ಉಗ್ರರ ವಶದಲ್ಲಿದ್ದ ಸಂಸತ್ ಭವನ & ಸರ್ಕಾರಿ ಕಚೇರಿ ಸೇನೆ ವಶಕ್ಕೆ!
ಎಲ್ಲೆಲ್ಲೂ ಚೆಲ್ಲಾಡಿರುವ ರಕ್ತ, ಪುಟಾಣಿ ಕಂದಮ್ಮಗಳನ್ನ ಕಳೆದುಕೊಂಡು ಕಣ್ಣೀರು ಹಾಕಿ ತಮ್ಮ ನೋವು ತೋಡಿಕೊಳ್ಳುತ್ತಿರುವ ಅಮ್ಮಂದಿರುವ. ಹೌದು, ಈ ಹೃದಯ ಬಿರಿಯುವ ದೃಶ್ಯಗಳು ಕಂಡುಬರುವುದು ಗಾಜಾಪಟ್ಟಿ ಉತ್ತರ ಭಾಗದಲ್ಲಿ. ಇಸ್ರೇಲ್ & ಹಮಾಸ್ ಉಗ್ರರ ಪಡೆ ನಡುವೆ ನಡೆಯುತ್ತಿರುವ ಭೀಕರ ಕಾಳಗದ ಪರಿಣಾಮ ಇಂತಹ ಗತಿ ಬಂದುಬಿಟ್ಟಿದೆ. ಆದರೆ ಇದೇ ಸಮಯದಲ್ಲಿ ಉಗ್ರರ ವಶದಲ್ಲಿದ್ದ ಸಂಸತ್ ಭವನವು ಇಸ್ರೇಲ್ ಸೇನೆಯ ಕೈಗೆ ಸೇರಿದೆ.
ಹೌದು, ಇಸ್ರೇಲ್ ಮತ್ತು ಹಮಾಸ್ ಉಗ್ರರ ಜಗಳದಲ್ಲಿ ಹತ್ತಾರು ಸಾವಿರ ಜನ ಬಲಿಯಾಗಿದ್ದಾರೆ. ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಸೇರಿ ಇಸ್ರೇಲ್ ಕಡೆಯೂ 1,200 ಪ್ರಜೆಗಳು ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿದೆ. ಅದರಲ್ಲೂ ಗಾಜಾ ನಗರದಲ್ಲಿ ಮೃತಪಟ್ಟ 11,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನರ ಪೈಕಿ, ಸುಮಾರು ಅರ್ಧದಷ್ಟು ಮಕ್ಕಳೇ ಮೃತಪಟ್ಟಿದ್ದಾರೆ ಅನ್ನೊ ಆರೋಪ ಇದೆ. ಈ ಮಧ್ಯೆ ನೇರವಾಗಿ ಉತ್ತರ ಗಾಜಾಪಟ್ಟಿ ಒಳಗೆ ನುಗ್ಗಿರುವ ಇಸ್ರೇಲ್ ಸೇನೆ, ಉಗ್ರರ ಕೈಯಲ್ಲಿ ಇದ್ದ ಕಚೇರಿ ಹಾಗೂ ಸಂಸತ್ ಭವನವನ್ನು ತನ್ನ ವಶಕ್ಕೆ ಪಡೆದಿದೆ.

