US Elections 2024: ಭಾರತದ ಮೇಲೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪರಿಣಾಮ ಏನು?

2024ರ ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಜಾಗತಿಕ ರಾಜಕಾರಣದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿದ್ದು, ಭಾರತವೂ ಅದರಿಂದ ಹೊರತಾಗಿಲ್ಲ. ಅಮೆರಿಕಾದ ಮುಂದಿನ ಸರ್ಕಾರದ ನಿರ್ಣಯಗಳು ಅಂತಾರಾಷ್ಟ್ರೀಯ ಸಂಬಂಧಗಳು, ಆರ್ಥಿಕ ನೀತಿಗಳು ಮತ್ತು ಜಾಗತಿಕ ಭದ್ರತಾ ಆಯಾಮಗಳ ಮೇಲೆ ಪರಿಣಾಮ ಉಂಟುಮಾಡಿ, ಆ ಮೂಲಕ ಭಾರತದ ಹಿತಾಸಕ್ತಿಗಳು ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಅಮೆರಿಕಾಗೆ ಮಾತ್ರ ಮುಖ್ಯವಲ್ಲ. ಅದು ಭಾರತ ಸೇರಿದಂತೆ, ಜಗತ್ತಿನಾದ್ಯಂತ ವಿವಿಧ ದೇಶಗಳಿಗೆ ಮುಖ್ಯವಾದ ವಿದ್ಯಮಾನವಾಗಿದೆ.

ಭಾರತೀಯ ಉದ್ಯಮಗಳು ಮತ್ತು ಭಾರತೀಯರಿಗೆ ಅಮೆರಿಕಾದ ನೂತನ ಸರ್ಕಾರ ಜಾರಿಗೆ ತರಬಹುದಾದ ವಲಸೆ ನೀತಿಗಳು ಮತ್ತು ಇತರ ಕಾನೂನುಗಳು ಬಹಳ ಮುಖ್ಯವಾಗಿವೆ. ನೂತನ ಸರ್ಕಾರವೇನಾದರೂ ಇವುಗಳಲ್ಲಿ ಬದಲಾವಣೆಗಳನ್ನು ತಂದರೆ, ಅದರಿಂದ ಬಹಳಷ್ಟು ಭಾರತೀಯರಿಗೆ ಮುಖ್ಯವಾಗಿರುವ ಅಮೆರಿಕಾದಲ್ಲಿನ ಉದ್ಯೋಗಾವಕಾಶಗಳು, ಉದ್ಯಮ ವಿಸ್ತರಣೆ ಮತ್ತು ಕೌಶಲಯುತ ವೃತ್ತಿಪರರು ಅಲ್ಲಿಗೆ ತೆರಳುವಂತಹ ವಿಚಾರಗಳ ಮೇಲೆ ಪರಿಣಾಮ ಉಂಟಾಗಬಹುದು.

Impact of the US Presidential Election on India and Its Future

ಪ್ರಸ್ತುತ ಚುನಾವಣೆಯಲ್ಲಿ ಹೋಲಿಕೆ ಮಾಡಿ ನೋಡಬಹುದಾದ ಪ್ರಮುಖ ವಿಚಾರವೆಂದರೆ, ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರ‌ ವಲಸೆ ನೀತಿಗಳಾಗಿವೆ. ಅವರಿಬ್ಬರ ನೀತಿಗಳೂ ಪರಸ್ಪರ ವೈರುಧ್ಯಮಯವಾಗಿದ್ದು, ಭಾರತೀಯರು ಮತ್ತು ಸಾಕಷ್ಟು ದೇಶಗಳ ಜನರ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರಬಲ್ಲವು. ಅಮೆರಿಕಾದಲ್ಲಿ ಇಂದು 52 ಲಕ್ಷ ಭಾರತೀಯ ಮೂಲದ ಅಮೆರಿಕನ್ನರಿದ್ದು, ಅವರು ಅಮೆರಿಕಾದ ಎರಡನೇ ಅತಿದೊಡ್ಡ ವಲಸೆ ಸಮುದಾಯವಾಗಿದ್ದಾರೆ. ಈ ಜನಸಂಖ್ಯೆಯ ಪೈಕಿ, ಅಂದಾಜು 23 ಲಕ್ಷ ಜನರು ಅಮೆರಿಕಾದಲ್ಲಿ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಕಾರ್ನೆಗೀ ಎಂಡೋಮೆಂಟ್ ಸಂಸ್ಥೆ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯ ಪ್ರಕಾರ, 61%ದಷ್ಟು ನೋಂದಾಯಿತ ಭಾರತೀಯ ಅಮೆರಿಕನ್ನರು ತಾವು ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರೆ, 32% ಜನರು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಗಡೀಪಾರಿನ ಕುರಿತು ಟ್ರಂಪ್ ಮಾರ್ಗಸೂಚಿ

