Maldives: ಮಾಲ್ಡೀವ್ಸ್ ನೆಲದಲ್ಲಿ ಭಾರತಕ್ಕೆ ಮಹಾ ಹಿನ್ನಡೆ, ಯಾರಿಗೆ ನಷ್ಟ? ಯಾರಿಗೆ ಲಾಭ?
ಭಾರತ ಜಾಗತಿಕವಾಗಿ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದು, ಅಮೆರಿಕ ಹಾಗೂ ಯುರೋಪ್ ಭಾಗದ ಶ್ರೀಮಂತ ದೇಶಗಳೇ ಭಾರತದ ಎದುರು ತಲೆಬಾಗಿವೆ. ಆದ್ರೆ ಅದೊಂದು ಪುಟಾಣಿ ದೇಶ ಮಾತ್ರ ಭಾರತದ ವಿರುದ್ಧ ಗುಡುಗುತ್ತಿದೆ. ಮಾಲ್ಡೀವ್ಸ್ (Maldives) ಹೀಗೆ ದಿಢೀರ್ ಭಾರತದ ವಿರುದ್ಧ ತಿರುಗಿಬೀಳಲು ಕಾರಣವೇನು? ಹಾಗಾದರೆ ಇದರಿಂದ ಯಾರಿಗೆ ನಷ್ಟ? ಯಾರು ಇದರಲ್ಲಿ ಲಾಭ ಮಾಡಿಕೊಳ್ಳುತ್ತಾರೆ?
ಮಾಲ್ಡೀವ್ಸ್ ನೂತನ ಅಧ್ಯಕ್ಷ & ಚೀನಾ ಪರ ಒಲವು ಹೊಂದಿರುವ ಮೊಹಮ್ಮದ್ ಮುಯಿಝು ಈಗ ಸಂಚಲನ ಸೃಷ್ಟಿ ಮಾಡಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ಹಿಡಿತ ಸಾಧಿಸಲು ರಣತಂತ್ರ ರೂಪಿಸಿದ ಸಂದರ್ಭದಲ್ಲಿ, ಮೊಹಮ್ಮದ್ ಮುಯಿಝು ಬೇರೆಯದ್ದೇ ಆಟ ಶುರು ಮಾಡಿದ್ದಾರೆ. ಮಾಲ್ಡೀವ್ಸ್ ನೆಲದಲ್ಲಿ ಇರುವ ಭಾರತದ ಸೇನೆಯನ್ನು ಅಲ್ಲಿಂದ ಹೊರೆಗೆ ಹಾಕಲು ಇದೀಗ ಸ್ಕೆಚ್ ಹಾಕಿದ್ದಾರೆ. ಹಾಗದರೆ ಇದರಿಂದ ಯಾರಿಗೆ ಲಾಭ? ಇದು ಯಾರಿಗೆ ನಷ್ಟ ಮಾಡಲಿದೆ? ಸಂಪೂರ್ಣ ವಿವರ ಇಲ್ಲಿದೆ.

ಭಾರತ ವಿರೋಧಿ ನಿಲುವು ಏಕೆ?
ಹವಳ ದ್ವೀಪ ಮಾಲ್ಡೀವ್ಸ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದರೆ ಆರ್ಥಿಕವಾಗಿ ಇದನ್ನ ನೋಡುವುದಾದರೆ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡ ಈ ಭಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಾತ್ಮಕ ಪ್ರದೇಶ. ಈ ಜಾಗದಲ್ಲಿ ಭಾರತ ಹಲವು ದಶಕದಿಂದ ಸಂಬಂಧ ವೃದ್ಧಿಸಿಕೊಂಡು ಬಂದಿದೆ. ಆದ್ರೆ ಇದೀಗ ಚೀನಾ ಪರ ಒಲವು ಇರುವ ಮುಯಿಝು ಆಯ್ಕೆ ಎಲ್ಲಾ ಬುಡಮೇಲು ಮಾಡುತ್ತಿದೆ. ಮಾಲ್ಡೀವ್ಸ್ ನೆಲದಿಂದ ಭಾರತೀಯ ಸೇನಾ ಪಡೆಗಳನ್ನು ವಾಪಸ್ ಕಳುಹಿಸುವ ಸಂಕಲ್ಪ ಮಾಡಿದ್ದಾರೆ ಹೊಸ ಅಧ್ಯಕ್ಷ ಮುಯಿಝು. ಇದೆಲ್ಲಾ ಭಾರತ ಹಾಗೂ ಭಾರತೀಯ ಸೇನೆಗೆ ನಷ್ಟ ಉಂಟು ಮಾಡುವುದಿಲ್ಲ, ಬದಲಾಗಿ ಇದರಿಂದ ಖುದ್ದು ಮಾಲ್ಡೀವ್ಸ್ ಸಂಕಷ್ಟ ಎದುರಿಸಲಿದೆ.
