ವಿಶ್ವಾದ್ಯಂತ ಕೊರೊನಾಗೆ 2 ಲಕ್ಷ ಸಾವು, ಟಾಪ್ 5 ದೇಶಗಳ ಪಟ್ಟಿ ಇಲ್ಲಿದೆ
ದೆಹಲಿ, ಏಪ್ರಿಲ್ 26: ಕೊರೊನಾ ವೈರಸ್ ದಾಳಿಗೆ ಇಡೀ ವಿಶ್ವವೇ ನಲುಗಿಹೋಗಿದೆ. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ಈ ಸೋಂಕು ಪತ್ತೆಯಾಗಿದ್ದು, ಪ್ರಮುಖ ದೇಶಗಳಲ್ಲಿ ಸಾವಿನ ಮೆರವಣಿಗೆ ಆಗಿದೆ. ಪ್ರಪಂಚದಾದ್ಯಂತ ಈವರೆಗೂ 29 ಲಕ್ಷ (2,921,439) ಜನರಿಗೆ ಸೋಂಕು ತಗುಲಿದ್ದು, 2 ಲಕ್ಷ (203,289) ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಈಗ ಜಾಗತಿಕ ಪಿಡುಗಾಗಿ ಕಾಡುತ್ತಿದೆ. ವೈರಸ್ ಸೃಷ್ಟಿಗೆ ಕಾರಣವಾದ ಚೀನಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಆದರೆ, ಇದರಿಂದ ಅಪಾಯಕ್ಕೆ ಸಿಲುಕಿದ ಅಮೆರಿಕ, ಸ್ಪೇನ್, ಇಟಲಿ, ಯುಕೆ, ಫ್ರಾನ್ಸ್, ಜರ್ಮನಿ ಅಂತಹ ದೇಶಗಳಲ್ಲಿ ಮಾರಣಹೋಮ ನಡೆದುಹೋಗಿದೆ.
ಅಮೆರಿದಲ್ಲಂತೂ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಸಾವು ಸಂಭವಿಸಿದೆ. ಇದು ಉಳಿದ ರಾಷ್ಟ್ರಗಳಿಗೆ ಭಯ ಹುಟ್ಟಿಸಿದೆ. ಉಳಿದ ದೇಶಗಳಿಗೆ ಹೋಲಿಸಿಕೊಂಡರೆ ಭಾರತದ ಪರಿಸ್ಥಿತಿ ಸ್ವಲ್ಪ ಸಮಾಧಾನ ತಂದರೂ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಬೇರೆ ರೀತಿ ಇರುತ್ತೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಅಂದ್ಹಾಗೆ, ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಸಾವು ಕಂಡ ಟಾಪ್ 5 ದೇಶಗಳು ಯಾವುದು? ಮುಂದೆ ಓದಿ...

ಅಮೆರಿಕದಲ್ಲಿ ನಿಲ್ಲುತ್ತಿಲ್ಲ ಪ್ರಾಣಹಾನಿ
ಕೊರೊನಾ ವೈರಸ್ ದಾಳಿಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸಂಪೂರ್ಣವಾಗಿ ನಲುಗಿ ಹೋಗಿದೆ. ಆರಂಭದಲ್ಲಿ ಈ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣ, ತನ್ನ ದೇಶದಲ್ಲಿ ಅತಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಯಿತು. ಯುಎಸ್‌ನಲ್ಲಿ ಈವರೆಗೂ 9.6 ಲಕ್ಷ (960,896) ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 54,265 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾಗೆ ಅತಿ ಹೆಚ್ಚು ಜನರ ಸಾವು ಕಂಡ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ.

