• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸರ್ವಪಕ್ಷಗಳ ಸರಕಾರದತ್ತ ಹೆಜ್ಜೆ; ಭಾರತದಿಂದ ಎಚ್ಚರದ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಜುಲೈ 10: ಶ್ರೀಲಂಕಾ ರಾಜಕೀಯ ಮತ್ತು ಆರ್ಥಿಕ ಕಗ್ಗಂಟು ಮುಂದುವರಿದಿದೆ. ಪ್ರತಿಭಟನೆ, ದಂಗೆ, ಹಿಂಸಾಚಾರ, ಮುತ್ತಿಗೆ ಇತ್ಯಾದಿ ಘಟನೆಗಳು ಎಡಬಿಡದೇ ನಡೆಯುತ್ತಿವೆ. ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ.

ಕೊಲಂಬೋದಲ್ಲಿರುವ ಅಧ್ಯಕ್ಷರ ನಿವಾಸ ಮತ್ತು ಕಚೇರಿ ಇರುವ ಭವನಕ್ಕೆ (ನಮ್ಮ ರಾಷ್ಟ್ರಪತಿ ಭವನ ಇದ್ದಂತೆ) ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಆದರೆ, ಅದೃಷ್ಟಕ್ಕೆ ಕಟ್ಟಡಕ್ಕೆ ಯಾವ ಹಾನಿಯನ್ನೂ ಮಾಡಿಲ್ಲ. ಆದರೆ ರಾಜಪಕ್ಸೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣವನ್ನು ಜನರು ಪತ್ತೆ ಮಾಡಿ ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣಗಳು ಏನು?, ಯಡವಟ್ಟಾಗಿದ್ದು ಎಲ್ಲಿ?ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣಗಳು ಏನು?, ಯಡವಟ್ಟಾಗಿದ್ದು ಎಲ್ಲಿ?

ಕಟ್ಟಡದೊಳಗೆ ಯಾವ ವಸ್ತುವಿಗೂ ಹಾನಿ ಮಾಡದ ಜನರು, ಅಲ್ಲಿನ ಈಜು ಕೊಳದಲ್ಲಿ ಸ್ನಾನ ಮಾಡುತ್ತಾ ಮೋಜು ಮಸ್ತಿ ಮಾಡಿದ್ದಾರೆ. ಅಧ್ಯಕ್ಷರ ಮನೆಯಲ್ಲಿ ಟಿವಿ ನೋಡಿಕೊಂಡು, ತಿಂಡಿ ಸೇವಿಸುತ್ತಾ ಪ್ರತಿಭಟನಾಕಾರರು ಕಾಲಕ್ಷೇಪ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ಇನ್ನೊಂದೆಡೆ ರಾನಿಲ್ ವಿಕ್ರಮಸಿಂಘೆ ತಾನು ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿದರೂ ಪ್ರತಿಭಟನಾಕಾರರು ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಮನೆಯೊಳಗಿದ್ದ ಅನೇಕ ವಸ್ತಗಳನ್ನು ಲೂಟಿ ಮಾಡಿದ್ದಾರೆ. ಇದೇ ವೇಳೆ, ಶ್ರೀಲಂಕಾದಲ್ಲಿ ಮುಂದಿನ ರಾಜಕೀಯ ಹೆಜ್ಜೆಗಳಿಗೆ ಪ್ರಯತ್ನಗಳಾಗುತ್ತಿವೆ.