ಹಳ್ಳಕ್ಕೆ ಬಿತ್ತಾ ಮಾಲ್ಡೀವ್ಸ್ ಆಡಳಿತ?
ಮಾಲ್ಡೀವ್ಸ್ ವಿಚಾರದಲ್ಲಿ ಭಾರತ ಮತ್ತು ಚೀನಾ ಪೈಪೋಟಿ ಹೊಸದಲ್ಲ, ಆದರೂ ಈ ಬಾರಿ ಚುನಾವಣೆ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಈ ಹಿಂದಿನ ಸರ್ಕಾರ ಭಾರತದ ಪರವಾಗಿಯೇ ಇತ್ತು. ಹೀಗಾಗಿ ಭಾರತ ಕೂಡ ಮಾಲ್ಡೀವ್ಸ್ ಜೊತೆ ಉತ್ತಮ ಒಡನಾಟವನ್ನ ಹೊಂದುವ ಜೊತೆಗೆ, ರಕ್ಷಣಾ ಒಪ್ಪಂದಗಳನ್ನು ಕೂಡ ವಿಸ್ತರಣೆ ಮಾಡಿತ್ತು. ಆದ್ರೆ ಇದೀಗ ಬೇರೆಯದ್ದೇ ರಾಜಕೀಯ ಮೇಲಾಟ ಶುರುವಾಗಿದೆ. 5.21 ಲಕ್ಷ ಜನಸಂಖ್ಯೆ ಹೊಂದಿರುವ ಮಾಲ್ಡೀವ್ಸ್‌ಗೆ ಭಾರತ ಪ್ರಮುಖ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶವಾಗಿತ್ತು. ಹೀಗೆ ಎಲ್ಲವೂ ಸರಿಯಿದ್ದಾಗ ಮಾಲ್ಡೀವ್ಸ್ ಖುದ್ದಾಗಿ ಹಳ್ಳಕ್ಕೆ ಬಿದ್ದಂತಿದೆ.

ಮಾಲ್ಡೀವ್ಸ್‌ಗೆ ಭಾರತ ಸಾಕಷ್ಟು ವಸ್ತುಗಳನ್ನ ಸರಬರಾಜು ಮಾಡುತ್ತದೆ ಈ ಪೈಕಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನೂ ರಫ್ತು ಮಾಡುತ್ತದೆ. ಕಳೆದ ಸಾಲಿನಲ್ಲಿ ಎರಡೂ ದೇಶದ ನಡುವೆ 498 ಮಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ನಡೆದಿದ್ದು, ಈ ಪೈಕಿ ಬಹುತೇಕ ಮೊತ್ತವು ಶಸ್ತ್ರಾಸ್ತ್ರ ಖರೀದಿಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಒಡನಾಟ ಇದ್ದರೂ ಇದೀಗ ಖುದ್ದು ಮಾಲ್ಡೀವ್ಸ್ ನೂತನ ಅಧ್ಯಕ್ಷ & ಚೀನಾ ಪರ ಒಲವು ಹೊಂದಿರುವ ಮೊಹಮ್ಮದ್ ಮುಯಿಝು ತಪ್ಪು ದಾರಿ ತುಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೊಹಮ್ಮದ್ ಮುಯಿಝು ಹೇಳಿದ್ದು ಏನು?
