ಅನ್ನವೂ ಇಲ್ಲ.. ನೀರು ಇಲ್ಲ.. ಔಷಧಗಳು ಸಿಗುತ್ತಲೇ ಇಲ್ಲ..!
ಇಸ್ರೇಲ್ ಮತ್ತು ಹಮಾಸ್ ಜಗಳದಲ್ಲಿ ಛಿದ್ರ ಛಿದ್ರವಾಗಿ ಹೋಗಿರುವ ಗಾಜಾಪಟ್ಟಿ ಇದೀಗ 2ನೇ ಮಹಾಯುದ್ಧದ ನೆನಪು ತರಿಸುತ್ತಿದೆ. ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ, ಕಟ್ಟಗಳ ಕೆಳಗೆ ಸಿಲುಕಿ ನರಳುತ್ತಿರುವ ಜನರಿಗೆ ಅನ್ನ, ನೀರು ಸಹ ಸಿಗುತ್ತಿಲ್ಲ. ಕೈಯಲ್ಲಿ ಹಣ ಇದ್ದ ಸ್ಥಿತಿವಂತರು ಊರು ಬಿಟ್ಟು ಹೋಗಿದ್ರೆ ಬಡವರ ಬದುಕು ಬೀದಿಗೆ ಬಿದ್ದಿದೆ. ಈ ಹೊತ್ತಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದೆ.
ಹಮಾಸ್ ಉಗ್ರರು ಮಾಡಿದ ತಪ್ಪಿಗೆ ಇದೀಗ ಸಾಮಾನ್ಯ ಜನರ ಬದುಕು ಕಂಟಕಕ್ಕೆ ಸಿಲುಕಿ, ಅಂತ್ಯವಾಗುತ್ತಿದೆ. ಅದೆಷ್ಟೋ ಮಕ್ಕಳ ಜೀವ ಕೂಡ ಹೋಗಿದ್ದು ಸಾವಿರಾರು ಜನರಿಗೆ ಈಗ ಚಿಕಿತ್ಸೆ ಅವಶ್ಯಕತೆ ಇದೆ. ನೂರಾರು ಕಟ್ಟಡಗಳು ಇಸ್ರೇಲ್ ಸೇನೆಯ ವಾಯು ದಾಳಿಯಲ್ಲಿ ನೆಲಸಮ ಆಗಿದ್ದು, ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ವಿದ್ಯುತ್ ಕೂಡ ಇಲ್ಲ. ಪರಿಸ್ಥಿತಿ ಈ ರೀತಿ ಕೈಮೀರಿ ಹೋಗಿರುವ ಸಮಯದಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಅದೇನು ಅಂದ್ರೆ, ಗಾಜಾಪಟ್ಟಿ ಒಳಗೆ ಔಷಧಕ್ಕೂ ಈಗ ಹಾಹಾಕಾರ ಎದುರಾಗಿದೆ.

