ಪಾಕ್ ಮಾಜಿ ಪ್ರಧಾನಿಗೆ ಜೀವ ಭಯದಲ್ಲೇ ಜಾಮೀನು ವಿಸ್ತರಣೆ!
ಇಸ್ಲಾಮಾಬಾದ್: ಆಂತರಿಕ ಕಚ್ಚಾಟ, ಉಗ್ರರ ತವರು ನೆಲವಾಗಿರುವ ಪಾಕಿಸ್ತಾನದಲ್ಲಿ ಏನೂ ಸರಿಯಿಲ್ಲ. ಅದರಲ್ಲೂ ರಾಜಕಾರಣಿಗಳ ಜೀವಕ್ಕೆ ಗ್ಯಾರಂಟಿ ಇಲ್ಲ ಅನ್ನೋದು ಇಮ್ರಾನ್ ಮೇಲಿನ ಗುಂಡಿನ ದಾಳಿ ಬಳಿಕ ಜಗಜ್ಜಾಹೀರಾಗಿದೆ. ಈ ಮಧ್ಯೆ ಪಾಕ್ ಮಾಜಿ ಪ್ರಧಾನಿಗೆ ಜೀವ ಭಯದಲ್ಲೇ ಜಾಮೀನು ವಿಸ್ತರಣೆಯಾಗಿದೆ. ಹಾಗಾದರೆ ಇಮ್ರಾನ್‌ಗೆ ಫುಲ್ ರಿಲೀಫ್ ಸಿಕ್ಕಿದೆಯಾ? ಮುಂದೆ ತಿಳಿಯೋಣ.
ಹೌದು, ಉಗ್ರರ ತವರು ನೆಲವಾಗಿರುವ ಪಾಕಿಸ್ತಾನದಲ್ಲಿ ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ. ಅದ್ರಲ್ಲೂ ರಾಜಕಾರಣಿಗಳ ಜೀವ ಗಾಜಿನ ಮಡಿಕೆ ಇದ್ದಂತೆ. ಯಾವ ಕ್ಷಣದಲ್ಲು ಒಡೆದು ಹೋಗಬಹುದು. ಪರಿಸ್ಥಿತಿ ಹೀಗಿರುವಾಗಲೇ ಕಳೆದ ವರ್ಷ ಹಿಂದೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಭೀಕರ ಗುಂಡಿನ ದಾಳಿ ನಡೆದಿತ್ತು. ಕಾಲಿಗೆ ಗುಂಡು ತಿಂದ ಇಮ್ರಾನ್ ಖಾನ್ ಜೀವ ಉಳಿಸಿಕೊಂಡರು. ಇದೀಗ ಇಮ್ರಾನ್ ಖಾನ್ ವಿರುದ್ಧದ 9 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿದೆ.

ಜಾಮೀನು ವಿಸ್ತರಿಸಿದರೂ ಸಮಸ್ಯೆ!
ಹಿಂದೆ ಇಮ್ರಾನ್ ಖಾನ್‌ಗೆ 8 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಮೇ 3ರವರೆಗೆ ಜಾಮೀನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ನೀಡಿತ್ತು. ಇದೀಗ ಒಟ್ಟು 9 ಪ್ರಕರಣಗಳಲ್ಲಿ ಇಮ್ರಾನ್ ಖಾನ್‌ಗೆ ಜಾಮೀನು ವಿಸ್ತರಣೆ ಆಗಿದೆ. ಇನ್ನು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಖುದ್ದಾಗಿ ಹಾಜರಾದ ಬಳಿಕ ಪಾಕ್ ಮಾಜಿ ಪ್ರಧಾನಿಗೆ ಸಿಹಿಸುದ್ದಿ ಸಿಕ್ಕಿದೆ. ಆದರೆ ಈಗಲೂ ತಮ್ಮ ವಿರುದ್ಧ ಇರುವ ಪ್ರಕರಣಗಳನ್ನ ಎದುರಿಸಲು ಇಮ್ರಾನ್ ಖಾನ್ ಪರದಾಡುವ ಪರಿಸ್ಥಿತಿ ಅಲ್ಲಿದೆ.
ಇಮ್ರಾನ್‌ಗೆ ಅತಿಯಾದ ಆತ್ಮವಿಶ್ವಾಸ?
ಪಾಕಿಸ್ತಾನದಲ್ಲಿ ದೊಡ್ಡ ಬದಲಾವಣೆ ತಂದು ಬಿಡ್ತೀನಿ ಎಂಬ ಹುಮ್ಮಸ್ಸಿನಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಸ್ವತಃ ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. 2 ತಿಂಗಳ ಹಿಮದೆ ಇಮ್ರಾನ್ ಮನೆ ಎದುರು ಪೊಲೀಸರು ಮತ್ತು ಇಮ್ರಾನ್ ಖಾನ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಒಟ್ಟು 3 ಕೇಸ್ ಇಮ್ರಾನ್ ವಿರುದ್ಧ ದಾಖಲಾಗಿವೆ. ಜೊತೆಗೆ ಇನ್ನೂ ಹಲವು ಕೇಸ್‌ಗಳನ್ನ ಇಮ್ರಾನ್ ಖಾನ್ ವಿರುದ್ಧ ಹಾಕಲಾಗಿದ್ದು, ಪಾಕಿಸ್ತಾನ ಬಿಟ್ಟು ಕದಲಂತೆ ಅಲ್ಲಿನ ಸರ್ಕಾರ ಮಾಡಿದೆ.