ಅಂದಹಾಗೆ ಮಾಲ್ಡೀವ್ಸ್ ಅಧಿಕಾರ ಸಿಗುತ್ತಿದ್ದಂತೆ ಭಾರತದ ವಿರುದ್ಧ ಮುಯಿಝು ಗುಡುಗಿ, ಆಕ್ರೋಶ ಕೂಡ ಹೊರಹಾಕಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇರುವ ವಿದೇಶಿ ಮಿಲಿಟರಿ ಪಡೆಗಳನ್ನು ಕಾನೂನು ಪ್ರಕಾರ ಹಿಂದಕ್ಕೆ ಕಳುಹಿಸುತ್ತೇವೆ. ಖಚಿತವಾಗಿ ನಾವು ಅದನ್ನು ಮಾಡುತ್ತೇವೆಂದು ಗುಡುಗಿದ್ದಾರೆ. ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ ಬೆಂಬಲಿಗರ ರ‍್ಯಾಲಿಯ ವೇಳೆ ಈ ಮಾತು ಕೇಳಿಬಂದಿದೆ. ಹೀಗೆ ಭಾರತದ ಹೆಸರನ್ನು ನೇರವಾಗಿ ಉಲ್ಲೇಖ ಮಾಡದಿದ್ರೂ, ಹೊಸ ಬಾಂಬ್ ಸಿಡಿಸಿದ್ದಾರೆ ಮುಯಿಝು. ಯಾಕಂದ್ರೆ ಮಾಲ್ಡೀವ್ಸ್‌ನಲ್ಲಿ ಸೇನಾ ಪಡೆಯನ್ನ ಹೊಂದಿರುವ ಏಕೈಕ ವಿದೇಶ ಭಾರತವಾಗಿದೆ.
ಭಾರತ ವಿರೋಧಿ ನಿಲುವೇ ಬಂಡವಾಳ
ಹೌದು ತನ್ನ ವಿಶಾಲ ಕಡಲ ಪ್ರದೇಶದಲ್ಲಿ ಗಸ್ತು ನಡೆಸಲು ಮಾಲ್ಡೀವ್ಸ್ ಸೇನೆಗೆ ಉಡುಗೊರೆಯ ರೂಪದಲ್ಲಿ, ಭಾರತವು 4 ಬೇಹುಗಾರಿಕಾ ವಿಮಾನಗಳನ್ನ ನಿರ್ವಹಿಸಲು ಭದ್ರತಾ ಸಿಬ್ಬಂದಿಯ ಸಣ್ಣ ಘಟಕ ನಿಯೋಜಿಸಿದೆ. ಆದ್ರೆ ಇದೇ ವಿಚಾರ ಮುಂದಿಟ್ಟುಕೊಂಡು ಇದೇ ಮುಯಿಝು ಮತ್ತು ಪಟಾಲಂ 'ಇಂಡಿಯಾ-ಔಟ್' ಅಭಿಯಾನ ನಡೆಸಿದ್ದರು. ಇದೀಗ ಹೊಸ ತಿಕ್ಕಾಟಕ್ಕೆ ಈ ವಿಚಾರ ನಾಂದಿ ಹಾಡಿದೆ. ನೂತನ ಅಧ್ಯಕ್ಷ ಮುಯಿಝು ತಮ್ಮನ್ನು ಚೀನಾ ಪರ ಒಲವು ಹೊಂದಿರುವ ನಾಯಕ ಎನ್ನುವ ಮಾಧ್ಯಮ ವರದಿ ಅಲ್ಲಗಳೆದಿದ್ದು, ನಾನು ಮಾಲ್ಡೀವ್ಸ್ ಪರ. ನನ್ನ ಮೊದಲ ಆದ್ಯತೆಯು ಮಾಲ್ಡೀವ್ಸ್ ಮತ್ತು ಇಲ್ಲಿನ ಪರಿಸ್ಥಿತಿ ಎಂದಿದ್ದಾರೆ.
