Iceland : 2025ರವರೆಗೆ ಸೊಳ್ಳೆಯೇ ಇಲ್ಲದ ದೇಶದಲ್ಲಿ ಸೊಳ್ಳೆ ಪತ್ತೆ! ಏನಿದರರ್ಥ? ನಡೆದಿದ್ದೇನು?
ಅದು ಹಿಮ ತುಂಬಿದ ಗುಡ್ಡ ಬೆಟ್ಟ ಕಣಿವೆಗಳ ನಾಡು. ಸುತ್ತುವರಿದ ಸಮುದ್ರ. ಪ್ರವಾಸಿಗರಿಗೆ ಐಸ್ಲ್ಯಾಂಡ್ ಎಂದರೆ ಹಿಮಪರ್ವತಗಳು, ನೀಲಿ ಬಣ್ಣದ ಕೊಳಗಳು, ಕಪ್ಪು ಮರಳಿನ ಕಡಲತೀರಗಳು ಮತ್ತು ಅದ್ಭುತ ಪ್ರಕೃತಿ ಸೌಂದರ್ಯ ನೆನಪಾಗುತ್ತದೆ. ಆದರೆ ಐಸ್ಲ್ಯಾಂಡ್ಗೆ ಮತ್ತೊಂದು ವಿಶೇಷತೆಯೂ ಇತ್ತು. ಜಗತ್ತಿನ ಕೆಲವೇ ಸೊಳ್ಳೆಮುಕ್ತ ಪ್ರದೇಶಗಳಲ್ಲಿ ಒಂದಾಗಿದ್ದ ಈ ದೇಶದಲ್ಲಿ ಪ್ರವಾಸಿಗರು ಸೊಳ್ಳೆಗಳ ಕಾಟವಿಲ್ಲದೆ ಪ್ರಕೃತಿಯನ್ನು ಆನಂದಿಸಬಹುದಾಗಿತ್ತು.
ಆದರೆ 2025ರ ಅಕ್ಟೋಬರ್ನಲ್ಲಿ ಈ ಹೆಗ್ಗಳಿಕೆ ಮಟಾಶ್ ಆಯ್ತು. ಐಸ್ಲ್ಯಾಂಡ್ನ ಗ್ರಾಮೀಣ ಪ್ರದೇಶವೊಂದರಲ್ಲಿ ಮೂರು ಸೊಳ್ಳೆಗಳು ಪತ್ತೆಯಾದವು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅದು ಸೊಳ್ಳೆಗಳ ಅಧಿಕೃತ ಪತ್ತೆ ಎನಿಸಿಕೊಂಡಿತು. ಅದು ಆದದ್ದು ಹೇಗೆ?

ಒಂದಲ್ಲ, ಮೂರು ಸೊಳ್ಳೆಗಳು!
2025ರ ಅಕ್ಟೋಬರ್ 16ರಂದು ಕೀಝ್ ಎಂಬ ಗ್ರಾಮೀಣ ಪ್ರದೇಶದಲ್ಲಿ ಕೀಟಗಳ ಬಗ್ಗೆ ಆಸಕ್ತಿ ಹೊಂದಿರುವ ಬೈರುನ್ ಹ್ಯಾಲ್ಟ್ಸನ್ (Björn Hjaltason) ತಮ್ಮ ಮನೆಯ ಹಿತ್ತಲಿನಲ್ಲಿ ಕೀಟಗಳನ್ನು ಆಕರ್ಷಿಸಲು ಬಳಸಿದ್ದ ಬಲೆಯನ್ನು ಪರಿಶೀಲಿಸುತ್ತಿದ್ದರು. ಆಗ, ಕೆಂಪು ವೈನ್ನಲ್ಲಿ ನೆನೆಸಿದ್ದ ಹಗ್ಗದ ಮೇಲೆ ವಿಚಿತ್ರವಾಗಿ ಕಾಣುತ್ತಿದ್ದ ಒಂದು ಸಣ್ಣ ಕೀಟವನ್ನು ಗಮನಿಸಿದರು. ಮೊದಲಿಗೆ ಅದು ಸಾಮಾನ್ಯ ನೊಣ ಇರಬಹುದು ಎಂದುಕೊಂಡರೂ, ಅದು ಸೊಳ್ಳೆಯಾಗಿರಬಹುದು ಎಂಬ ಅನುಮಾನ ಮೂಡಿತು.