ಗುಂಡು ತಿಂದು ಬದುಕಿದ್ದ ಇಮ್ರಾನ್!
ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಇಮ್ರಾನ್ ಖಾನ್ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಹೇಗೋ ಬಚಾವ್ ಆಗಿ ಜೀವ ಉಳಿಸಿಕೊಂಡರು ಪಾಕ್ ಮಾಜಿ ಪ್ರಧಾನಿ. ಆದರೆ ಈಗಲೂ ಅಂತಹದ್ದೇ ಬೆದರಿಕೆ ಕರೆಗಳು ಹಾಗೂ ಇಮ್ರಾನ್ ಕೊಲೆಗೆ ಪ್ರಯತ್ನಗಳು ಸಾಗಿವೆ. ಹೀಗಾಗಿ ಅಲರ್ಟ್ ಆಗಿದ್ದಾರೆ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಂ ಪಾಕ್ ಮಾಜಿ ಪ್ರಧಾನಿ. ಇಮ್ರಾನ್ ಖಾನ್ ಮನೆಗೆ ಕೂಡ ಭಾರಿ ಭದ್ರತೆ ಒದಗಿಸಲಾಗುತ್ತಿದೆ.
ಆರ್ಥಿಕವಾಗಿ ದಿವಾಳಿಯಾದ ಪಾಕ್?
ಪಾಕಿಸ್ತಾನದಲ್ಲಿ ಜನ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಜನ ಒಂದು ಮುಷ್ಟಿ ಗೋಧಿ ಹಿಟ್ಟು ಪಡೆಯೋದಕ್ಕೂ ಹೊಡೆದಾಡುವ ಪರಿಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಕ್ಷಣಮಾತ್ರದಲ್ಲಿ ಗಗನಕ್ಕೆ ಏರುತ್ತಿದೆ. ಜನ ಸಾಮಾನ್ಯರು ಬದುಕಲು ಪರದಾಡುವ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕ್ ರಾಜಕಾರಣಿಗಳು ಹಿಂಸೆಯ ಜೊತೆಗೆ ಗಲಭೆಯಲ್ಲೇ ದಿನದೂಡುತ್ತಾ ಬಂದಿದ್ದಾರೆ. ಅದರಲ್ಲೂ ಇಮ್ರಾನ್ ಖಾನ್ ವಿರುದ್ಧ ಇಡೀ ಪಾಕ್ ರಾಜಕಾರಣ ಒಂದಾಗಿದೆ.
ಪಾಕಿಸ್ತಾನ ಉಗ್ರರಿಂದ ಪರೋಕ್ಷವಾಗಿ ಆಡಳಿತ ನಡೆಸುವ ಪರಿಸ್ಥಿತಿಗೆ ಸಿಲುಕಿದೆ. ಉಗ್ರರ ಮಾತು ಕೇಳುವ ನಾಯಕರು ಮಾತ್ರ ಆ ದೇಶದಲ್ಲಿ ಜೀವ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಹೆಣ ಬೀಳೋದು ಗ್ಯಾರಂಟಿ. ಈಗಾಗಲೇ ಅದೆಷ್ಟೋ ನಾಯಕರ ಜೀವ ತೆಗೆದಿರುವ ಉಗ್ರರು, ತಮ್ಮ ಮಾತು ಕೇಳದ ರಾಜಕಾರಣಿಗಳನ್ನು ಹತ್ಯೆ ಮಾಡಲು ಯೋಚಿಸುವುದಿಲ್ಲ. ಈಗ ಇಮ್ರಾನ್ ಖಾನ್ ಕೂಡ ಅಂತಹದ್ದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಂಕಷ್ಟದ ನಡುವೆ 9 ಪ್ರಕರಣಗಳಲ್ಲಿ ಜಾಮೀನು ಪಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜೈಲಿಗೆ ಹೋಗುವ ಭೀತಿಯಿಂದ ಪಾರಾಗಿದ್ದಾರೆ ಇಮ್ರಾನ್.












Click it and Unblock the Notifications