ಕ್ಷಣ ಮಾತ್ರದಲ್ಲಿ 34.4 ಲಕ್ಷ ಕೋಟಿ ರೂ. ಕಳ್ಕೊಂಡ ಎಲಾನ್ ಮಸ್ಕ್, ಕಾರಣವೇನು
ವಿಶ್ವದ ಆಗರ್ಭ ಶ್ರೀಮಂತ, ಎಕ್ಸ್ ಸೇರಿದಂತೆ ವಿವಿಧ ಬೃಹತ್ ಉದ್ಯಮಗಳ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಕೆಲವೇ ಕ್ಷಣಗಳಲ್ಲಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಯು ಸೋಮವಾರ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ಏಕದಿನ ಮಾರುಕಟ್ಟೆ ಮೌಲ್ಯ ಕುಸಿತಗಳಲ್ಲಿ ಒಂದನ್ನು ದಾಖಲಿಸಿದೆ. ಇದರಿಂದ ಕೆಲವೇ ಕ್ಷಣಗಳಲ್ಲಿ ಎಲಾನ್ ಮಸ್ಕ್ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಅಮೆರಿಕದಲ್ಲಿ ಬಡ್ಡಿದರ ಹೆಚ್ಚಳದ ನಿರೀಕ್ಷೆಗಳು ತಂತ್ರಜ್ಞಾನ ಕಂಪನಿಗಳ ಷೇರುಗಳ ಭಾರೀ ಮಾರಾಟಕ್ಕೆ ಕಾರಣವಾಗಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ಕಂಪನಿಗಳ ಮೇಲಿನ ಹೂಡಿಕೆದಾರರ ಉತ್ಸಾಹಕ್ಕೂ ತಣ್ಣೀರು ಎರಚಿವೆ. ಇದರ ಪರಿಣಾಮವಾಗಿ ಸ್ಪೇಸ್‌ಎಕ್ಸ್‌ನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 400 ಬಿಲಿಯನ್ ಡಾಲರ್ (ಸುಮಾರು 34.4 ಲಕ್ಷ ಕೋಟಿ ರೂಪಾಯಿ) ನಷ್ಟವಾಗಿದೆ ಎಂದು ವರದಿಯಾಗಿದೆ.
ಕೇವಲ 10 ದಿನಗಳ ಹಿಂದಷ್ಟೇ ಸುಮಾರು 2 ಟ್ರಿಲಿಯನ್ ಡಾಲರ್ (ಸುಮಾರು 172 ಲಕ್ಷ ಕೋಟಿ ರೂಪಾಯಿ) ಮೌಲ್ಯವನ್ನು ಮುಟ್ಟುವ ಹಂತಕ್ಕೆ ತಲುಪಿದ ಮೊದಲ ಕಂಪನಿಯಾಗಿ ಸ್ಪೇಸ್‌ಎಕ್ಸ್ ಗುರುತಿಸಿಕೊಂಡಿತ್ತು. ಆದರೆ ಇದೀಗ ಭಾರೀ ನಷ್ಟವನ್ನು ಮೈ ಮೇಲೆ ಎಳೆದುಕೊಂಡಿದೆ. ರಾಕೆಟ್ ಮತ್ತು AI ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಕಂಪನಿಯ ಷೇರುಗಳು ಶೇ. 16.4 ಕುಸಿದಿದ್ದು, 154.60 ಡಾಲರ್‌ಗೆ (ಸುಮಾರು 13,300) ವಹಿವಾಟು ಮುಗಿಸಿವೆ. ಇದು ಸತತ ಮೂರನೇ ದಿನದ ಕುಸಿತವಾಗಿದ್ದು, ಭರ್ಜರಿ ಐಪಿಒ ಬಳಿಕ ದಾಖಲಿಸಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಷೇರು ಮೌಲ್ಯವು ಈಗಾಗಲೇ ಶೇ. 31.5 ರಷ್ಟು ಇಳಿಕೆ ಆಗಿದೆ ಎಂದು ವರದಿಯಾಗಿದೆ.