ಟ್ರಂಪ್ ಅವರ ಕಾರ್ಯ ವಿಧಾನ ಗಡೀಪಾರು ಕಾನೂನನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶ ಹೊಂದಿದೆ. ಟ್ರಂಪ್ ಅಮೆರಿಕಾದಲ್ಲಿ ನೆಲೆಸಿರುವ, ಕಾನೂನಿನ ಮಾನ್ಯತೆ ಹೊಂದಿರದ 11 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸೆಗಾರರನ್ನು ದೇಶದಿಂದ ಹೊರಹಾಕುವ ಉದ್ದೇಶ ಹೊಂದಿದ್ದಾರೆ. ಟ್ರಂಪ್ ಅವರಿಗೆ ಅಧ್ಯಕ್ಷರ ಕಚೇರಿಯಲ್ಲಿ ಹೆಚ್ಚಿನ ಅಧಿಕಾರ ಹೊಂದುವ ಉದ್ದೇಶವಿದ್ದು, ಆ ಮೂಲಕ ಕಾಂಗ್ರೆಸ್ ಅನುಮತಿ ಇಲ್ಲದೆ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗಬೇಕು ಎಂದುಕೊಂಡಿದ್ದಾರೆ. ಹಾಗೇನಾದರೂ ಆದರೆ, ಡೊನಾಲ್ಡ್ ಟ್ರಂಪ್ ಅವರಿಗೆ ತಾನು ಅಂದುಕೊಂಡ ಕ್ರಮಗಳನ್ನು ನೇರವಾಗಿ ಜಾರಿಗೆ ತರಲು ಸಾಧ್ಯವಾಗಬಹುದು.

ಟ್ರಂಪ್ ಅವರ ಕ್ರಮವೇನಾದರೂ ಜಾರಿಗೆ ಬಂದರೆ, ಐಸಿಇ ಬಂಧನ ಕೇಂದ್ರಗಳ (ಅಮೆರಿಕಾದ ವಲಸೆ ಮತ್ತು ಕಸ್ಟಮ್ಸ್ ಇಲಾಖೆಗಳು ವಲಸಿಗರನ್ನು ಇರಿಸುವ ಕೇಂದ್ರಗಳು) ಸಂಖ್ಯೆ ಹೆಚ್ಚಾಗುವ, ಮತ್ತು ಪ್ರಕರಣಗಳ ವಿಚಾರಣೆ ಕ್ಷಿಪ್ರಗೊಳಿಸಲು 1,000ಕ್ಕೂ ಹೆಚ್ಚು ಹೊಸ ವಲಸೆ ನ್ಯಾಯಾಲಯಗಳ ಸ್ಥಾಪನೆಯಾಗಬಹುದು. ಗಡೀಪಾರು ಕ್ರಮಗಳಿಗೆ ಆರಂಭದಲ್ಲಿ 315 ಬಿಲಿಯನ್ ಡಾಲರ್ ವೆಚ್ಚ ತಗಲುವ ನಿರೀಕ್ಷೆಗಳಿದ್ದು, ಇದನ್ನು ನಿಧಾನವಾಗಿ ಜಾರಿಗೊಳಿಸಿದರೆ ವರ್ಷಕ್ಕೆ 88 ಬಿಲಿಯನ್ ಡಾಲರ್ ವೆಚ್ಚವಾಗುವ ಸಾಧ್ಯತೆಗಳಿವೆ. ಅಮೆರಿಕನ್ ಇಮಿಗ್ರೇಷನ್ ಕೌನ್ಸಿಲ್ (ಎಐಸಿ) ಇಂತಹ ತೀವ್ರ ಕ್ರಮಗಳು ಅಮೆರಿಕಾದ ಫೆಡರಲ್ ಬಜೆಟ್ ಮೇಲೆ ಒತ್ತಡ ಸೃಷ್ಟಿಸಿ, ಮುಖ್ಯವಾದ ಸಾರ್ವಜನಿಕ ಸೇವಾ ಯೋಜನೆಗಳಿಗೆ ಹಣಕಾಸಿನ ಕೊರತೆ ಉಂಟಾಗುವಂತೆ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ. ಇದು ಅಮೆರಿಕನ್ ತೆರಿಗೆದಾರರ ಮೇಲೆ ನೇರ ಪರಿಣಾಮ ಬೀರಲಿದೆ.