ಹೀಗಾಗಿ ಅದನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದರು. ನಂತರ ಇದೇ ರೀತಿಯ ಮತ್ತೆರಡು ಸೊಳ್ಳೆಗಳು ಪತ್ತೆಯಾದವು. ಒಟ್ಟು ಮೂರು ಕೀಟಗಳನ್ನು ಐಸ್ಲ್ಯಾಂಡ್ನ ನ್ಯಾಚುರಲ್ ಸೈನ್ಸ್ ಇನ್ಸ್ಟಿಟ್ಯೂಟ್ಗೆ ಕಳುಹಿಸಲಾಯಿತು.
ಅಲ್ಲಿ ಕೀಟ ತಜ್ಞ ಮ್ಯಾಥಿಯಾಸ್ ಆಲ್ಫ್ರೆಸನ್ ಅವುಗಳನ್ನು ಪರಿಶೀಲಿಸಿ ಕುಲಿಸೇಟಾ ಆನ್ಯುಲಾಟಾ (Culiseta annulata) ಎಂಬ ಸೊಳ್ಳೆ ಜಾತಿಗೆ ಸೇರಿದವು ಎಂದು ಗುರುತಿಸಿದರು. ಇದು ಐಸ್ಲ್ಯಾಂಡ್ನಲ್ಲಿ ಪತ್ತೆಯಾದ ಮೊದಲ ಸೊಳ್ಳೆ ಎನಿಸಿಕೊಂಡಿತು.
ಇಲ್ಲಿ ಸೊಳ್ಳೆ ವಿಶೇಷ ಏಕೆ?
ಪತ್ತೆಯಾದ ಕುಲಿಸೇಟಾ ಸೊಳ್ಳೆ ಸಾಮಾನ್ಯವಾಗಿ ಉತ್ತರ ಯುರೋಪ್ನಲ್ಲಿ ಕಂಡುಬರುವ, ಚಳಿಯ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಸೊಳ್ಳೆ ಜಾತಿ. ಈ ಸೊಳ್ಳೆಗಳು ಅತ್ಯಂತ ಕಡಿಮೆ ತಾಪಮಾನದಲ್ಲೂ ಬದುಕುವ ಸಾಮರ್ಥ್ಯ ಹೊಂದಿವೆ. ಚಳಿಗಾಲದಲ್ಲಿ ನೆಲಮಾಳಿಗೆ, ಕೊಟ್ಟಿಗೆಗಳು ಮತ್ತು ಇತರ ಕಟ್ಟಡಗಳಂತಹ ಆಶ್ರಯ ಪ್ರದೇಶಗಳಲ್ಲಿ ಅಡಗಿ ಉಳಿಯುವ ಸಾಮರ್ಥ್ಯ ಅವುಗಳಿಗಿದೆ. ಹೀಗಾಗಿ ಐಸ್ಲ್ಯಾಂಡ್ನಂತಹ ತಂಪಾದ ದೇಶದಲ್ಲೂ ಇವು ಬದುಕುವ ಸಾಧ್ಯತೆ ಇದೆ.
ಒಂದು ಕುತೂಹಲ ಎಂದರೆ, ಗ್ರೀನ್ಲ್ಯಾಂಡ್ನಲ್ಲಿ ಅಷ್ಟೊಂದು ನೀರಿನ ಪ್ರದೇಶಗಳಿದ್ದರೂ ಸೊಳ್ಳೆ ಏಕೆ ಇರಲಿಲ್ಲ? ದೇಶದಾದ್ಯಂತ ಕೆರೆಗಳು, ಜೌಗು ಪ್ರದೇಶಗಳು, ನದಿಗಳು, ಹಿಮನದಿಗಳ ನೀರು ಮತ್ತು ಸಣ್ಣ ಜಲಮೂಲಗಳು ಸಾಕಷ್ಟಿವೆ. ಹಾಗಿದ್ದರೂ ಇಷ್ಟು ವರ್ಷಗಳ ಕಾಲ ಸೊಳ್ಳೆಗಳು ಅಲ್ಲಿ ನೆಲೆಸಿರಲಿಲ್ಲ.