ವಿಪಕ್ಷಗಳ ಸಭೆ

ವಿಪಕ್ಷಗಳ ಸಭೆ

ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಇಬ್ಬರೂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸ್ಪೀಕರ್ ಮಹಿಂದಾ ಯಪ ಅಬೇವರ್ದನಾ ಸಲಹೆ ನೀಡಿದ್ದರು. ಅದರಂತೆ ರಾನಿಲ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು. ಗೋಟಬಯ ರಾಜಪಕ್ಸೆ ಜುಲೈ 13ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪೀಕರ್‌ಗೆ ತಿಳಿಸಿದ್ದಾರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಪಕ್ಷಗಳು ಭಾನುವಾರ ಸಂಜೆಯ ನಂತರ ವಿಶೇಷ ಸಭೆ ಇಟ್ಟುಕೊಳ್ಳಲಿವೆ. ಸಮಗಿ ಜನ ಬಲವೇಗಯ, ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್, ತಮಿಳ್ ಪ್ರೋಗ್ರೆಸಿವ್ ಅಲೈಯನ್ಸ್, ಆಲ್ ಸಿಲೋನ್ ಮಕ್ಕಳ್ ಕಾಂಗ್ರೆಸ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಶ್ರೀಲಂಕಾ ಮೊದಲಾದ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಸೇರಲಿದ್ದಾರೆ. ಇಲ್ಲಿ ಹೊಸ ಸರಕಾರ ರಚನೆ ಸಾಧ್ಯತೆಯನ್ನು ಚರ್ಚಿಸಲಿದ್ದಾರೆ.

ಹೊಸ ಸರಕಾರ ರಚನೆ

ಹೊಸ ಸರಕಾರ ರಚನೆ

ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಅಧ್ಯಕ್ಷರ ಆಯ್ಕೆ ಆಗುವವರೆಗೂ ಸ್ಪೀಕರ್ ಅಬೇವರ್ದನಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ, ಶ್ರೀಲಂಕಾದ ಎಲ್ಲಾ ಸಂಸದರೂ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.

ರಾಜಪಕ್ಷೆ ಕುಟುಂಬ ಸದಸ್ಯರ ಹೊರತಾಗಿ ಬೇರೆ ಒಬ್ಬ ನಾಯಕನನ್ನು ಅಧ್ಯಕ್ಷರನ್ನಾಗಿ ಆರಿಸುವ ಸಾಧ್ಯತೆ ದಟ್ಟವಾಗಿದೆ.

ಭಾರತದ ಪ್ರತಿಕ್ರಿಯೆ

ಭಾರತದ ಪ್ರತಿಕ್ರಿಯೆ

ಶ್ರೀಲಂಕಾದ ಬಿಕ್ಕಟ್ಟಿನ ಬಗ್ಗೆ ಭಾರತ ಹೇಳುವಾಗ ಯಾವಾಗಲೂ ಎಚ್ಚರ ವಹಿಸುತ್ತದೆ. ಭಾನುವಾರ ಕೂಡ ಭಾರತ ಎಚ್ಚರದಿಂದ ಪ್ರತಿಕ್ರಿಯೆ ನೀಡಿದೆ. ಶ್ರೀಲಂಕಾದ ಜನರ ಜೊತೆ ಭಾರತ ನಿಲ್ಲುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಸಾಂವಿಧಾನಿಕ ಚೌಕಟ್ಟು, ಪ್ರಜಾತಂತ್ರೀಯ ಮಾರ್ಗ ಮತ್ತು ಮೌಲ್ಯಗಳ ಮೂಲಕ ಪ್ರಗತಿ ಹೊಂದಬೇಕೆಂಬ ಆಶಯದಲ್ಲಿರುವ ಶ್ರೀಲಂಕಾದ ಜನರ ಜೊತೆ ಭಾರತ ನಿಲ್ಲುತ್ತದೆ... ಭಾರತಕ್ಕೆ ಶ್ರೀಲಂಕಾ ಅತ್ಯಂತ ನಿಕಟ ನೆರೆ ದೇಶವಾಗಿದೆ. ನಮ್ಮೆರಡು ದೇಶಗಳ ಮಧ್ಯೆ ಬಹಳ ಆಳವಾದ ನಾಗರಿಕ ಬಾಂಧವ್ಯ ಇದೆ" ಎಂದು ಕೇಂದ್ರ ಸರಕಾರ ತಿಳಿಸಿದೆ.

