ಅನ್ನ.. ಅನ್ನ.. ಅನ್ನ.. ಯುದ್ಧ ಭೂಮಿಯ ನರಳಾಟ..
ಗಾಜಾಪಟ್ಟಿ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ತುತ್ತು ಅನ್ನಕ್ಕೂ ನರಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾರೋ ಮಾಡಿದ ತಪ್ಪಿಗೆ ಸಾಮಾನ್ಯ ಜನರು ನರಳುತ್ತಿದ್ದಾರೆ ಎಂಬ ಆರೋಪದ ನಡುವೆ, ಸಂತ್ರಸ್ತ ಜನರಿಗೆ ಅಗತ್ಯ ನೆರವು ನೀಡಲು ಇಸ್ರೇಲ್ ಸೇನೆ ಗಾಜಾ ನಗರದಲ್ಲಿ ಸಹಾಯ ಮಾಡುತ್ತಿಲ್ಲ. ರಸ್ತೆ & ಗಡಿ ಪ್ರದೇಶ ಲಾಕ್ ಮಾಡಿ ಇಸ್ರೇಲ್ ತೊಂದರೆ ನೀಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಮತ್ತೊಂದು ಸ್ಫೋಟಕ ಆರೋಪ ಕೂಡ ಎದುರಾಗಿದೆ.
2023ರ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ & ಹಮಾಸ್ ನಡುವೆ ಯುದ್ಧ ಶುರುವಾಗಿತ್ತು. ಈ ಯುದ್ಧಕ್ಕೆ, ಗಾಜಾಪಟ್ಟಿ ನಗರ ಬಲಿಯಾಗಿ ಹೋಗಿದೆ. ಎಲ್ಲೇ ಹುಡುಕಿದರೂ ಒಂದು ತುತ್ತು ಅನ್ನ ಸಿಗುತ್ತಿಲ್ಲ. ಜನರಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಇದೇ ಸಮಯದಲ್ಲಿ ಭಾರಿ ದೊಡ್ಡ ಪ್ರಮಾಣದ ನೆರವು ನೀಡಲು ವಿಶ್ವಸಂಸ್ಥೆ ಮುಂದೆ ಬಂದಿದೆ. ಹೀಗಿದ್ದರೂ ಇಸ್ರೇಲ್ ಸೇನೆ ಮಾತ್ರ ಇದನ್ನ ಕೇರ್ ಮಾಡದೆ, ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಿಲ್ಲ ಎಂದು ತೀವ್ರ ಆಕ್ರೋಶ ಮೊಳಗಿದೆ. ಯಾರದ್ದೋ ತಪ್ಪಿಗೆ ಸಾಮಾನ್ಯ ಜನರಿಗೆ ಶಿಕ್ಷೆ ಯಾಕೆ? ಎಂಬ ಪ್ರಶ್ನೆ ಕೂಡ ಕೇಳಲಾಗುತ್ತಿದೆ.

ಗಡಿ ಪ್ರದೇಶದಲ್ಲಿ ನೆರವಿನ ಟ್ರಕ್
ಗಾಜಾ ನಗರದಿಂದ ಕೆಲವೇ ಕೆಲವು ಕಿಲೋ ಮೀಟರ್ ದೂರದ ಗಡಿ ಪ್ರದೇಶದಲ್ಲಿ ವಿಶ್ವಸಂಸ್ಥೆ ಕಳುಹಿಸಿರುವ ನೆರವಿನ ಟ್ರಕ್ ನಿಂತಿವೆ. ಈ ಟ್ರಕ್‌ಗಳಲ್ಲಿ ಅಗತ್ಯ ಸಾಮಾಗ್ರಿ ಹಾಗೂ ಸಂತ್ರಸ್ತ ಜನರಿಗೆ ಬೇಕಾದ ಆಹಾರ ಪದಾರ್ಥ ಇಡಲಾಗಿದೆ. ಆದರೆ ಇದನ್ನು ಗಾಜಾಪಟ್ಟಿ ನಗರದ ಕಡೆ ತೆಗೆದುಕೊಂಡು ಹೋಗಲು ಇಸ್ರೇಲ್ ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಇದೀಗ ಮತ್ತೊಮ್ಮೆ ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗಿದೆ. ಗಾಜಾ ನಗರದ ಸಂತ್ರಸ್ತ ಜನರ ಪೈಕಿ ಹಲವರು ಅನಾರೋಗ್ಯದಿಂದ ನರಳುತ್ತಿದ್ದು, ಅವರಿಗೆ ಔಷಧ ಬೇಕಾಗಿದೆ.
ಗಾಜಾ ನಗರ ನರಕವಾಗಿ ಬದಲಾಗಿದೆ
7 ತಿಂಗಳಿಂದ ಗಾಜಾದಲ್ಲಿ ಸಾಮಾನ್ಯ ಜನರು ನರಳುತ್ತಿದ್ದು ಈಗಾಗಲೇ 34,000ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಜೊತೆಗೆ ಲಕ್ಷ ಲಕ್ಷ ಜನ ಈಗ ಬೀದಿಪಾಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಈಗ ನಿಲ್ಲುತ್ತೆ ನಾಳೆ ನಿಲ್ಲುತ್ತೆ ಅಂತಾ ಜನ ಕಾಯುತ್ತಿದ್ದಾರೆ. ಆದ್ರೆ ಯಾವುದೂ ಈಡೇರುತ್ತಿಲ್ಲ, ಹೀಗಾಗಿ ಗಾಜಾ ಪಟ್ಟಿ ಜನರಿಗೆ ನಿಲ್ಲಲು ನೆಲೆ ಇಲ್ಲದೆ. ತಿನ್ನಲು ಆಹಾರ ಇಲ್ಲದೆ, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದಿದೆ. ಮುಂದೆ ಇದು ಜಾಗತಿಕ ಮಟ್ಟದಲ್ಲೂ ಭಾರಿ ದೊಡ್ಡ ಪರಿಣಾಮ ಬೀರುವ ಭಯ ಆವರಿಸಿದೆ.












Click it and Unblock the Notifications