1968ರಿಂದಲೂ ಚರಂಡಿ ನೀರನ್ನೇ ಕುಡಿಯುತ್ತಿದ್ದಾರೆ ಈ ದೇಶದ ಜನರು! ಜಗತ್ತಿಗೇ ಮಾದರಿಯಾಯ್ತು ವಿಂಡ್‌ಹೋಕ್
ನಮೀಬಿಯಾ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ರಾಜಧಾನಿ ವಿಂಡ್‌ಹೋಕ್ ನಗರದಲ್ಲಿ ವರ್ಷಪೂರ್ತಿ ಹರಿಯುವ ಯಾವುದೇ ನದಿಗಳಿಲ್ಲ ನೋಡಿ. ಏಕೆಂದರೆ ಈ ಭಾಗದಲ್ಲಿ ವರ್ಷಕ್ಕೆ ಕೇವಲ 300 ಮಿಲಿಮೀಟರ್‌ನಷ್ಟು ಮಾತ್ರ ಮಳೆಯಾಗುತ್ತದೆ. ಇದರಲ್ಲಿ ಶೇ. 83ರಷ್ಟು ನೀರು ಆವಿಯಾದರೆ, ಕೇವಲ ಶೇ. 1ರಷ್ಟು ನೀರು ಮಾತ್ರ ಭೂಮಿಯೊಳಗೆ ಇಂಗಿ ಹೋಗುತ್ತದೆ.
ಇಂತಹ ಭೀಕರ ಜಲಕ್ಷಾಮದ ನಡುವೆ ಜನರು ಬದುಕುಳಿಯಲು ಈ ನಗರ ಒಂದು ಕ್ರಾಂತಿಕಾರಿ ಹೆಜ್ಜೆಯನ್ನ ಇಟ್ಟಿದೆ. ಹೌದು, ವಿಂಡ್‌ಹೋಕ್ ನಗರದ ಜನರು 1968ರಿಂದಲೂ ತಮ್ಮದೇ ನಗರದ ಚರಂಡಿ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?..

ಹೌದು ನೀವು ನಂಬಲೇಬೇಕು. ಮರುಭೂಮಿಯಂತಹ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚದಾಗ ತ್ಯಾಜ್ಯನೀರಿನ ಮರುಬಳಕೆಯು ಅನಿವಾರ್ಯವಾಗುತ್ತದೆ. ಹಲವು ವರ್ಷಗಳ ಸತತ ಪ್ರಯೋಗಗಳ ನಂತರ, ಅಕ್ಟೋಬರ್ 1968ರಲ್ಲಿ ವಿಂಡ್‌ಹೋಕ್‌ನಲ್ಲಿ ಗೋರಿಯಾಂಗಾಬ್ ತ್ಯಾಜ್ಯನೀರು ಮರುಬಳಕೆ ಘಟಕವನ್ನು ಆರಂಭಿಸಲಾಯಿತು. ಇದು ನಗರದ ಚರಂಡಿ ನೀರನ್ನ ನೇರವಾಗಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಮತ್ತೆ ಪೂರೈಕೆ ಮಾಡಿದ ವಿಶ್ವದ ಮೊಟ್ಟಮೊದಲ ಘಟಕವಾಗಿದೆ.
ಪ್ರಸ್ತುತ ಹೊಸ ಘಟಕವನ್ನ 2002ರಲ್ಲಿ ನಿರ್ಮಿಸಲಾಗಿದ್ದು, ಇದು ಪ್ರತಿದಿನ ಸುಮಾರು 21,000 ಘನ ಮೀಟರ್ ನೀರನ್ನು ಶುದ್ಧೀಕರಿಸಿ ಸುಮಾರು 3.5 ಲಕ್ಷ ಜನರಿಗೆ ಪೂರೈಸುತ್ತಿದೆ. ಚರಂಡಿಯಿಂದ ನಲ್ಲಿಗೆ ಈ ನೀರು ತಲುಪಲು ಸುಮಾರು ಒಂದು ದಿನದ ಪ್ರಕ್ರಿಯೆ ಬೇಕಾಗುತ್ತದಂತೆ.
