G20 Summit: ರಷ್ಯಾ & ಇಂಡೋನೇಷ್ಯಾ ಜೊತೆ ಮಹತ್ವದ ಚರ್ಚೆ!
ಜಕಾರ್ತಾ: ಬಹುನಿರೀಕ್ಷಿತ & ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನ ಘಟಾನುಘಟಿ ನಾಯಕರು ಜಿ20 ಶೃಂಗಸಭೆಗಾಗಿ ಈಗ ಭಾರತದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಇದೇ ಹೊತ್ತಲ್ಲಿ ಭಾರತದ ವಿದೇಶಾಂಗ ಸಚಿವರು ರಷ್ಯಾ ಮತ್ತು ಇಂಡೋನೇಷ್ಯಾ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.
ಹೌದು, ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂಡೋನೇಷ್ಯಾ ಮತ್ತು ರಷ್ಯಾದ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಈ ವೇಳೆ ಜಿ20 ಶೃಂಗಸಭೆ & ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂಡೋನೇಷ್ಯಾದ ರೆಟ್ನೊ ಮಾರ್ಸುಡಿ ಮತ್ತು ರಷ್ಯಾದ ಸೆರ್ಗಿ ಲಾವ್ರೋವ್ ಅವರ ಜೊತೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಹತ್ವದ ಚರ್ಚೆ ನಡೆಸಿದ್ದಾರೆ. 20ನೇ ಆಸಿಯಾನ್-ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅವರು ಜಕಾರ್ತಾಗೆ ಬಂದಿದ್ದರು. ಇದೇ ವೇಳೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಪ್ರಧಾನಿ ಮೋದಿ ಎಂಟ್ರಿಗೆ ಕೌಂಟ್‌ಡೌನ್
ಒಂದ್ಕಡೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂಡೋನೇಷ್ಯಾ ಮತ್ತು ರಷ್ಯಾ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಾಗೇ ಇನ್ನೊಂದು ಕಡೆ ಪ್ರಧಾನಿ ಮೋದಿ ಅವರು ಕೂಡ ಇಲ್ಲಿಗೆ ಬರ್ತಿದ್ದಾರೆ. ಅಷ್ಟಕ್ಕೂ ಆಸಿಯಾನ್ ಅಧ್ಯಕ್ಷನಾಗಿ ಇಂಡೊನೇಷ್ಯಾ ಆಸಿಯಾನ್-ಇಂಡಿಯಾ ಶೃಂಗಸಭೆಯ ಆಯೋಜಿಸಿದೆ. ಹಾಗೇ ಮತ್ತೊಂದು ಮಹತ್ವದ ಸಭೆ ಕೂಡ ಇಲ್ಲಿ ನಡೆಯಲಿದೆ. ಅತ್ತ 20ನೇ ಆಸಿಯಾನ್-ಇಂಡಿಯಾ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಕೂಡ ಗುರುವಾರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
20ನೇ ಆಸಿಯಾನ್-ಇಂಡಿಯಾ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಯ ನಂತರ ಜಗತ್ತಿನ ಗಮನ ಭಾರತದ ಮೇಲೆ ಇರಲಿದೆ. ಏಕೆಂದರೆ ಬಹುನಿರೀಕ್ಷಿತ ಜಿ20 ಶೃಂಗಸಭೆಗಾಗಿ ಸಕಲ ಸಿದ್ಧತೆ ಸಾಗಿದೆ. ಜಿ20 ಶೃಂಗಸಭೆಯಲ್ಲಿ ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರಜಿಲ್ ಸೇರಿ ಕೆನಾಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ & ಐರೋಪ್ಯ ಒಕ್ಕೂಟಗಳು ಭಾಗವಹಿಸಲಿವೆ.

ರಷ್ಯಾ ಅಧ್ಯಕ್ಷರ ಗೈರು ಹಾಜರಿ
ಸೆಪ್ಟೆಂಬರ್ 9 & 10ರಂದು ರಾಜಧಾನಿ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಈಗಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ವಾರಂಟ್ ಇರುವ ಕಾರಣ ಬಂಧನದ ಭೀತಿ ಇದ್ದು. ಹೀಗಾಗಿಯೇ ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷರು ಕೂಡ ಬರುವುದಿಲ್ಲ. ಬದಲಾಗಿ ಚೀನಾ ಪ್ರಧಾನಿ ಬರುತ್ತಿದ್ದಾರೆ.
ಭಾರತ & ಅಮೆರಿಕ ದ್ವಿಪಕ್ಷೀಯ ಮಾತುಕತೆ
ಜಿ20 ಶೃಂಗಸಭೆ ಸೆಪ್ಟೆಂಬರ್ 9, 10 ರಂದು ನವದೆಹಲಿಯಲ್ಲಿ ನಡೆಯುತ್ತೆ. ಹೀಗಾಗಿ ಭಾರತ ಜಿ20 ನಾಯಕತ್ವ ವಹಿಸಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಬೈಡನ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಿದ್ದಾರೆ. ಅಲ್ಲದೆ ಜಿ20 ಶೃಂಗಸಭೆಗೂ 2 ದಿನ ಮೊದಲು ಅಂದ್ರೆ ಸೆಪ್ಟೆಂಬರ್ 7 ಕ್ಕೆ ಬೈಡನ್ ನವದೆಹಲಿಗೆ ಬರಲಿದ್ದಾರೆ. ಸೆಪ್ಟೆಂಬರ್ 8ರಂದು ಪಿಎಂ ಮೋದಿ ಅವರ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಜೋ ಬೈಡನ್. ಇದು ಭಾರತ & ಅಮೆರಿಕದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆ ಇದೆ.












Click it and Unblock the Notifications