ಭಾರತ ಈಗಾಗಲೇ ಶ್ರೀಲಂಕಾಗೆ ಬಹಳಷ್ಟು ಆರ್ಥಿಕ ಸಹಾಯ ಒದಗಿಸಿದೆ. ಶ್ರೀಲಂಕಾಗೆ ಭಾರತ 4 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂಪಾಯಿ) ಹಣಕಾಸು ಸಹಾಯ ಒದಗಿಸಿದೆ. ಇದರ ಜೊತೆಗೆ ಔಷಧ, ಅಹಾರ ಸಾಮಗ್ರಿ ಮತ್ತಿತರ ಸಹಾಯವನ್ನೂ ಕೊಟ್ಟಿದೆ.

ಜುಲೈ 13ರಂದು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆ : ಸ್ಪೀಕರ್ ಸ್ಪಷ್ಟನೆಜುಲೈ 13ರಂದು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆ : ಸ್ಪೀಕರ್ ಸ್ಪಷ್ಟನೆ

ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣ

ಶ್ರೀಲಂಕಾ ಬಿಕ್ಕಟ್ಟಿಗೆ ಕಾರಣ

2019ರಿಂದೀಚೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಭಾರೀ ಮೊತ್ತದ ಸಾಲ ಬೆಳೆದುಹೋಗಿದೆ. ಸಾಲದ ಕಂತು ಕಟ್ಟಲೂ ಆ ದೇಶದ ಬಳಿ ಹಣ ಇಲ್ಲದಂತಾಗಿದೆ. ವಿದೇಶಿ ಮೀಸಲು ನಿಧಿಯಲ್ಲಿ ಹಣ ಬಹುತೇಕ ಖಾಲಿಯಾಗಿದೆ. ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳಲೂ ಲಂಕಾ ಬಳಿ ಹಣ ಇಲ್ಲ.

ಶ್ರೀಲಂಕಾ ಆದಾಯದ ಪ್ರಮುಖ ಮೂಲಗಳಾದ ಕೃಷಿ ಮತ್ತು ಪ್ರವಾಸೋದ್ಯಮ ಎರಡೂ ನೆಲಕಚ್ಚಿದೆ. ಸಾವಯವ ಕೃಷಿ ಅಳವಡಿಸಿಕೊಂಡಿದ್ದು ಕೃಷಿಯಲ್ಲಿ ಉತ್ಪಾದನೆ ಕುಸಿತವಾಗಿದೆ. ಕೋವಿಡ್ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಇದರ ಜೊತೆಗೆ ಚೀನಾದ ದೊಡ್ಡ ದೊಡ್ಡ ಸಾಲಗಳು ಅನಗತ್ಯವೆನಿಸಿದ ಸೌಕರ್ಯ ಯೋಜನೆಗಳಿಗೆ ಪೋಲಾಗಿವೆ. ಆದಾಯ ಇಲ್ಲದೇ ಹೋದರೂ ಸರಕಾರ ತೆರಿಗೆ ಕಡಿತ ಮಾಡಿದ್ದೂ ಯಡವಟ್ಟಾಗಿದೆ.

ಇವೆಲ್ಲಾ ಒಟ್ಟಾರೆ ಕಾರಣಗಳಿಂದಾಗಿ ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಶೋಚನೀಯ ಹಂತಕ್ಕೆ ಬಂದು ನಿಂತಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು, ಕೈಮೀರಿ ಸಾಲ ಮಾಡದಿರಿ ಎಂದು ಹಿರಿಯರು ಹೇಳುವುದು ಇದಕ್ಕೆಯೇ.

(ಒನ್ಇಂಡಿಯಾ ಸುದ್ದಿ)

English summary
India has given a carefully worded statement on ongoing crisis in Sri Lanka, and has said it will be with People of Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X