India-Canada: ಎರಡು ತಿಂಗಳ ಬಳಿಕ ಕೆನಡಾ ಪ್ರಜೆಗಳಿಗೆ ಇ-ವೀಸಾ ಸೇವೆ ಪುನಾರಂಭ
ನವದೆಹಲಿ, ನವೆಂಬರ್ 22: ಭಾರತದ ಮೇಲೆ ಗಂಭೀರ ಆರೋಪ ಮಾಡಿದ್ದರಿಂದ ಕೆನಡಾದ ದೇಶದ ಪ್ರಜೆಗಳಿಗೆ ವೀಸಾ ಸೇವೆ ನಿರಾಕರಿಸಲಾಗಿತ್ತು. ಎರಡು ತಿಂಗಳ ನಂತರ ಇದೀಗ ಇ-ವೀಸಾ ಸೇವೆಯನ್ನು ಭಾರತ ಬುಧವಾರ ಪುನರಾರಂಭಿಸಿದೆ ಎಂದು ವರದಿ ಆಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಯನ್ನು ಸ್ಥಗಿತಗೊಳಿಸಿತ್ತು. ಎರಡೂ ದೇಶಗಳ ಮಧ್ಯದಲ್ಲಿನ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಕೆನಡಾ ಪ್ರಜೆಗಳಿಗೆ ಈ ಇ-ವೀಸಾ ಸೇವೆಯನ್ನು ಭಾರತ ನಿಷೇಧಿಸಿ ಆದೇಶಿಸಿತ್ತು.

ತಿಂಗಳುಗಳ ಹಿಂದೆ ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಸಭೆಯಲ್ಲಿ ಭಾರತ ಮತ್ತು ಕೆನಡಾ ಪ್ರಧಾನಿಗಳ ನಡುವೆ ಖಲಿಸ್ತಾನ್ ವಿಷಯದ ಕುರಿತು ವಿವಾದಾತ್ಮಕ ಚರ್ಚೆಯ ನಂತರ ಉಭಯ ದೇಶಗಳ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.
ಹದಗೆಟ್ಟ ರಾಜತಾಂತ್ರಿಕ ಸಂಬಂಧ
ಇದೇ ವರ್ಷ ಜೂನ್ ತಿಂಗಳಲ್ಲಿ ನಡೆದ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಈ ವಿಚಾರ ಕುರಿತು ಎರಡು ತಿಂಗಳ ಹಿಂದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ಮೇಲೆ ಆರೋಪ ಮಾಡಿದ್ದರು. ಹತ್ಯೆಗೂ ಭಾರತ ಏಜೆಂಟರ್ ನಂಟಿದೆ ಎಂದು ಹೇಳಿದ್ದರು.
ಕೆನಡಾದ ಈ ಹೇಳಿಕೆ ಹೊರ ಬರುತ್ತಿದ್ದಂತೆ ಎರಡು ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಉಭಯ ದೇಶಗಳಿಂದ ರಾಯಭಾರಿಗಳು ಹಾಗೂ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಅಲ್ಲಿಂದ ಕೆನಡಾ ಪ್ರಜೆಗಳಿಗೆ ಇ-ವೀಸಾ ಸೇವೆ ನಿರಾಕರಿಸಲಾಯಿತು. ಇದರ ನಂತರ ವ್ಯಾಪಾರ ಸಂಬಂಧದ ಕುರಿತು ಯಾವುದೇ ಮಾತುಕತೆಗಳು ಆಗಿಲ್ಲ ಎನ್ನಲಾಗಿದೆ.
ಆರೋಪಕ್ಕೆ ಭಾರತ ಸ್ಪಷ್ಟನೆ: ತನಿಖೆಗೆ ಸಹಕಾರಕ್ಕೆ ಮನವಿ
ಕೆನಡಾದ ಈ ಆರೋಪವನ್ನು ನಿರಾಕರಿಸಿರುವ ಭಾರತವು ಯಾವುದೇ ಕೃತ್ಯಗಳಲ್ಲಿ ಭಾರತ ಭಾಗಿಯಾಗಿಲ್ಲ. ಈ ಆರೋಪಗಳೆಲ್ಲವು ಆರೋಪಗಳು 'ಅಸಂಬದ್ಧ', ಇವೆಲ್ಲ ಪ್ರೇರೆಪಿತ ಹೇಳಿಕೆಗಳು ಎಂದು ಸ್ಪಷ್ಟಪಡಿಸಿತ್ತು. ಇದೆಲ್ಲ ಬೆಳವಣಿಗೆಗಳು ನಡೆದು ಎರಡು ತಿಂಗಳಾಗಿದೆ. ಇದೀಗ ಮತ್ತೆ ಇ-ವೀಸಾ ಸೇವೆಯನ್ನು ಭಾರತ ಪುನಾರಂಭಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕಳೆದ ವಾರ ಅವರು ವಿಚಾರಣೆ ಕುರಿತು ಪ್ರತಿಕ್ರಿಯಿಸಿದ್ದರು. ಕೆನಡಾದ ವಿಚಾರಣೆಗೆ ಸಹಕರಿಸುವಂತೆ ವಿದೇಶಿ ಕಾರ್ಯಕ್ರಮವೊಂದಲ್ಲಿ ಅವರು ಒತ್ತಾಯಿಸಿದ್ದಾರೆ. ನಾವು ಈ ಆರೋಪ ಸಂಬಂಧದ ತನಿಖೆಯಿಂದ ಹಿಂದೆ ಸರಿಯುವುದಿಲ್ಲ. ಆದರೆ ಕೆನಡಾದ ಸರ್ಕಾರ ಆರೋಪ ಸಾಬೀತು ಪಡಿಸಲು ದಯವಿಟ್ಟು ನಮ್ಮೊಂದಿಗೆ ಪುರಾವೆಗಳನ್ನು ಹಂಚಿಕೊಳ್ಳಬೇಕು ಎಂದು ಅವರು ಹೇಳಿದ್ದರು.












Click it and Unblock the Notifications