Israel & Gaza: ಗಾಜಾ ಪಟ್ಟಿಯಲ್ಲಿ ಮತ್ತೆ ಯುದ್ಧ ಶುರು? ಇಸ್ರೇಲ್ ಪ್ರಧಾನಿ ಹೇಳಿದ್ದೇನು?
ಗಾಜಾ ಪಟ್ಟಿಯಲ್ಲಿ ಜನರು ನೆಮ್ಮದಿಯಾಗಿ ಇರಲು ಆಗುತ್ತಿಲ್ಲ, ಯುದ್ಧ ನಿಂತೇ ಹೋಯಿತು ಅನ್ನುವಾಗಲೇ ಏನಾದರೂ ಒಂದು ಸಮಸ್ಯೆ ಎದುರಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಕಡೆ ಗಾಜಾ ಪಟ್ಟಿಯನ್ನು ಸ್ವಾದೀನಪಡಿಸಿ ಅಭಿವೃದ್ಧಿ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ಯುದ್ಧ ಶುರು ಮಾಡುವ ಹಿಂಟ್ ಕೊಟ್ಟಿದ್ದಾರೆ!
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕದನ ಈಗಾಗಲೇ ರಾಶಿ & ರಾಶಿ ಶವಗಳು ಬೀಳುವಂತೆ ಮಾಡಿತ್ತು. ಹೀಗಿದ್ದರೂ ಇಬ್ಬರು ಸೈಲೆಂಟ್ ಆಗದೆ ಬಡಿದಾಡುತ್ತಾ ಸುಮಾರು 15 ತಿಂಗಳ ಕಾಲ ಕಿತ್ತಾಡಿ ಸೈಲೆಂಟ್ ಆಗಿದ್ದರು. ಹೀಗೆ ಇಬ್ಬರ ನಡುವೆ ಯುದ್ಧ ನಿಂತು ಇನ್ನೂ 1 ತಿಂಗಳು ಕಳೆದಿಲ್ಲ, ಆಗಲೇ ಮತ್ತೊಮ್ಮೆ ಗಾಜಾ ಪಟ್ಟಿಯಲ್ಲಿ ಯುದ್ಧ ಮರು ಆರಂಭವಾಗುವ ಭಯ ಶುರುವಾಗಿದೆ. ಈಗಾಗಲೇ ನೋಡ ನೋಡುತ್ತಲೇ ಸಾವಿರಾರು ಜನ ಜೀವ ಬಿಟ್ಟಿದ್ದಾರೆ. ಇಷ್ಟಾದರೂ ತೃಪ್ತಿ ಸಿಕ್ಕಂತೆ ಕಾಣುತ್ತಿಲ್ಲ.

ಗಾಜಾ ಪಟ್ಟಿಯಲ್ಲಿ ಮತ್ತೆ ಯುದ್ಧ?
ಮಧ್ಯಪ್ರಾಚ್ಯ ನಲುಗಿ ಹೋಗಿದೆ, ಗಾಜಾ ಪಟ್ಟಿ ಯುದ್ಧದ ನಂತರ ಮಧ್ಯಪ್ರಾಚ್ಯ ದೇಶಗಳಿಗೆ ನೆಮ್ಮದಿಯೇ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಮಾಸ್ ಗಂಭೀರ ಆರೋಪ ಮಾಡಿದ್ದು, ಇಸ್ರೇಲ್ ಸೇನೆ ಗಾಜಾ ಪಟ್ಟಿಯಲ್ಲಿ ಕದನ ವಿರಾಮ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂಬ ಆರೋಪ ಹೊರಿಸಿದೆ. ಈ ಕಾರಣಕ್ಕೆ ನಾವು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲ್ಲ ಎಂದು ಪಟ್ಟು ಹಿಡಿದಿದೆ ಹಮಾಸ್. ಇದೇ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಮತ್ತೆ ಯುದ್ಧ ಶುರು ಮಾಡುವ ಮಾತನಾಡಿದ್ದಾರೆ.
ಶನಿವಾರದ ಒಳಗೆ ಬಾಕಿ ಉಳಿದ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಗಾಜಾ ಕದನ ವಿರಾಮ ಮುರಿದು ಬೀಳಲಿದೆ ಎಂದಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಈ ಮೂಲಕ ಮತ್ತೊಂದು ಸುತ್ತಿನ ತಿಕ್ಕಾಟಕ್ಕೂ ಇದೀಗ ವೇದಿಕೆ ಒದಗಿ ಬಂದಿದ್ದು, ಜಗತ್ತು ಮತ್ತೊಮ್ಮೆ ಗಾಜಾ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಾ? ಎನ್ನುವ ಆತಂಕ ಕಾಡತೊಡಗಿದೆ.
ಗಾಜಾ ಪಟ್ಟಿ ಖರೀದಿ ಮಾಡಲ್ಲ!
ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಗಾಜಾ ಪಟ್ಟಿ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ. ನಾವು ಗಾಜಾ ಖರೀದಿ ಮಾಡಲ್ಲ, ಆದರೆ ಗಾಜಾ ನಮ್ಮ ಹಿಡಿತಕ್ಕೆ ಸಿಗಲಿದೆ. ಗಾಜಾ ಪಟ್ಟಿಯನ್ನು ನಾವು ಖರೀದಿ ಮಾಡುವ ಅಗತ್ಯತೆ ಇಲ್ಲ, ಅಲ್ಲಿ ಖರೀದಿ ಮಾಡಲು ಈಗ ಏನು ಕೂಡ ಉಳಿದಿಲ್ಲ ಎಂದಿದ್ದಾರೆ ಡೊನಾಲ್ಡ್ ಟ್ರಂಪ್.
ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಯು ಸದ್ಯ ಮಧ್ಯಪ್ರಾಚ್ಯ ಸೇರಿದಂತೆ, ಇಡೀ ಜಗತ್ತಿನಲ್ಲಿ ಮತ್ತೊಂದು ಯುದ್ಧದ ಭೀತಿ ಹುಟ್ಟು ಹಾಕಿದೆ. ಹಾಗೇ ಈ ವಿಚಾರಕ್ಕೆ ಸದ್ಯ ಯಾವುದೆ ದೇಶ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಕಿಚ್ಚು ಹೊತ್ತಿಕೊಳ್ಳುವ ಆತಂಕ ಆವರಿಸಿದೆ.












Click it and Unblock the Notifications