ಕದನ ವಿರಾಮ ವಿಸ್ತರಣೆಗೆ ಇಸ್ರೇಲ್ & ಹಮಾಸ್ ಒಪ್ಪಿಗೆ?
50 ದಿನದಿಂದ ಭೀಕರವಾಗಿ ನಡೆಯುತ್ತಿರುವ ಇಸ್ರೇಲ್ VS ಹಮಾಸ್ ಯುದ್ಧವು ನಿಲ್ಲುವಂತೆ ಕಾಣುತ್ತಿದೆ. ಇದರ ಮೊದಲ ಭಾಗವಾಗಿ, ಕಳೆದ 4 ದಿನಗಳಿಂದ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೆ, ಕದನ ವಿರಾಮದ ಅವಧಿಯನ್ನ ಇನ್ನೂ 2 ದಿನಗಳ ಕಾಲ ವಿಸ್ತರಣೆ ಮಾಡಿ ಒತ್ತೆಯಾಳು ಬಿಡುಗಡೆಗೆ ಅವಕಾಶ ಮಾಡಿಕೊಡಲು ಇಬ್ಬರೂ ಒಪ್ಪಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್‌ನ ವಿರುದ್ಧ 5000 ರಾಕೆಟ್ ಉಡಾಯಿಸಿ, ಸಾವಿರಾರು ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರ ಹಾಗೂ ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 50 ದಿನ ಕಳೆದಿದೆ. ಹೀಗಿದ್ದಾಗ ಮೆಲ್ಲಗೆ ಯುದ್ಧ ನಿಲ್ಲಿಸುವ ಪ್ರಯತ್ನ ಕೂಡ ಆರಂಭವಾಗಿತ್ತು. ಕಳೆದ 4 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ಉಗ್ರರು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ನಿಲ್ಲಿಸಿದ್ದಾರೆ. ಹೀಗಿದ್ದಾಗ ಮತ್ತೆ 2 ದಿನ ಕಾಲ, ಕದನ ವಿರಾಮವನ್ನು ವಿಸ್ತರಣೆ ಮಾಡಲಾಗಿದೆ.

ಎಷ್ಟು ದಿನ ಕದನ ವಿರಾಮ?
ಈಗಿನ ಮಾಹಿತಿಯಂತೆ ಗಾಜಾ ಪಟ್ಟಿಯಲ್ಲಿ ಮಾನವೀಯ ಪರಿಹಾರ ಹಿನ್ನೆಲೆಯಲ್ಲಿ ಮುಂದೆ 2 ದಿನಗಳ ಕಾಲ ಕದನ ವಿರಾಮ ವಿಸ್ತರಣೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಹೀಗೆ ಕದನ ವಿರಾಮಕ್ಕೆ ಇಸ್ರೇಲ್ ನಾಯಕರು & ಹಮಾಸ್ ಬಂಡುಕೋರರು ಒಪ್ಪಿಗೆ ನೀಡಿದ್ದಾರೆಂದು ವರದಿಯಾಗಿದೆ. ಒಂದು ಕಡೆ ಹಮಾಸ್ ಉಗ್ರರು ಇನ್ನೂ 4 ದಿನಗಳ ಕದನ ವಿರಾಮ ವಿಸ್ತರಣೆಗೆ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನ ಒಪ್ಪದ ಇಸ್ರೇಲ್ ಒಂದು ದಿನ ಬಿಟ್ಟು ಮತ್ತೊಂದು ದಿನ ಎಂಬಂತೆ ಕದನ ವಿರಾಮ ವಿಸ್ತರಣೆಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಸಾವಿನ ಸಂಖ್ಯೆ ಎಷ್ಟು ಗೊತ್ತಾ?
ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ ಕಳೆದ 50 ದಿನದಲ್ಲಿ ಗಾಜಾಪಟ್ಟಿಯ ಜನ್ರು ನರಳುತ್ತಿದ್ದು ಈಗಾಗಲೇ 14,000ಕ್ಕೂ ಹೆಚ್ಚು ಗಾಜಾಪಟ್ಟಿ ಜನರು ಯುದ್ಧಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಇಸ್ರೇಲ್ ಕೂಡ 1,200 ಜನರನ್ನು ಕಳೆದುಕೊಂಡಿದೆ. ಹೀಗೆ ಕೇವಲ 50 ದಿನದ ಅಂತರದಲ್ಲಿ ಇಷ್ಟೊಂದು ಸಾವು ನೋಡಿದ್ದ ಜಗತ್ತಿಗೆ ಚಿಂತೆ ಶುರುವಾಗಿತ್ತು. ಅಕಸ್ಮಾತ್ ಈ ಯುದ್ಧ ಮುಂದೆ ಮತ್ತೊಂದು ಮಹಾಯುದ್ಧವಾಗಿಬಿಟ್ರೆ? ಎನ್ನುವ ಚಿಂತೆಯೇ ಕಾಡುತ್ತಿತ್ತು. ಆದರೆ ಯುದ್ಧವೇ ಸಂಪೂರ್ಣವಾಗಿ ನಿಲ್ಲುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಜಗತ್ತು ಈ ಸಮಯದಲ್ಲೇ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣವಾಗಿದೆ.