ಇಟಲಿ ಸ್ಥಿತಿಯೂ ಗಂಭೀರ
ಚೀನಾ ಬಿಟ್ಟರೆ ಆರಂಭದಲ್ಲಿ ಕೊರೊನಾ ಹೊಡೆತಕ್ಕೆ ಹೆಚ್ಚು ತತ್ತರಿಸಿದ್ದು ಇಟಲಿ. ನೋಡು ನೋಡುತ್ತಿದ್ದಂತೆ ಚೀನಾವನ್ನು ಹಿಂದಿಕ್ಕಿದ ಇಟಲಿಯಲ್ಲಿ ನರಮೇಧ ನಡೆದು ಹೋಯಿತು. ದಿನ ಕಳೆದಂತೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂತಾದರೂ ಕೊರೊನಾ ಮುಕ್ತ ದೇಶವಂತೂ ಆಗಲಿಲ್ಲ. ಈವರೆಗೂ ಇಟಲಿಯಲ್ಲಿ 1.9 ಲಕ್ಷ (195,351) ಜನರಿಗೆ ಸೋಂಕು ತಗುಲಿದೆ. 26,384 ಜನರು ಕೊವಿಡ್‌ಗೆ ಬಲಿಯಾಗಿದ್ದಾರೆ.

ಕೊರೊನಾದಿಂದ ನಡುಗಿದ ಸ್ಪೇನ್
ಕೊರೊನಾ ಸೋಂಕಿಗೆ ಹೆಚ್ಚು ನಷ್ಟ ಅನುಭವಿಸಿರುವುದು ಯೂರೋಪ್ ರಾಷ್ಟ್ರಗಳು. ಇಟಲಿಯಂತೆ ಸ್ಪೇನ್ ದೇಶದಲ್ಲೂ ಕೊವಿಡ್ ಅಟ್ಟಹಾಸ ಮಾಡಿದೆ. ಅಮೆರಿಕ ಬಿಟ್ಟರೆ ಸ್ಪೇನ್ ದೇಶದಲ್ಲಿ ಹೆಚ್ಚು ಸೋಂಕಿತರು ವರದಿಯಾಗಿದ್ದಾರೆ. ಆದರೆ, ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಮೂರನೇ ಸ್ಥಾನದಲ್ಲಿದೆ. ಈವರೆಗೂ ಸ್ಪೇನ್‌ನಲ್ಲಿ 2.2 ಲಕ್ಷ (223,759) ಜನರಿಗೆ ಸೋಂಕು ತಗುಲಿದೆ. 22,902 ಜನರು ಸಾವನ್ನಪ್ಪಿದ್ದಾರೆ.

ಸ್ಪೇನ್ ಫಾಲೋ ಮಾಡುತ್ತಿರುವ ಫ್ರಾನ್ಸ್
ಇಟಲಿ, ಸ್ಪೇನ್ ದೇಶಗಳನ್ನು ಫಾಲೋ ಮಾಡುತ್ತಿರುವ ಫ್ರಾನ್ಸ್ ದೇಶದಲ್ಲೂ ಕೊರೊನಾ ರಣಕೇಕೆ ಹಾಕಿದೆ. ಈ ಮೂರು ದೇಶಗಳಿಗೆ ಹೋಲಿಸಿಕೊಂಡರೆ ಫ್ರಾನ್ಸ್ ನಲ್ಲಿ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆ. ಆದರೆ, ಸಾವಿನ ಸಂಖ್ಯೆಯಲ್ಲಿ ಅಷ್ಟು ದೊಡ್ಡ ಅಂತರವೇನು ಇಲ್ಲ. ಈವರೆಗೂ ಫ್ರಾನ್ಸ್ ನಲ್ಲಿ 1.6 ಲಕ್ಷ (161,488) ಜನರಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ. ಇರದಲ್ಲಿ 22,614 ಜನರು ಮೃತಪಟ್ಟಿದ್ದಾರೆ.

ಐದನೇ ದೇಶ ಯುಕೆ
ಯುನೈಟೆಡ್ ಕಿಂಗ್ಡಮ್‌ನಲ್ಲಿ ಕೊರೊನಾ ಮರಣಮೃದಂಗ ಬಾರಿಸಿದೆ. ಅತಿ ಹೆಚ್ಚು ಸಾವು ಕಂಡ ದೇಶಗಳ ಪೈಕಿ ಐದನೇ ಸ್ಥಾನದಲ್ಲಿರುವ ಯುಕೆನಲ್ಲಿ ಈವರೆಗೂ 20,319 ಮಂದಿ ಸಾವನ್ನಪ್ಪಿದ್ದಾರೆ. 1.4 ಲಕ್ಷ (148,377) ಜನರಿಗೆ ಸೋಂಕು ಕಾಣಿಸಿಕೊಂಡಿದೆ.












Click it and Unblock the Notifications