ಬ್ಲೂಂಬರ್ಗ್ ದತ್ತಾಂಶವನ್ನು ಆಧರಿಸಿದ ಫೈನಾನ್ಷಿಯಲ್ ಟೈಮ್ಸ್ ವಿಶ್ಲೇಷಣೆಯ ಪ್ರಕಾರ, 400 ಬಿಲಿಯನ್ ಡಾಲರ್ ಮೌಲ್ಯದ ಈ ನಷ್ಟವು ವಿಶ್ವದ ಯಾವುದೇ ಕಂಪನಿಯು ದಾಖಲಿಸಿದ ಅತಿದೊಡ್ಡ ಏಕದಿನ ಮಾರುಕಟ್ಟೆ ಮೌಲ್ಯ ಕುಸಿತಗಳಲ್ಲಿ ಎರಡನೇ ಅತಿದೊಡ್ಡದು ಅಂತಲೇ ಹೇಳಲಾಗಿದೆ. ಎಲಾನ್ ಮಸ್ಕ್ ಅವರು ಈ ಹಿಂದೆಯೂ ಹಲವು ಭಾರೀ ಮೊತ್ತದ ನಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಈ ಬಾರಿ ಆಗಿರುವ ನಷ್ಟವು ಭಾರೀ ಮೊತ್ತದ್ದಾಗಿದೆ ಎಂದೇ ಹೇಳಲಾಗಿದೆ.
ವಾಲ್ ಸ್ಟ್ರೀಟ್‌ನಲ್ಲಿ AI ಹೂಡಿಕೆಗಳ ಹೊಸ ಆಶಾಕಿರಣವಾಗಿ ಗುರುತಿಸಿಕೊಂಡಿದ್ದ ಸ್ಪೇಸ್‌ಎಕ್ಸ್‌ಗೆ ಈ ಬೆಳವಣಿಗೆ ದೊಡ್ಡ ಹಿನ್ನಡೆಯಾಗಿದೆ. ಕಂಪನಿ ಷೇರು ಮಾರುಕಟ್ಟೆಗೆ ಬಂದ ಬಳಿಕ ಅದರ ಷೇರುಗಳನ್ನು ಖರೀದಿಸಲು ಮುಗಿಬಿದ್ದಿದ್ದ ಹೂಡಿಕೆದಾರರು, ಈಗ ಹೆಚ್ಚುತ್ತಿರುವ ಬಡ್ಡಿದರಗಳು, ಕಂಪನಿಯ ಅತಿಯಾದ ಸಂಕಷ್ಟ ಮತ್ತು AI ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿರುವ ಭಾರಿ ಮೊತ್ತವನ್ನು ನೋಡಿ, ನಿಜವಾಗಿಯೂ ನಿರೀಕ್ಷಿತ ಲಾಭ ತಂದುಕೊಡುತ್ತವೆಯೇ ಎಂಬ ಅನುಮಾನದಲ್ಲಿ ಸಿಲುಕಿದ್ದಾರೆ.
ಎಲಾನ್ ಮಸ್ಕ್ ಅವರು ಒಂದೇ ದಿನದಲ್ಲಿ 400 ಬಿಲಿಯನ್ ಡಾಲರ್ (34.4 ಲಕ್ಷ ಕೋಟಿ ರೂ.) ಮೌಲ್ಯದ ನಷ್ಟವನ್ನು ಅನುಭವಿಸಿದ್ದಾರೆ. ಸ್ಪೇಸ್‌ಎಕ್ಸ್‌ನ ಭವಿಷ್ಯದ ಬೆಳವಣಿಗೆಗೆ ಹೂಡಿಕೆದಾರರು ಎಷ್ಟು ಬೆಲೆ ನೀಡಲು ಸಿದ್ಧರಿದ್ದಾರೆ ಎನ್ನುವುದು ಈಗ ಎದುರಾಗಿರುವ ಪ್ರಶ್ನೆಯಾಗಿದೆ.












Click it and Unblock the Notifications