌ಗೆ ತೆರಳುತ್ತಿದ್ದೇವೆ." ಎಂದು ಹೇಳಿದರು.
ಮೃತಪಟ್ಟವರಲ್ಲಿ ಕೇರಳ ಮತ್ತು ತಮಿಳುನಾಡು ಮೂಲದವರು ಹೆಚ್ಚಾಗಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರದ ಸಹಾಯ ಕೋರಿದ್ದಾರೆ.












Click it and Unblock the Notifications