ಹಣಕಾಸಿನ ವೆಚ್ಚ ಮಾತ್ರವಲ್ಲದೆ, ಟ್ರಂಪ್ ಅವರ ಯೋಜನೆ ಬಲವಂತದ ಆಡಳಿತ ಶೈಲಿಯನ್ನು ಸೂಚಿಸುತ್ತಿದೆ. ಕಾಂಗ್ರೆಸ್‌ಗೆ ಯಾವುದೇ ಪಾತ್ರ ಇರದಂತೆ ಮಾಡಿ, ವಲಸೆಯನ್ನು 'ಆಕ್ರಮಣ' ಎಂದು ಪರಿಗಣಿಸಿರುವ ಟ್ರಂಪ್ ಅವರ ಕ್ರಮಗಳು ನ್ಯಾಯಾಲಯದ ಅನುಮತಿಯ ಅವಶ್ಯಕತೆ ಇಲ್ಲದೆ, ಪ್ರಜಾಪ್ರಭುತ್ವದ ನಿಯಂತ್ರಣವನ್ನೂ ಮೀರಲಿದೆ. ಇದು ಒಂದು ರೀತಿ ಸರ್ವಾಧಿಕಾರಿ ಸರ್ಕಾರವನ್ನು ಹೋಲುವ ಸಾಧ್ಯತೆಗಳಿವೆ. ಈ ಕಾರ್ಯತಂತ್ರ ಸಮುದಾಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಕುಟುಂಬಗಳನ್ನು ಪರಸ್ಪರ ದೂರಾಗಿಸಿ, ಭಯದ ವಾತಾವರಣ ನಿರ್ಮಿಸಲಿದೆ. ಇದರಿಂದಾಗಿ ಜನರು ಧ್ವನಿ ಎತ್ತಿ ಮಾತನಾಡುವುದೂ ಕಷ್ಟಕರವಾಗಲಿದೆ.