10 ಹಂತಗಳಲ್ಲಿ ನೀರು ಶುದ್ಧೀಕರಣ ಪ್ರಕ್ರಿಯೆ
ಚರಂಡಿ ನೀರನ್ನ ಕುಡಿಯಲು ಯೋಗ್ಯವಾಗಿಸಲು ಈ ಘಟಕದಲ್ಲಿ 10 ಹಂತಗಳ ಕಠಿಣ ಶುದ್ಧೀಕರಣ ಪ್ರಕ್ರಿಯೆಯನ್ನ ಅಳವಡಿಸಲಾಗಿದೆ. ಓಝೋನ್ ಟ್ರೀಟ್‌ಮೆಂಟ್, ಬ್ಯಾಕ್ಟೀರಿಯಾಗಳನ್ನ ಹೊಂದಿರುವ ಕಾರ್ಬನ್ ಫಿಲ್ಟರ್‌ಗಳು, ಸೂಕ್ಷ್ಮ ಪೊರೆಗಳ ಮೂಲಕ ಶೋಧಿಸುವಿಕೆ ಮತ್ತು ಅಂತಿಮವಾಗಿ ಕ್ಲೋರಿನ್ ಬಳಸಿ ನೀರನ್ನು ಶುದ್ಧೀಕರಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿತುವ ಘಟಕದ ಪ್ರೊಸೆಸ್ ಎಂಜಿನಿಯರ್ ಜಸ್ಟಿನಾ ಹೈಹಂಬೊ, "ಇಲ್ಲಿ ಪ್ರತಿಯೊಂದನ್ನೂ ಜೈವಿಕವಾಗಿ ಮಾಡಲಾಗುತ್ತದೆ. ಮಾನವನ ತ್ಯಾಜ್ಯವನ್ನ ಬೇರೆ ಮಾಡಲು ಬ್ಯಾಕ್ಟೀರಿಯಾಗಳು ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ನದಿಗಳು ಮಾಡುವ ಶುದ್ಧೀಕರಣದ ಕೆಲಸವನ್ನೇ ಈ ಘಟಕ ಮಾಡುತ್ತದೆ. ನದಿಗಳು ಹೆಚ್ಚು ಸಮಯ ತಗೆದುಕೊಳ್ಳುತ್ತವೆ. ಆದ್ರೆ ಇವು ಕೇವಲ ಕೆಲವೇ ಗಂಟೆಗಳಲ್ಲಿ, ಹೆಚ್ಚು ವೇಗವಾಗಿ ಮಾಡುತ್ತದೆ" ಎನ್ನುತ್ತಾರೆ.
ಜನರ ಬದಲಾದ ದೃಷ್ಟಿಕೋನ
ಚರಂಡಿ ನೀರು ಎಂಬ ಪದವನ್ನು ಕೇಳಿದ ತಕ್ಷಣ ಜನರಲ್ಲಿ ಸಹಜವಾಗಿ ಅಸಹ್ಯ ಹಾಗೂ ಭಯ ಮೂಡುತ್ತದೆ. ಆದರೆ, ಈ ಆತಂಕವಿರುವುದು ನೀರಿನ ಬಗ್ಗೆ ಅಲ್ಲ, ಬದಲಾಗಿ ಅದು ಎಲ್ಲಿಂದ ಬಂದಿದೆ ಎಂಬ ನೀರಿನ ಮೂಲದ ಬಗ್ಗೆ ಮಾತ್ರ ಎಂದು ತಜ್ಞರು ಹೇಳುತ್ತಾರೆ.
ಸಂಶೋಧನೆಗಳ ಪ್ರಕಾರ, ಸಂಸ್ಕರಿಸಿದ ತ್ಯಾಜ್ಯನೀರು ಎಂದು ಕರೆಯುವುದಕ್ಕಿಂತ ಮರುಬಳಕೆ ಮಾಡಿದ ನೀರು ಅಥವಾ ಶುದ್ಧೀಕರಿಸಿದ ನೀರು ಎಂದು ಕರೆದರೆ ಜನರು ಅದನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ವಿಂಡ್‌ಹೋಕ್ ನಗರವು ದಶಕಗಳ ಹಿಂದೆಯೇ ಜನರ ಈ ಮಾನಸಿಕ ತಡೆಗೋಡೆಯನ್ನ ಒಡೆದು, ತ್ಯಾಜ್ಯನೀರನ್ನ ಶುದ್ಧೀಕರಿಸಿ ಕುಡಿಯುವ ಮೂಲಕ ಇಡೀ ಜಗತ್ತಿಗೆ ಒಂದು ದೊಡ್ಡ ಸಂದೇಶವನ್ನು ಸಾರಿದೆ.
