ನರೇಂದ್ರ ಮೋದಿ ನೋಡಲು ಬ್ಯೂಟಿಫುಲ್ ಆದರೆ ಬೆಂಕಿ: ಡೊನಾಲ್ಡ್ ಟ್ರಂಪ್
ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದ್ವಿಪಕ್ಷೀಯ ಮಾತುಕತೆ ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಈ ಮಾತುಕತೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಯವರನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡಿಹೊಗಳಿದ್ದಾರೆ. "ಮೋದಿ ನೋಡಲು ವಿಶ್ವದ ಅತ್ಯಂತ ಸುಂದರ ವ್ಯಕ್ತಿ, ದೇವದೂತನಂತೆ ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಅವರು ಕಿಲ್ಲರ್‌ನಷ್ಟೇ ಕಠಿಣ ವ್ಯಕ್ತಿ" ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವೆ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಟ್ರಂಪ್ ಈ ಹೇಳಿಕೆ ನೀಡಿದರು. ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ಹಂತಕ್ಕೆ ತಲುಪಿವೆ ಎಂದು ಸುಳಿವು ನೀಡಿದ ಅವರು, ವ್ಯಾಪಾರ ಒಪ್ಪಂದಗಳಲ್ಲಿ ಪ್ರಧಾನಿ ಮೋದಿ ಅತ್ಯಂತ ಕಠಿಣ ಚೌಕಾಸಿದಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. "ನಾವು ಸಾಕಷ್ಟು ಸಮಯದಿಂದ ಈ ಬಗ್ಗೆ ಚರ್ಚಿಸುತ್ತಿದ್ದೇವೆ. ಅವರು (ಮೋದಿ) ಚೌಕಾಸಿ ಮಾಡುವುದರಲ್ಲಿ ಬಹಳ ಜೋರು. ನಾನು ನೋಡಿದ ಅತ್ಯಂತ ದೃಢ ವ್ಯಕ್ತಿಗಳಲ್ಲಿ ಅವರೂ ಒಬ್ಬರು" ಎಂದು ಟ್ರಂಪ್ ಹೇಳಿದರು.

ಮೋದಿ ನೋಡಲು ದೇವದೂತ
ಮಾತು ಮುಂದುವರಿಸಿದ ಅಮೆರಿಕ ಅಧ್ಯಕ್ಷ, "ಮೋದಿ ನೋಡಲು ದೇವದೂತನಂತೆ ಬಹಳ ಸುಂದರವಾಗಿ ಕಾಣುತ್ತಾರೆ. ಹಾಗಾಗಿ ಅವರು ನೋಡಲು ಬಹಳ ಒಳ್ಳೆಯವರು ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಜನರೂ ಕೂಡ ಅವರು ಬಹಳ ಒಳ್ಳೆಯ ಮನುಷ್ಯ ಎಂದು ಹೇಳುತ್ತಾರೆ. ಆದರೆ ನಾನು ಹೇಳುತ್ತೇನೆ, ಅವರು ವಾಸ್ತವದಲ್ಲಿ ಒಬ್ಬ ಕಿಲ್ಲರ್‌ನಷ್ಟೇ ಜೋರು. ತಮ್ಮ ನಗು ಮುಖದ ಹಿಂದೆಯೇ ಅವರು ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಮೋದಿಯವರಂತಹ ನಾಯಕರು ಜಗತ್ತಿನಲ್ಲಿ ಬಹಳ ವಿರಳ. ಅವರು ಕೇವಲ ಭಾರತದ ಜನರನ್ನು ಮಾತ್ರವಲ್ಲ, ಅಮೆರಿಕವನ್ನೂ ಪ್ರೀತಿಸುತ್ತಾರೆ" ಎಂದು ನಗುಮೊಗದಿಂದಲೇ ಬಣ್ಣಿಸಿದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ ಅವರು ನಗುತ್ತಾ ಎಲ್ಲವನ್ನೂ ಆಲಿಸಿದರು.
ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಭದ್ರತಾ ಸಂಬಂಧಗಳ ಕುರಿತು ಮಾತನಾಡಿದ ಟ್ರಂಪ್, ಭಾರತದ ಬೆಂಬಲಕ್ಕೆ ಸದಾ ನಿಲ್ಲುವ ಭರವಸೆ ನೀಡಿದರು. "ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ಅಮೆರಿಕವು ಸಹಾಯಕ್ಕೆ ಬರಲಿದೆ. ಮೋದಿಯವರು ನಾಯಕರಾಗಿರುವವರೆಗೂ, ಶ್ವೇತಭವನದಲ್ಲಿ ಅವರಿಗೆ ಉತ್ತಮ ಸ್ನೇಹಿತನಿದ್ದಾನೆ" ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಜೊತೆಗೆ, ಭವಿಷ್ಯದಲ್ಲಿ ತಾನು ಮತ್ತೆ ಭಾರತಕ್ಕೆ ಭೇಟಿ ನೀಡುವುದಾಗಿಯೂ ಅವರು ಘೋಷಿಸಿದರು. ಹೌಡಿ ಮೋದಿ ಹಾಗೂ ನಮಸ್ತೆ ಟ್ರಂಪ್ ಕಾರ್ಯಕ್ರಮಗಳ ಅದ್ಧೂರಿತನವನ್ನು ಟ್ರಂಪ್ ಇದೇ ವೇಳೆ ಸ್ಮರಿಸಿಕೊಂಡರು.
ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಕೇವಲ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತ್ರವಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟು ಹಾಗೂ ಸಮುದ್ರಯಾನಿಗಳ ಸುರಕ್ಷತೆಯ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು. ಜಾಗತಿಕ ಆರ್ಥಿಕತೆಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿ ಮುಕ್ತವಾಗಿರಿಸುವುದು ಎಷ್ಟು ಅಗತ್ಯ ಎಂಬುದನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಬೇಕೆಂದು ಮೋದಿ ಅಮೆರಿಕ ಅಧ್ಯಕ್ಷರನ್ನು ಒತ್ತಾಯಿಸಿದರು.
ಮೋದಿಯವರ ಈ ಕಾಳಜಿಗೆ ಸ್ಪಂದಿಸಿದ ಡೊನಾಲ್ಡ್ ಟ್ರಂಪ್, ನಾವಿಕರ ಸುರಕ್ಷತೆ ಬಹಳ ಮುಖ್ಯ ಎಂದರು. ಅಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಭಾರತದ ಪಾತ್ರ ಬಹಳ ದೊಡ್ಡದು ಎಂದು ಪ್ರಶಂಸಿಸಿದರು. ಜಾಗತಿಕ ವಿಚಾರಗಳಲ್ಲಿ ಮೋದಿಯವರ ನಾಯಕತ್ವವು ಭಾರತಕ್ಕೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೇ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು. ಒಟ್ಟಾರೆಯಾಗಿ ಜಿ7 ಶೃಂಗಸಭೆಯಲ್ಲಿ ಟ್ರಂಪ್ ಆಡಿದ ಮಾತುಗಳು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಮತ್ತು ಪ್ರಧಾನಿ ಮೋದಿಯವರ ಬಲಿಷ್ಠ ನಾಯಕತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.












Click it and Unblock the Notifications