ಪೌರತ್ವದತ್ತ ಕಮಲಾ ಹ್ಯಾರಿಸ್ ಮಾರ್ಗಸೂಚಿ

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಕಾರ್ಯ ವಿಧಾನ ಟ್ರಂಪ್ ಅವರದಕ್ಕಿಂತ ಸಾಕಷ್ಟು ಭಿನ್ನವಾಗಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳನ್ನು ಸನಿಹ ತರುವ ಯೋಜನೆಗೆ ಬೆಂಬಲ ನೀಡುತ್ತದೆ. ಕಮಲಾ ಹ್ಯಾರಿಸ್ ಅವರು ಗಡಿ ಭದ್ರತೆಗೆ ಹೆಚ್ಚಿನ ಹೂಡಿಕೆ ಒದಗಿಸಿ, ಅರ್ಹ ವಲಸಿಗರಿಗೆ ಪೌರತ್ವ ಪಡೆಯಲು ಕಾನೂನು ಕ್ರಮಗಳನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಕಮಲಾ ಅವರ ಕ್ರಮಗಳು ಜನರ ವಲಸೆಯ ಮೂಲ ಕಾರಣವನ್ನು ನಿಭಾಯಿಸುವ ಉದ್ದೇಶ ಹೊಂದಿದ್ದು, ವಲಸೆ ಪ್ರಕ್ರಿಯೆಯಲ್ಲಿ ಮುಕ್ತತೆ ತರುವ ಉದ್ದೇಶ ಹೊಂದಿವೆ. ಅವರು ಈ ಪ್ರಕ್ರಿಯೆಗಳು ಪ್ರಸ್ತುತ ಇರುವ ವ್ಯವಸ್ಥೆಗಳಾದ ಕಾಂಗ್ರೆಸ್ ಮತ್ತು ನ್ಯಾಯಾಲಯಗಳ ಒಳಗೇ ನಡೆಯಬೇಕೆಂಬ ಭಾವನೆ ಹೊಂದಿದ್ದಾರೆ.

ಕಮಲಾ ಹ್ಯಾರಿಸ್ ಅವರು ವಲಸಿಗ ಕಾರ್ಮಿಕರನ್ನು ಕೃಷಿ, ನಿರ್ಮಾಣ ಮತ್ತು ಆತಿಥ್ಯದಂತಹ ಪ್ರಮುಖ ವಲಯಗಳಲ್ಲಿ ಬಳಸಿಕೊಂಡು, ಆರ್ಥಿಕ ಸ್ಥಿರತೆ ತರುವ ವಿಧಾನವನ್ನು ಆರಿಸಿದ್ದಾರೆ. ವಲಸಿಗ ಕಾರ್ಮಿಕರು ಇಲ್ಲವಾದರೆ, ಈ ಮೇಲ್ಕಂಡ ವಲಯಗಳು ಕಾರ್ಮಿಕರ ಕೊರತೆಯನ್ನು ಎದುರಿಸಲಿವೆ. ಅದರ ಪರಿಣಾಮವಾಗಿ, ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿ, ಮನೆಗಳ ಬೆಲೆಯೂ ಹೆಚ್ಚಾಗಲಿದೆ. ಕಮಲಾ ಹ್ಯಾರಿಸ್ ಅವರ ಯೋಜನೆ ಎರಡೂ ಪಕ್ಷಗಳಿಂದ ಬೆಂಬಲ ಪಡೆದುಕೊಂಡು, ಆ ಮೂಲಕ ಉದ್ಯಮಗಳಿಗೆ ಬೆಂಬಲ ಒದಗಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಗುರಿ ಹೊಂದಿದೆ. ಇದು ಅವಕಾಶಗಳು ಮತ್ತು ನ್ಯಾಯ ಒದಗಿಸುವ ಕುರಿತು ಅಮೆರಿಕಾದ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಮತದಾರರು ತಮ್ಮ ಮುಂದಿರುವ ಆಯ್ಕೆಗಳನ್ನು ತೂಕ ಮಾಡಿ ನೋಡಿದಾಗ, ಮುಂದಿನ ಹಾದಿ ಸ್ಪಷ್ಟವಾಗಿ ಕಾಣಿಸುತ್ತದೆ. ಕಮಲಾ ಹ್ಯಾರಿಸ್ ಅವರ ವಲಸೆ ಸುಧಾರಣಾ ಕ್ರಮಗಳು ಕಾನೂನು ಬದ್ಧವಾದ, ಪರಸ್ಪರ ಸಹಕಾರದ ಪರಿಹಾರವನ್ನು ಒದಗಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಗೌರವ ನೀಡುತ್ತದೆ. ಅದರೊಡನೆ, ವಲಸೆಯ ಹಿಂದಿರುವ ಆರ್ಥಿಕ ಮತ್ತು ಸಾಮಾಜಿಕ ವಿಚಾರಗಳನ್ನೂ ಪರಿಗಣಿಸುತ್ತದೆ. ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ವಿಧಾನ ಸುಧಾರಣೆಗಳ ಹೆಸರಿನಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನು ದುರ್ಬಲಗೊಳಿಸುವಂತೆ ತೋರುತ್ತಿದೆ. ಇದು ಅಧ್ಯಕ್ಷರ ಕೈಗೆ ಮಿತಿಯಿಲ್ಲದ ಸರ್ವಾಧಿಕಾರ ದೊರೆತರೆ ಏನಾಗಬಹುದು ಎಂಬುದರ ಸೂಚನೆಯಂತೆ ತೋರುತ್ತಿದೆ.