50 ವರ್ಷಗಳ ಸುರಕ್ಷತೆಯ ದಾಖಲೆ
ಚರಂಡಿ ನೀರು ಕುಡಿದರೆ ಮುಂದೆ ಏನೋ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ, ವಿಂಡ್‌ಹೋಕ್ ನಗರವು ಕಳೆದ 50 ವರ್ಷಗಳಿಂದಲೂ ಸತತವಾಗಿ ಆರೋಗ್ಯ ತಪಾಸಣೆ, ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾಗಳ ಕಣ್ಗಾವಲಿನೊಂದಿಗೆ ಈ ನೀರನ್ನ ಅತ್ಯಂತ ಸುರಕ್ಷಿತವಾಗಿ ಬಳಸುತ್ತಿದೆ. ಇಲ್ಲಿಯವರೆಗೆ ಈ ನೀರು ಕುಡಿದು ಯಾವುದೇ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ವರದಿಯಾಗಿಲ್ಲ ಎಂಬುದು ಇದರ ಹೆಗ್ಗಳಿಕೆ.
ಆರಂಭದಲ್ಲಿ ಈ ಪ್ರಯತ್ನವನ್ನ ಅನಿವಾರ್ಯತೆ ಹಾಗೂ ವಿಚಿತ್ರ ಎಂದು ಭಾವಿಸಿದ್ದ ಜಗತ್ತು, ಈಗ ವಿಂಡ್‌ಹೋಕ್ ಮಾದರಿಯನ್ನ ಒಪ್ಪಿಕೊಳ್ಳುತ್ತಿದೆ ಜೊತೆಗೆ ಒಂದಿಷ್ಟು ದೇಶಗಳು ಅಪ್ಪಿಕೊಳ್ಳುತ್ತಿದೆ. ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ಕೊಲೊರಾಡೋದಂತಹ ಪ್ರದೇಶಗಳೂ ಈಗ ತ್ಯಾಜ್ಯನೀರಿನ ಮರುಬಳಕೆಗೆ ನಿಯಮಗಳನ್ನು ರೂಪಿಸಿವೆ.
2025ರಲ್ಲಿ ಎಲ್ ಪಾಸೊ ಪ್ರತಿದಿನ 10 ದಶಲಕ್ಷ ಗ್ಯಾಲನ್ ಶುದ್ಧೀಕರಿಸಿದ ನೀರನ್ನ ನೇರವಾಗಿ ಕುಡಿಯುವ ನೀರಿನ ಪೂರೈಕೆಗೆ ಸೇರಿಸುವ ಘಟಕವನ್ನ ಆರಂಭಿಸಿದೆ. ವಿಂಡ್‌ಹೋಕ್‌ನ ಜಲ ಇಲಾಖೆಯ ಮುಖ್ಯಸ್ಥ ಪಿಯರೆ ವ್ಯಾನ್ ರೆನ್ಸ್‌ಬರ್ಗ್ ಈ ಘಟಕವನ್ನ "ಮಾನದಂಡ, ನವೀನ ಮತ್ತು ಸುಸ್ಥಿರ ಜಲ ನಿರ್ವಹಣಾ ಮಾದರಿ" ಎಂದು ಕರೆಯುತ್ತಾರೆ.
ಜಗತ್ತಿನಾದ್ಯಂತ ಎದುರಾಗುತ್ತಿರುವ ನೀರಿನ ಕೊರತೆಗೆ ಇದು ಭವಿಷ್ಯದಲ್ಲಿ ಬಹುದೊಡ್ಡ ಪರಿಹಾರವಾಗಲಿದೆ.


Click it and Unblock the Notifications