ಭ್ರಷ್ಟಾಚಾರ ಅಪರಾಧಿಗೆ ಬಿಡುಗಡೆ ಭಾಗ್ಯ
ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್, ಭಾರತದ ಜೊತೆಗೆ ಉತ್ತಮ ಸಂಬಂಧ ಸಾಧಿಸಿದ್ರು. ಅವರ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಚೀನಾದಿಂದ ಹೆಚ್ಚು ಸಾಲ ಪಡೆದ ಪರಿಣಾಮ ಮಾಲ್ಡೀವ್ಸ್ ನೆಲವನ್ನು ಬೀಜಿಂಗ್ ಹಿಡಿತಕ್ಕೆ ಸಿಲುಕಿಸಿದ್ದ ಆರೋಪ ಇತ್ತು. ಆದರೆ ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ಅಪರಾಧದಲ್ಲಿ 11 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಮಾಫುಶಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಯಮೀನ್ ಅವರನ್ನ ತಮ್ಮ ಗೆಲುವಿನ ತಕ್ಷಣ ರಿಲೀಸ್ ಮಾಡಿಸಿದ್ದಾರೆ ಮುಯಿಝು.
ಗುರು ಕಾಣಿಕೆ ನೀಡಿದ ಶಿಷ್ಯ
ಯಮೀನ್ ಅವರನ್ನು ಮಾಲೆಯಲ್ಲಿ ಈಗ ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಯಮೀನ್ ಅವ್ರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ಕಾರಣಕ್ಕೆ ಯಮೀನ್ ಬದಲು ಅವರ ಬೆಂಬಲಿಗ ಮುಯಿಝು ಸ್ಪರ್ಧೆ ಮಾಡಿದ್ದರು. ಇದೀಗ ಮುಯಿಝು ಗೆಲುವು ಸಾಧಿಸಿದ ತಕ್ಷಣ ತನ್ನ ಗುರುವಿನ ರಕ್ಷಣೆಗೆ ನಿಂತಿದ್ದಾರೆ. ಇಷ್ಟೇ ಅಲ್ಲದೆ ಭಾರತದ ವಿರುದ್ಧ ನಿಲುವು ತಳೆದು ಸಂಚಲನ ಸೃಷ್ಟಿಸಿದ್ದಾರೆ ಮುಯಿಝು.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಭಾರತದ ಜೊತೆಗಿನ ಸಂಬಂಧ ಹಾಳು ಮಾಡಿಕೊಂಡರೆ ಇದರಿಂದ ನಷ್ಟ ಮಾಲ್ಡೀವ್ಸ್‌ಗೆ ಹೊರತು ಭಾರತಕ್ಕೆ ಅಲ್ಲ. ಏಕೆಂದರೆ ಮಾಲ್ಡೀವ್ಸ್ ಮೇಲೆ ಯಾವಾಗ ಯಾರ ಕಣ್ಣು ಬೀಳುತ್ತೋ ಗೊತ್ತಿಲ್ಲ. ಇದರಿಂದ ರಕ್ಷಣೆ ಪಡೆಯಲು ಈಗಿರುವ ಏಕೈಕ ದಾರಿ ಭಾರತ. ಆದರೆ ಅದನ್ನೇ ಕಳೆದುಕೊಳ್ಳುವ ಮೂಲಕ ಹೊಸ ಸಂಕಷ್ಟದಲ್ಲಿ ಮುಳುಗುತ್ತಿದೆ ಮಾಲ್ಡೀವ್ಸ್. ಭಾರತ ಈಗ ಇದಕ್ಕೆ ಯಾವ ರೀತಿ ಪ್ರತಿತಂತ್ರ ರೂಪಿಸಲಿದೆ? ಚೀನಾ ಆಡುತ್ತಿರುವ ಆಟಕ್ಕೆ ಭಾರತದ ತಿರುಗೇಟು ಹೇಗಿರಲಿದೆ? ಅನ್ನೋದನ್ನ ಈಗ ಕಾದು ನೋಡಬೇಕಿದೆ.












Click it and Unblock the Notifications