ಇದಕ್ಕೆ ಐಸ್ಲ್ಯಾಂಡ್ನ ವಿಶಿಷ್ಟ ಹವಾಮಾನವೇ ಒಂದು ಪ್ರಮುಖ ಕಾರಣವಾಗಿರಬಹುದು. ತಾಪಮಾನದಲ್ಲಿನ ತೀವ್ರ ಏರಿಳಿತಗಳು ಸೊಳ್ಳೆಗಳ ಜೀವನಚಕ್ರಕ್ಕೆ ಅನುಕೂಲಕರವಾಗಿರಲಿಲ್ಲ ಎಂಬ ಅಭಿಪ್ರಾಯವಿದೆ.
ಆದರೆ ಈಗ ಮೂರು ಸೊಳ್ಳೆಗಳು ಪತ್ತೆಯಾದ್ದರಿಂದ ವಿಜ್ಞಾನಿಗಳಲ್ಲಿ, ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆ ಅಂದರೆ, ದೇಶದ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಿವೆಯೇ ಎಂಬುದು. ಗ್ರೀನ್ಲ್ಯಾಂಡ್ ಬಿಸಿಯಾಗುತ್ತಿದೆಯೇ? ಹಿಮ ಕಡಿಮೆಯಾಗುತ್ತಿದೆಯೇ? ಐಸ್ಲ್ಯಾಂಡ್ ಮುಂದೆ ಸೊಳ್ಳೆಗಳ ದೇಶವಾಗುತ್ತದೆಯೇ?
ಅಷ್ಟು ಬೇಗ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮೂರು ಸೊಳ್ಳೆಗಳು ಪತ್ತೆಯಾಗಿರುವುದರಿಂದ ಐಸ್ಲ್ಯಾಂಡ್ನಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ಸೊಳ್ಳೆ ಸಂತತಿ ನೆಲೆಸಿದೆ ಎಂದು ಅರ್ಥವಲ್ಲ. ನ್ಯಾಚುರಲ್ ಸೈನ್ಸ್ ಇನ್ಸ್ಟಿಟ್ಯೂಟ್ ಕೂಡ ದೇಶದಲ್ಲಿ ಶಾಶ್ವತ ಸೊಳ್ಳೆ ಜನಸಂಖ್ಯೆ ಸ್ಥಾಪನೆಯಾಗಿದೆ ಎಂದು ಇನ್ನೂ ದೃಢಪಡಿಸಿಲ್ಲ.
ಹೀಗಾಗಿ ಪ್ರವಾಸಿಗರು ಐಸ್ಲ್ಯಾಂಡ್ಗೆ ಹೋದ ಕೂಡಲೇ ಎಲ್ಲೆಡೆ ಸೊಳ್ಳೆಗಳ ಹಿಂಡು ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಆದರೆ ಸೊಳ್ಳೆಗಳು ದೇಶಕ್ಕೆ ಪ್ರವೇಶಿಸಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸಿವೆಯೇ ಎಂಬುದನ್ನು ವಿಜ್ಞಾನಿಗಳು ಗಮನಿಸಲು ಶುರುಮಾಡಿದ್ದಾರೆ.
ಹವಾಮಾನ ಬದಲಾವಣೆಯ ಜೊತೆ ಸಂಬಂಧ
ಈ ಘಟನೆ, ಅದು ನಡೆದಿರುವ ಸಮಯ ಮತ್ತೊಂದು ಕಾರಣಕ್ಕಾಗಿ ಗಮನಾರ್ಹವಾಗಿದೆ. ಐಸ್ಲ್ಯಾಂಡ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯಾಗುತ್ತಿರುವುದು ದಾಖಲಾಗಿದೆ. 2025ನೇ ವರ್ಷ ಐಸ್ಲ್ಯಾಂಡ್ನಲ್ಲಿ ಹವಾಮಾನ ದಾಖಲೆಗಳು ಆರಂಭವಾದ ನಂತರದ ಅತ್ಯಂತ ಬೆಚ್ಚಗಿನ ವರ್ಷವಾಗಿತ್ತು. ದೇಶದ ಸರಾಸರಿ ತಾಪಮಾನ 5.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 1991ರಿಂದ 2020ರವರೆಗಿನ ಸರಾಸರಿಗಿಂತ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು.
