Russia Ukrain War: ತನ್ನ ಪ್ರಜೆಗಳನ್ನು ವಾಪಸ್ ಕಳಿಸಿ; ರಷ್ಯಾಗೆ ಭಾರತ ಖಡಕ್ ಸೂಚನೆ
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಮಿಲಿಟರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವ ಕೇರಳದ ವ್ಯಕ್ತೊಯೊಬ್ಬರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ದೃಢಪಡಿಸಿದೆ. ಸೇನೆಯಲ್ಲಿ ಉಳಿದಿರುವ ಭಾರತೀಯ ಪ್ರಜೆಗಳನ್ನು ತ್ವರಿತವಾಗಿ ವಾಪಸ್ ಕಳಿಸಬೇಕು ಎಂದು ಭಾರತ ರಷ್ಯಾಗೆ ಆಗ್ರಹಿಸಿದೆ.
"ಭಾರತೀಯರನ್ನು ವಾಪಸ್ ಕಳಿಸುವ ಬಗ್ಗೆ ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳ ಜೊತೆ ಮತ್ತು ದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿ ಜೊತೆ ಚರ್ಚೆ ಮಾಡಲಾಗಿದೆ. ರಷ್ಯಾ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೇಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ನಾವು ಆಗ್ರಹಿಸಿದ್ದೇವೆ" ಎಂದು ವಿದೇಶಾಂತ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ತ್ರಿಶೂರ್ ಮೂಲದವರಾದ ಎಲೆಕ್ಟ್ರಿಷಿಯನ್ ಬಿನಿಲ್ ಟಿಬಿ ರಷ್ಯಾ ನಿಯಂತ್ರಣದಲ್ಲಿರುವ ಉಕ್ರೇನ್‌ನ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಬಿನಿಲ್ ಅವರ ಸೋದರಸಂಬಂಧಿ ಮೊದಲು ರಷ್ಯಾಗೆ ಹೋಗಿ ಸೈನ್ಯದಲ್ಲಿ ಕೆಲಸ ಪಡೆದಿದ್ದ ಜೈನ್ ಟಿಕೆ ಎನ್ನುವವರು ಕೂಡ ಗಾಯಗೊಂಡಿದ್ದಾರೆ.
ಬಿನಿಲ್ (32) ಮತ್ತು ಜೈನ್ (27) ಐಟಿಐ ಮೆಕ್ಯಾನಿಕಲ್ ಡಿಪ್ಲೊಮಾ ಪಡೆದವರಾಗಿದ್ದು, ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಕೆಲಸ ಮಾಡಲು ರಷ್ಯಾಗೆ ಹೋಗಿದ್ದರು. ಅವರು ರಷ್ಯಾಗೆ ಹೋಗುತ್ತಿದ್ದಂತೆ ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು, ಅವರನ್ನು ರಷ್ಯಾದ ಮಿಲಿಟರಿಯಲ್ಲಿ ಸಹಾಯಕರಾಗಿ ಯುದ್ಧ ಪ್ರದೇಶದಲ್ಲಿ ಸೇವೆಗೆ ನಿಯೋಜನೆ ಮಾಡಲಾಗಿತ್ತು ಎಂದು ಮೃತ ವ್ಯಕ್ತಿಯ ಸಂಬಂಧಿಕರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಭಾರತೀಯ ವ್ಯಕ್ತಿಯ ಸಾವಿಗೆ ಪ್ರತಿಕ್ರಿಯೆ ನೀಡಿದ ರಣಧೀರ್ ಜೈಸ್ವಾಲ್, "ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ನೇಮಕವಾಗಿದ್ದ ಭಾರತೀಯ ಪ್ರಜೆ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಮತ್ತೊಬ್ಬ ಕೇರಳದ ಪ್ರಜೆ ಗಾಯಗೊಂಡಿದ್ದು ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ರಷ್ಯಾದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ವಿದೇಶಾಂಗ ಸಚಿವಾಲಯ ಸಂತಾಪ ಸೂಚಿಸಿದೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೃತಪಟ್ಟಿರುವ ಯುವಕ ಕುಟುಂಬಕ್ಕೆ ಸಹಾಯ ಮಾಡಲು ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ.
"ನಮ್ಮಿಂದ ಸಾಧ್ಯವಾಗುವ ಎಲ್ಲಾ ಸಹಾಯವನ್ನು ಮಾಡಲಾಗುತ್ತದೆ. ಮೃತದೇಹವನ್ನು ಭಾರತಕ್ಕೆ ತರಲು ರಷ್ಯಾದ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಕೂಡ ಭಾರತಕ್ಕೆ ವಾಪಸ್ ಕರೆತರಲು ನಾವು ಪ್ರಯತ್ನ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ರಷ್ಯಾ ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದ ಈವರೆಗೂ 8 ಭಾರತೀಯ ಪ್ರಜೆಗಳು ರಷ್ಯಾ ಸೈನ್ಯದ ಜೊತೆ ಕೆಲಸ ಮಾಡುವಾಗ ಮೃತಪಟ್ಟಿದ್ದಾರೆ. ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಸೇರ್ಪಡೆಗೊಂಡಿರುವ ಹೆಚ್ಚುವರಿ 63 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಭಾರತ ಒತ್ತಾಯಿಸುತ್ತಿದೆ.












Click it and Unblock the Notifications