ಭಾರತೀಯ ಸಂಸ್ಥೆಗಳು ಮತ್ತು ಪ್ರಜೆಗಳ ಭವಿಷ್ಯ

ಕಮಲಾ ಹ್ಯಾರಿಸ್ ಅವರ ವಿಧಾನ ಹೆಚ್ಚು ಸೌಮ್ಯವಾಗಿದ್ದು, ಪೌರತ್ವ ನೀಡುವ ಆಯ್ಕೆಗಳನ್ನೂ ಹೊಂದಿದೆ. ಆ ಮೂಲಕ ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಕುಟುಂಬಗಳಲ್ಲಿ ಸ್ಥಿರತೆ ಮತ್ತು ಭದ್ರತೆ ತರಬಲ್ಲದು. ಇದಕ್ಕೆ ವ್ಯತಿರಿಕ್ತವಾಗಿ, ಟ್ರಂಪ್ ಅವರ ಕಠಿಣವಾದ ಗಡಿ ನೀತಿಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಬಹುದು. ಆ ಮೂಲಕ ಭಾರತೀಯ ಮೂಲದ ಉದ್ಯಮಗಳು ಮತ್ತು ಜನರಿಗೆ ಸವಾಲುಗಳನ್ನು ಸೃಷ್ಟಿಸಬಹುದು.

ಕಮಲಾ ಹ್ಯಾರಿಸ್ ಅವರ ಕಾರ್ಯತಂತ್ರ ಭಾರತೀಯ ಕುಟುಂಬಗಳಿಗೆ ಕಾನೂನುಬದ್ಧ ನೆಲೆ ಮತ್ತು ಪೌರತ್ವ ಒದಗಿಸಬಲ್ಲದು. ಆದರೆ ಟ್ರಂಪ್ ಅವರ ಕ್ರಮಗಳು 'ದಾಖಲೆ ಹೊಂದಿಲ್ಲದ ಜನರಿಗೆ' ಇರುವ ಅವಕಾಶಗಳನ್ನು ಕಡಿಮೆಗೊಳಿಸಬಹುದು. ಆ ಮೂಲಕ ಕಾನೂನು ಮಾನ್ಯತೆಯ ಹೊರತಾಗಿಯೂ ಹಲವಾರು ವರ್ಷಗಳ ಕಾಲ ಅಮೆರಿಕಾದಲ್ಲಿ ನೆಲೆಸಿದ್ದ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರಬಹುದು.

ಆದರೆ ಕಮಲಾ ಹ್ಯಾರಿಸ್ ಅವರ ಸಹಾನುಭೂತಿಯ ಕ್ರಮಗಳು ಭಾರತೀಯ ಕುಟುಂಬಗಳಿಗೆ ವಲಸೆ ಪ್ರಕ್ರಿಯೆಯನ್ನು ಸವಾಲುಗಳಿಂದ ಮುಕ್ತವಾಗಿಸಿ, ಸಾಕಷ್ಟು ಸರಳವಾಗಿಸಲಿವೆ. ಆದರೆ ಟ್ರಂಪ್ ಅವರ ಕಟ್ಟುನಿಟ್ಟಿನ ಕ್ರಮಗಳು ಮತ್ತು ಹಿಂದಿನ ಅವಧಿಯ ಕಾನೂನುಗಳು ಹೆಚ್ಚಿನ ವಿಚಾರಣೆಗಳಿಗೆ ಹಾದಿ ಮಾಡಿ, ಪೌರತ್ವವನ್ನು ಎದುರು ನೋಡುತ್ತಿರುವ ಭಾರತೀಯರಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡಬಹುದು.