ಐತಿಹಾಸಿಕ ದಾಖಲೆಗಳಲ್ಲಿರುವ ಐದು ಅತ್ಯಂತ ಬೆಚ್ಚಗಿನ ವರ್ಷಗಳಲ್ಲಿ ನಾಲ್ಕು ವರ್ಷಗಳು 21ನೇ ಶತಮಾನದಲ್ಲಿ ದಾಖಲಾಗಿವೆ. 2025ರ ವಸಂತ ಋತುವೂ ದೇಶದ ಇತಿಹಾಸದಲ್ಲೇ ಅತ್ಯಂತ ಬೆಚ್ಚಗಿನ ವಸಂತವಾಗಿತ್ತು. ಮೇ ತಿಂಗಳು ದಾಖಲೆಗಳಲ್ಲೇ ಅತ್ಯಂತ ಬೆಚ್ಚಗಿನ ಮೇ ತಿಂಗಳಾಗಿತ್ತು. ಜುಲೈ ತಿಂಗಳು 1933ರ ಜುಲೈ ತಿಂಗಳಿನೊಂದಿಗೆ ಅತ್ಯಂತ ಬೆಚ್ಚಗಿನ ಜುಲೈ ಎಂಬ ದಾಖಲೆಯನ್ನು ಹಂಚಿಕೊಂಡಿತು. ಆಗಸ್ಟ್ 16ರಂದು ಏಗಿಲ್ಸ್ಟಾಟಿರ್ (Egilsstaðir) ವಿಮಾನ ನಿಲ್ದಾಣದಲ್ಲಿ 29.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಮತ್ತೊಂದು ದಾಖಲೆ.
1980ರಿಂದ ಐಸ್ಲ್ಯಾಂಡ್ನಲ್ಲಿ ಗಮನಾರ್ಹ ತಾಪಮಾನ ಏರಿಕೆ ಕಂಡುಬಂದಿದೆ. ಹವಾಮಾನ ಮೌಲ್ಯಮಾಪನದಲ್ಲಿ ಪ್ರತಿ ದಶಕಕ್ಕೆ ಸುಮಾರು 0.47 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಆದರೆ ಇದಕ್ಕೂ ಐಸ್ಲ್ಯಾಂಡ್ನಲ್ಲಿ ಸೊಳ್ಳೆಗಳು ಪತ್ತೆಯಾಗಿರುವುದಕ್ಕೂ ಸಂಬಂಧವಿದೆ ಎಂದು ವಿಜ್ಞಾನಿಗಳು ಇನ್ನೂ ಸಾಬೀತುಪಡಿಸಿಲ್ಲ.
ಹಾಗಂತ ಪ್ರವಾಸಿಗರು ಭಯಪಡುವ ಅಗತ್ಯವಿಲ್ಲ. ಐಸ್ಲ್ಯಾಂಡ್ನಲ್ಲಿ ಪತ್ತೆಯಾಗಿರುವ Culiseta annulata ಸೊಳ್ಳೆ ಮನುಷ್ಯರಿಗೆ ಡೆಂಗ್ಯೂ, ಮಲೇರಿಯಾ ಅಥವಾ ಝಿಕಾ ರೀತಿಯ ಅಪಾಯಕಾರಿ ಕಾಯಿಲೆಗಳನ್ನು ಹರಡುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ. ಈ ಸೊಳ್ಳೆ ಕಚ್ಚಲೂಬಹುದು. ಆದರೆ ಇದು ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ, ಅಪಾಯಕಾರಿ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿರುವ ಕೆಲವು ಸೊಳ್ಳೆ ಜಾತಿಗಳಿಗಿಂತ ಭಿನ್ನ.


Click it and Unblock the Notifications