ಗಾಜಾಪಟ್ಟಿಗೆ ಇಸ್ರೇಲ್ ಪ್ರಧಾನಿ ಭೇಟಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಿಢೀರ್ ಶತ್ರು ದೇಶದ ನೆಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಸ್ರೇಲ್ ಸೇನೆ ಈಗ ಹಮಾಸ್ ಆಡಳಿತದ ಗಾಜಾ ಪಟ್ಟಿ ಮೇಲೆ ಭೂ ದಾಳಿಯನ್ನ ಮಾಡಿ ಭಾಗಶಃ ಗಾಜಾ ನಗರವನ್ನ ವಶಕ್ಕೆ ಪಡೆದುಕೊಂಡಿದೆ. ಇದೇ ಸಮಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಿಢೀರ್ ಶತ್ರು ದೇಶದ ನೆಲ, ಅಂದರೆ ಗಾಜಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್‌ನ ಸೈನಿಕರಿಗೆ ಬೆಂಜಮಿನ್ ನೆತನ್ಯಾಹು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಯುದ್ಧ ಮುಂದುವರಿಯುತ್ತಾ? ಇಲ್ಲ ನಿಲ್ಲುತ್ತಾ? ಎಂಬ ಟ್ರಿಲಿಯನ್ ಡಾಲರ್ ಪ್ರಶ್ನೆ ಪ್ರಪಂಚವನ್ನೇ ಕಾಡುತ್ತಿದೆ.
ಹೀಗೆ ಒಂದು ಯುದ್ಧ ಕಳೆದ 50 ದಿನದಲ್ಲಿ ಮನುಷ್ಯರಿಗೆ ಮತ್ತೊಂದು ಪಾಠ ಕಲಿಸಿದೆ. ಈ ಮಧ್ಯೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವೂ ನಿಲ್ಲಬೇಕಿದೆ. ಹಾಗೂ ಜಗತ್ತಿನಲ್ಲಿ ಮತ್ತೆ ಯುದ್ಧಗಳ ಸಹವಾಸಕ್ಕೆ ಮನುಷ್ಯ ಹೋಗಲೇಬಾರದು ಎನ್ನುವ ವಾದವು ಈಗ ಕೇಳಿಬರುತ್ತಿದೆ. ಅಕಸ್ಮಾತ್ ಮತ್ತೊಂದು ಮಹಾಯುದ್ಧ ನಡೆದರೆ ಭೂಮಿ ಸಂಪೂರ್ಣ ನಾಶವಾಗುವ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ ತಜ್ಞರು. ಹೀಗಾಗಿ ಸಣ್ಣ, ಸಣ್ಣ ಯುದ್ಧ ಕೂಡ ಮುಂದೆ ಮಹಾಯುದ್ಧವಾಗಿ ಬದಲಾಗುವ ಭಯ ಕಾಡುತ್ತಿದೆ. ಯಾಕಂದ್ರೆ ಭೂಮಿ ಮೇಲೆ ನಡೆದ 1ನೇ ಮಹಾಯುದ್ಧ & 2ನೇ ಮಹಾಯುದ್ಧಗಳು ಕೂಡ ಇದೇ ರೀತಿ ಕೋಳಿ ಜಗಳದ ರೀತಿ ಶುರುವಾಗಿದ್ದವು. ಹೀಗಾಗಿ ಮುಂದೆ ಮತ್ತೊಂದು ಮಹಾಯುದ್ಧ ಮಾನವರ ಬದುಕಿಗೆ ಬರಬಾರದೆಂಬ ಆಗ್ರಹ ಕೇಳಿಬರುತ್ತಿದೆ.












Click it and Unblock the Notifications