8 ಪ್ಯಾಲೆಸ್ತೀನ್ ನಾಗರಿಕರ ಸಾವು?
ಅಂದಹಾಗೆ ಇಸ್ರೇಲ್ ಮಿಲಿಟರಿ ಪಡೆ ಹಮಾಸ್ ಸಂಸತ್, ಸರ್ಕಾರಿ ಕಚೇರಿಗಳು, ಪೊಲೀಸ್ ಪ್ರಧಾನ ಕಚೇರಿ, ಶಸ್ತ್ರಾಸ್ತ್ರಗಳ ತಯಾರಿ ಹಾಗೂ ಅಭಿವೃದ್ಧಿ ಮಾಡುತ್ತಿದ್ದ ಎಂಜಿನಿಯರಿಂಗ್‌ನ ಘಟಕವನ್ನೂ ಕೂಡ ತನ್ನ ವಶಕ್ಕೆ ಪಡೆದಿದೆ. ಈ ಮೂಲಕ ಯುದ್ಧವು, ಭಾಗಶಃ ಮುಗಿದು ಹೋಗುವ ಹಂತಕ್ಕೆ ಬಂದಿದೆ ಅಂತ ವಿಶ್ಲೇಷಣೆ ಮಾಡಲಾಗುತ್ತಿದೆ. ಮತ್ತೊಂದು ಕಡೆಯಲ್ಲಿ ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ಪಡೆ ದಾಳಿಯ ಪರಿಣಾಮ ಒಟ್ಟು 8 ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಆಸ್ಪತ್ರೆಗಳಲ್ಲಿ ರೋಗಿಗಳ ಶವಗಳ ರಾಶಿ?
ಇಬ್ಬರ ನಡುವೆ ಯುದ್ಧ ನಡೆಯುವಾಗ, ಗಾಜಾಪಟ್ಟಿ ಆಸ್ಪತ್ರೆಗಳ ಪರಿಸ್ಥಿತಿ ಘೋರವಾಗಿದೆ. ಅದರಲ್ಲೂ ಅಲ್-ಶಿಫಾ ಆಸ್ಪತ್ರೆ ಪರಿಸ್ಥಿತಿ ಇನ್ನೂ ಘನಘೋರವಾಗಿದೆ. ಇಲ್ಲಿ ಆಸ್ಪತ್ರೆಯಲ್ಲಿ ನೂರಾರು ಶವಗಳು ಕೊಳೆತ ಸ್ಥಿತಿಗೆ ತಲುಪಿದ್ದ ಪರಿಣಾಮ, ಎಲ್ಲರನ್ನೂ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಗಾಜಾಪಟ್ಟಿ ಪರಿಸ್ಥಿತಿ ಅರ್ಥವಾಗುತ್ತದೆ. ಹಾಗೇ ಇದರ ಜೊತೆ ವಿದ್ಯುತ್ & ನೀರಿನ ಸಮಸ್ಯೆ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಾಡುತ್ತಿದೆ.

ಹೀಗೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ಮಧ್ಯೆ ನಡೆಯುತ್ತಿರುವ ಯುದ್ಧವು ಎಲ್ಲವನ್ನೂ ಹಾಳು ಮಾಡುತ್ತಿದೆ. ಅದರಲ್ಲೂ ಇಸ್ರೇಲ್ ಸೇನೆ ಆಸ್ಪತ್ರೆಗಳನ್ನು ಕೂಡ ಲೆಕ್ಕಿಸದೆ ಅಟ್ಯಾಕ್ ಮಾಡುತ್ತಿರುವುದು ಅಂತಾರಾಷ್ಟೀಯ ಮಟ್ಟದಲ್ಲಿ ಟೀಕೆಗೂ ಕಾರಣವಾಗಿದೆ. ಇನ್ನೊಂದು ಕಡೆ ಮಕ್ಕಳ ಸಾವಿನ ಪ್ರಮಾಣಕ್ಕೆ ವಿಶ್ವಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಯುದ್ಧವನ್ನು ನಿಲ್ಲಿಸಲು ಒತ್ತಡ ಕೇಳಿಬಂದರೂ, ಯುದ್ಧಕ್ಕೆ ಮಾತ್ರ ಇನ್ನೂ ವಿರಾಮವೇ ಬಿದ್ದಿಲ್ಲ.
ಭೀಕರ ಕಾಳಗ ಶುರುವಾಗಿದ್ದು ಹೇಗೆ?
ಕಳೆದ ತಿಂಗಳು ಅಂದರೆ, ಅಕ್ಟೋಬರ್ 7ಕ್ಕೆ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿ ಅಟ್ಟಹಾಸ ಮೆರೆದಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ, ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಸೇನೆ, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಇದೀಗ ಯುದ್ಧವು ಅಂತಿಮ ಹಂತ ತಲುಪುತ್ತಿದ್ದು, ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಯುದ್ಧದಲ್ಲಿ ನಲುಗಿ ಹೋಗಿರುವ ಜನ ಸಾಮಾನ್ಯರು ಜೀವ ಉಳಿಸಿಕೊಳ್ಳಲು ದಕ್ಷಿಣ ಗಾಜಾಪಟ್ಟಿಗೆ ಓಡಿ ಹೋಗುತ್ತಿದ್ದಾರೆ.












Click it and Unblock the Notifications