ಕೈಮೀರಿ ಹೋಗಿದೆ ಗಾಜಾ ಪರಿಸ್ಥಿತಿ
ಹೌದು, ಗಾಜಾ ಮೇಲೆ ಇಸ್ರೇಲ್ ಸೇನೆಯು ಭೂ ದಾಳಿ ನಡೆಸುವ ಭಯ ಆವರಿಸಿರುವ ಕಾರಣ ಜನರು ಊರು ಬಿಟ್ಟು ಹೋಗಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಜನರು ಗಾಜಾಪಟ್ಟಿ ಬಿಟ್ಟು ಹೋಗಿದ್ದಾರೆ. ತಾವು ಹುಟ್ಟಿ ಬೆಳದ ಊರು ಬಿಟ್ಟು, ಜೀವ ಉಳಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಗಾಜಾಪಟ್ಟಿ ಒಳಗೆ ನರಳುತ್ತಿರುವ ಜನರಿಗೂ ಔಷಧ ಕೊರತೆ ಎದುರಾಗಿದೆ. ಆಹಾರ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಗಾಜಾ ಜನ, ಕನಿಷ್ಠ ಚಿಕಿತ್ಸೆ ಸಿಗುತ್ತದೆ ಎಂಬ ಅನಿವಾರ್ಯತೆಯಿಂದ ಆಸ್ಪತ್ರೆಗಳಿಗೆ ಬಂದ್ರೆ ಅಲ್ಲಿ ಕೂಡ ಆಘಾತ ಎದುರಾಗಿದೆ.
ಇನ್ನು ಗಾಜಾ & ಈಜಿಪ್ಟ್ ನಡುವಿನ ರಫಾ ಗಡಿಯಲ್ಲಿ ಅಗತ್ಯ ವಸ್ತುಗಳನ್ನು ಹೊತ್ತು ತಂದಿರುವ ಟ್ರಕ್ಸ್ ಪಾರ್ಕ್ ಆಗಿವೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅವರು ಒಳಗೆ ಬರುವ ಯಾವ ಅವಕಾಶ ಕಾಣುತ್ತಿಲ್ಲ. ಗಾಜಾಪಟ್ಟಿಯ ಒಳಗೆ ಅಗತ್ಯ ವಸ್ತು ತೆಗೆದುಕೊಂಡು ಹೋಗೋದಕ್ಕೆ ಕಾಯುತ್ತಿವೆ ಈ ಟ್ರಕ್‌ಗಳು. ಆದರೂ ಕದನ ವಿರಾಮ ಘೋಷಿಸಲಿ ಎಂದು ಕಾಯುತ್ತಿದ್ದಾರೆ. ಗಾಜಾದಲ್ಲಿ 4 ಆಸ್ಪತ್ರೆಗಳು ಕೆಲಸ ನಿಲ್ಲಿಸಿದ್ದು 21 ಆಸ್ಪತ್ರೆಗಳಿಗೆ ಮುಚ್ಚುವಂತೆ ಇಸ್ರೇಲ್ ಆದೇಶ ನೀಡಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ನಡುವೆ ರೋಗಿಗಳು ಹಾಗೂ ಪುಟಾಣಿ ಮಕ್ಕಳ ನರಳಾಟ ಮುಂದುವರಿದಿದೆ.
ಈಗಲೂ ಸೈಲೆಂಟ್ ಆಗುತ್ತಿಲ್ಲ ಉಗ್ರರು
ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದು, ಉಗ್ರರು ಮಾಡಿದ ಕೃತ್ಯಕ್ಕೆ ಸಾಮಾನ್ಯ ಜನ ಸಮಸ್ಯೆ ಸುಳಿಗೆ ಸಿಲುಕಿದ್ದಾರೆ. ಇಷ್ಟಾದ್ರೂ ಉಗ್ರರು ಸೈಲೆಂಟ್ ಆಗುತ್ತಿಲ್ಲ. ಇದರಿಂದ ಇಸ್ರೇಲ್ ಸೇನೆ ಮತ್ತಷ್ಟು ಭೀಕರ ದಾಳಿ ನಡೆಸುತ್ತಿದೆ. ಈ ಮೂಲಕ ಒಬ್ಬರ ಮೇಲೆ ಮತ್ತೊಬ್ಬರು ಸೇಡಿನ ದಾಳಿ ನಡೆಸುತ್ತಾ, ಅಮಾಯಕರ ಜೀವ ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಭೀಕರ ಕಾಳಗಕ್ಕೆ 4000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 1,400 ಇಸ್ರೇಲ್ ನಾಗರಿಕರು & ಗಾಜಾಪಟ್ಟಿ ಭಾಗದಲ್ಲಿ 2,750 ಜನ ಯುದ್ಧದಲ್ಲಿ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿದೆ.

ಒಟ್ಟಾರೆ ಹೇಳುವುದಾದರೆ ಇಸ್ರೇಲ್ & ಹಮಾಸ್ ಉಗ್ರರ ಕದನ, ಜಗತ್ತಿನ ನಾಶಕ್ಕೆ ಏನೆಲ್ಲಾ ಬೇಕೋ ಅದನ್ನೆಲ್ಲ ಮಾಡುತ್ತಿದೆ. ಮತ್ತೊಂದು ಕಡೆ ರಷ್ಯಾ ಕೂಡ ಪ್ಯಾಲೆಸ್ತೀನ್ ಪರವಾಗಿ ಮಾತನಾಡುತ್ತಿದೆ. ಇದು ಪರಿಸ್ಥಿತಿಯನ್ನ ಇನ್ನಷ್ಟು ಕಗ್ಗಂಟಾಗಿಸಿದೆ. ಇನ್ನು ಇತ್ತ ಅಮೆರಿಕ ಇಸ್ರೇಲ್ ಪರ ನಿಂತರೆ, ಅತ್ತ ರಷ್ಯಾ ಪ್ಯಾಲೆಸ್ತೀನ್ ಪರ ಮಾತನಾಡುತ್ತಿದೆ. ಆದ್ರೆ ಸಂಧಾನ ನಡೆಸಲು ಯಾರೂ ಸಿದ್ಧವಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಿ, ಎಲ್ಲಿ ಯಾವಾಗ ಬಾಂಬ್ ಬೀಳುತ್ತೋ ಅಂತಾ ಸಾಮಾನ್ಯ ಜನರು ಮಾತ್ರ ನರಳುತ್ತಿದ್ದಾರೆ.












Click it and Unblock the Notifications