ಕಮಲಾ ಹ್ಯಾರಿಸ್ ಅವರು ಕಾನೂನುಬದ್ಧ ವಲಸೆಯನ್ನು ಕ್ರಮಬದ್ಧಗೊಳಿಸಿ, ಉದ್ಯೋಗ ವೀಸಾಗಳನ್ನು ಒದಗಿಸುವ ಕ್ರಮ ಕೈಗೊಳ್ಳಬಹುದು. ಇದು ಕೌಶಲಭರಿತ ಭಾರತೀಯ ಉದ್ಯೋಗಿಗಳನ್ನು ಅಮೆರಿಕಾಗೆ ಕರೆತರಲು ಎಚ್-1ಬಿ ವೀಸಾ ಮೇಲೆ ಅವಲಂಬನೆ ಹೊಂದಿರುವ ಭಾರತೀಯ ಐಟಿ ಸಂಸ್ಥೆಗಳಿಗೆ ಪ್ರಯೋಜನವಾದೀತು. ಆದರೆ ಟ್ರಂಪ್ ಆಡಳಿತದಲ್ಲಿ ವೀಸಾ ನಿರಾಕರಣೆಗಳು ಹೆಚ್ಚಾಗಿ, ಕುಟುಂಬ ಆಧಾರಿತ ವಲಸೆಯನ್ನು ನಿಯಂತ್ರಿಸಿ, ಭಾರತೀಯ ಉದ್ಯೋಗಿಗಳು ಮತ್ತು ಉದ್ಯಮಗಳ ಮೇಲೆ ಪರಿಣಾಮ ಬೀರಬಹುದು.

ಕಮಲಾ ಹ್ಯಾರಿಸ್ ಅವರ ವಿಧಾನ ನೇರವಾಗಿ ಗಡೀಪಾರು ಮಾಡುವ ಬದಲು ಕಾನೂನು ಕ್ರಮಗಳನ್ನು ಕೈಗೊಳ್ಳುವುದರಿಂದ ಅಮೆರಿಕಾದಲ್ಲಿನ ಭಾರತೀಯ ನಿವಾಸಿಗಳಿಗೆ ಕೊಂಚ ಸುರಕ್ಷತೆಯ ಭಾವ ನೀಡಬಲ್ಲದು. ಆದರೆ ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಅವರ ಸಾಮೂಹಿಕ ಗಡೀಪಾರು ಕ್ರಮ ಭಾರತೀಯ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಲಿದೆ.

ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು, ಫಲಿತಾಂಶ ಹೊರಬಂದಾಗ ಅಮೆರಿಕಾದ ವಲಸೆ ನೀತಿಗಳು ಯಾವ ದಿಕ್ಕಿನತ್ತ ಸಾಗಲಿವೆ ಎಂಬುದು ನಮಗೆ ಸ್ಪಷ್ಟವಾಗಲಿದೆ. ಆದರೆ, ಚುನಾವಣಾ ಫಲಿತಾಂಶದ ಆಧಾರದಲ್ಲಿ, ಚುನಾವಣಾ ಪ್ರಕ್ರಿಯೆ ಮತ್ತು ಮತದಾನದ ಅಂಕಿಅಂಶಗಳ ನಿಖರತೆಯ ಕುರಿತು ಕಾನೂನು ಸವಾಲುಗಳೂ ತಲೆದೋರಬಲ್ಲದು. ಆದರೆ ಅದೆಲ್ಲಕ್ಕೂ ನಾವು ಫಲಿತಾಂಶ ಘೋಷಣೆಯ ತನಕ ಕಾದುನೋಡಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+